ಶಿಮ್ಲಾ: ಇಂದು ಹಿಮಾಚಲ ಪ್ರದೇಶ ವಿಧಾನಸಭೆಯ (Himachal Assembly) ಫಲಿತಾಂಶವು ಪ್ರಕಟವಾಗಿದ್ದು, ಕಾಂಗ್ರೆಸ್ (Congress) ಬಹುಮತ ಪಡೆದಿದೆ. ಆದರೆ 68 ಸದಸ್ಯ ಬಲದ ಈ ವಿಧಾನಸಭೆಯಲ್ಲಿ ಓರ್ವ ಮಹಿಳೆ ಮಾತ್ರ ಶಾಸಕಿಯಾಗಿ (Woman MLA) ಆಯ್ಕೆ ಆಗಿದ್ದಾರೆ.
ಹಿಮಾಚಲ ಪ್ರದೇಶದ ವಿಧಾನಸಭೆಯ ಚುನಾವಣೆಯು ನ. 12ರಂದು ನಡೆಯಿತು. ಈ ವೇಳೆ 24 ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬಿಜೆಪಿಯಿಂದ ( BJP) 6, ಆಪ್ನಿಂದ (Aam Aadmi Party) 5 ಹಾಗೂ ಕಾಂಗ್ರೆಸ್ನಿಂದ ಮೂವರು ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದರು. ಆದರೆ ಇಂದು ಪ್ರಕಟವಾದ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿಯ ರೀನಾ ಕಶ್ಯಪ್ ಮಾತ್ರ ಗೆಲುವು ಸಾಧಿಸಿದ್ದಾರೆ. 2021ರಲ್ಲಿ ಪಚಾಡ್ ವಿಧಾನಸಭಾ ಉಪಚುನಾವಣೆಯಲ್ಲಿ ಗೆದ್ದಿದ್ದ ರೀನಾ ಕಶ್ಯಪ್ ಅವರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. 2017ರ ವಿಧಾನಸಭೆ ಚುನಾವಣೆಯಲ್ಲಿ ನಾಲ್ವರು ಮಹಿಳಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.
ಕುತೂಹಲಕಾರಿ ಅಂಶವೆಂದರೆ 1998ರ ಮತದಾನದಿಂದ ಪುರುಷ ಮತದಾರರಿಗಿಂತ ಮಹಿಳಾ ಮತದರರ ಸಂಖ್ಯೆ ಹೆಚ್ಚಿದೆ. ಅಷ್ಟೇ ಅಲ್ಲದೇ ಕಳೆದ ಐದು ಚುನಾವಣೆಗಳಲ್ಲಿ ಈ ಪ್ರವೃತ್ತಿ ಮುಂದುವರಿದಿದೆ. ಇದಕ್ಕೆ ಉದಾಹರಣೆ ಎಂಬಂತೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 76.8 ಪ್ರತಿಶತ ಮಹಿಳಾ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದು, 72.4 ಪ್ರತಿಶತ ಪುರುಷ ಮತದಾರರು ಮತವನ್ನು ಹಾಕಿದರು. ಇದನ್ನೂ ಓದಿ: ಬೆಂಗ್ಳೂರು ಹೊರವಲಯದಲ್ಲಿ ಆಂಧ್ರ ಬಿಲ್ಡರ್ಗೆ ಗುಂಡೇಟು
ಒಟ್ಟಾರೆಯಾಗಿ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಕಾಂಗ್ರೆಸ್ ಜಯಭೇರಿ ಸಾಧಿಸಿದೆ. ಕಾಂಗ್ರೆಸ್ 40, ಬಿಜೆಪಿ 25 ಹಾಗೂ ಪಕ್ಷೇತರ ಅಭ್ಯರ್ಥಿಗಳು 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: ಗುಜರಾತ್ನಲ್ಲಿ 7ನೇ ಬಾರಿಗೆ ಬಿಜೆಪಿಗೆ ಅಧಿಕಾರ – ಅಧಿಕೃತ ವಿಪಕ್ಷ ಸ್ಥಾನವನ್ನೂ ಕಳೆದುಕೊಂಡ ಕಾಂಗ್ರೆಸ್