ಬೆಂಗಳೂರು: ನಾಳೆಯಿಂದ ಅನ್ವಯವಾಗುವಂತೆ ಸ್ಟಾರ್ ಏರ್ (Star Air) ವಿಮಾನಯಾನ ಸಂಸ್ಥೆ ಬೆಂಗಳೂರು-ಬೀದರ್- ಬೆಂಗಳೂರು ನಡುವಿನ ವೇಳಾಪಟ್ಟಿಯಲ್ಲಿ ಸಮಯ ಬದಲಾವಣೆ ಮಾಡಿರುವುದಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ (Eshwar Khandre) ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿಯವರಿಗೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರಿಗೆ ಪತ್ರ ಬರೆದಿರುವ ಅವರು, ಈ ಹಿಂದೆ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 6:30ಕ್ಕೆ ಹಾರಾಟ ಆರಂಭಿಸುತ್ತಿದ್ದ 84 ಆಸನಗಳ ವಿಮಾನ 7:45ಕ್ಕೆ ಬೀದರ್ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿತ್ತು. ಬಳಿಕ ಬೆಳಗ್ಗೆ 8:15ಕ್ಕೆ ಬೀದರ್‌ನಿಂದ ಹಾರಾಟ ಆರಂಭಿಸಿ ಬೆಳಗ್ಗೆ 9:30ಕ್ಕೆ ಬೆಂಗಳೂರಿಗೆ ಆಗಮಿಸುತ್ತಿತ್ತು. ಇದು ಬೀದರ್ ಮತ್ತು ಸುತ್ತಮುತ್ತಲ ಜಿಲ್ಲೆಗಳ ಹಾಗೂ ನೆರೆಯ ತೆಲಂಗಾಣದ ವಿಮಾನಯಾನ ಪ್ರಯಾಣಿಕರಿಗೆ, ವ್ಯಾಪಾರಸ್ಥರಿಗೆ ಮತ್ತು ಪ್ರವಾಸಿಗರಿಗೆ ಅನುಕೂಲಕರವಾಗಿತ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮುಯ್ ಥಾಯ್ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಎಎಸ್‌ಐ ಪುತ್ರ
ಬೀದರ್ ವಿಮಾನ ನಿಲ್ದಾಣ ಭಾರತೀಯ ವಾಯುಪಡೆಗೆ ಸೇರಿದ್ದು, ಈ ಹಿಂದೆ ಇದ್ದ ಬೆಳಗಿನ ವೇಳಾಪಟ್ಟಿಗೆ ರಕ್ಷಣಾ ಇಲಾಖೆ ಮತ್ತು ಕೇಂದ್ರ ಸರ್ಕಾರದ ನಾಗರಿಕ ವಿಮಾನಯಾನ ಸಚಿವಾಲಯ ತನ್ನ ಅನಮತಿ ನೀಡಿತ್ತು. ಆದರೆ, ಸ್ಟಾರ್ ಏರ್ ಸಂಸ್ಥೆ ಈಗ ಏಕಾ ಏಕಿ ವೇಳಾಪಟ್ಟಿಯನ್ನು ಬದಲಾವಣೆ ಮಾಡಿ, ಜೂ.10ರಿಂದ ಮಧ್ಯಾಹ್ನ 12:30ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಿಂದ ಹಾರಾಟ ಆರಂಬಿಸಿ 1:45ಕ್ಕೆ ಬೀದರ್‌ಗೆ ಬರಲಿದೆ. ಮತ್ತೆ ಬೀದರ್‌ನಿಂದ ಮಧ್ಯಾಹ್ನ 2:30ಕ್ಕೆ ಹೊರಟು ಬೆಂಗಳೂರಿಗೆ 3:30ಕ್ಕೆ ತಲುಪಲಿದೆ. ಈ ವೇಳಾಪಟ್ಟಿಯಿಂದ ಯಾವುದೇ ಪ್ರಯಾಣಿಕರಿಗೆ ಅನುಕೂಲ ಆಗುವುದಿಲ್ಲ. ಇದರಿಂದಾಗಿ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗುವ ಸಾಧ್ಯತೆಯೂ ಇದೆ ಎಂದಿದ್ದಾರೆ. ಇದನ್ನೂ ಓದಿ: ಮಂಗಳೂರಿನ ಉದ್ಯಮಿಗೆ ಕಾಂಗ್ರೆಸ್ ಮುಖಂಡನಿಂದ ಹನಿಟ್ರ್ಯಾಪ್; 2.22 ಕೋಟಿ ಹಣ ದೋಚಿ ಬ್ಲ್ಯಾಕ್‌ಮೇಲ್
ಜೊತೆಗೆ ಸರ್ಕಾರ ಮತ್ತು ಕೆಕೆಆರ್‌ಡಿಬಿಯಿಂದ ನೀಡುತ್ತಿರುವ ವಿಜಿಎಫ್ ನಿಷ್ಪ್ರಯೋಜಕವಾಗುತ್ತದೆ. ಹೀಗಾಗಿ ಮತ್ತೆ ಹಳೆಯ ವೇಳಾಪಟ್ಟಿಯಂತೆಯೇ ವಿಮಾನಯಾನ ಸೇವೆ ಒದಗಿಸಲು ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರ ಉಡಾನ್ ಯೋಜನೆಯಡಿ ನೀಡುತ್ತಿದ್ದ ಸಬ್ಸಿಡಿಯನ್ನು ನಿಲ್ಲಿಸಿದ ಕಾರಣದಿಂದ ಬೆಂಗಳೂರು-ಬೀದರ್-ಬೆಂಗಳೂರು ನಾಗರಿಕ ವಿಮಾನಯಾನ ಸೇವೆ, ಒಂದೂವರೆ ವರ್ಷಕಾಲ ಸ್ಥಗಿತವಾಗಿತ್ತು. ರಾಜ್ಯ ಸರ್ಕಾರವೇ ವೆಚ್ಚ ಸರಿದೂಗಿಸುವ ನಿಧಿ (ವಿಜಿಎಫ್) ಒದಗಿಸುತ್ತಿರುವ ಹಿನ್ನೆಲೆಯಲ್ಲಿ ಮೊದಲಿಗೆ 2025ರ ಏಪ್ರಿಲ್ 16ರಿಂದ ಈ ವಿಮಾನಯಾನ ಸೇವೆಯನ್ನು ಪುನಾರಂಭಿಸಿತ್ತು. ಆದರೆ ಒಂದು ವರ್ಷ ಅವಧಿ ಪೂರ್ಣವಾದ ಹಿನ್ನೆಲೆಯಲ್ಲಿ 2026ರ ಏಪ್ರಿಲ್ 14ರಿಂದ ಮತ್ತೆ ಸ್ಥಗಿತಗೊಂಡಿತ್ತು ಎಂಬುದನ್ನೂ ಸ್ಮರಿಸಿದ್ದಾರೆ. ಇದನ್ನೂ ಓದಿ: ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ವಿರುದ್ಧ ದಾಖಲಾಗಿದ್ದ FIR ರದ್ದು
ಕಳೆದ ಮೇ 5ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಕೆಆರ್‌ಡಿಬಿ ಮತ್ತು ರಾಜ್ಯ ಸರ್ಕಾರದ ವತಿಯಿಂದ 13.48 ಕೋಟಿ ರೂ.ಗಳನ್ನು ವಯಬಲಿಟಿ ಗ್ಯಾಪ್ ಫಂಡ್ (ವಿಜಿಎಫ್) ಒದಗಿಸಲು ಸಮ್ಮತಿಸಿದ ಹಿನ್ನೆಲೆಯಲ್ಲಿ 2026ರ ಜೂನ್ 1ರಿಂದ ವಿಮಾನಯಾನ ಸೇವೆ ಪುನಾರಂಭವಾಗಿತ್ತು ಎಂದೂ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿ ಅಗ್ನಿ ದುರಂತ: ಒಂದೇ ಕುಟುಂಬದ 8 ಮಂದಿ ಮೃತಪಟ್ಟ ಬೆನ್ನಲ್ಲೇ ಇದ್ದೊಬ್ಬ ಹಿರಿಯ ನಿಧನ
