ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ (ED) ದಾಳಿ ಇಂದು (ಸೆ.10) ಮುಂಜಾನೆಯಿಂದಲೇ ಮುಂದುವರಿದಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘಿಸಿ ವಿದೇಶದಲ್ಲಿ ಅಕ್ರಮವಾಗಿ ಹಣ ಹೂಡಿಕೆ ಮಾಡಿರುವ ಆರೋಪದ ಮೇಲೆ ಇಡಿ ಅಧಿಕಾರಿಗಳು 18 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದರು. ತಡರಾತ್ರಿ ತನಕ ಸಚಿವರನ್ನು ಅಧಿಕಾರಿಗಳು ವಿಚಾರಣೆ ನಡೆಸಿದರು. ಊಟದ ಬ್ರೇಕ್ ಬಳಿಕ ಸಹ ವಿಚಾರಣೆ ನಡೆಸಲಾಗಿತ್ತು. ತಡರಾತ್ರಿ 2 ಗಂಟೆಯ ತನಕ ಸುಮಾರು 18 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ಇದನ್ನೂ ಓದಿ: ಜಾರಕಿಹೊಳಿಗೆ ಇಡಿ ಶಾಕ್| ಆಫ್ರಿಕಾದಲ್ಲಿ ಗಣಿಗಾರಿಕೆ ಕಂಪನಿ – ಪುತ್ರ, ಸಹೋದರಿ ನಿರ್ದೇಶಕಿ!
ತಡರಾತ್ರಿ 3 ಗಂಟೆಗೆ ಸತೀಶ್ ಜಾರಕಿಹೊಳಿಯವರಿಗೆ ನಿದ್ರೆ ಮಾಡುವುದಕ್ಕೆ ಅಧಿಕಾರಿಗಳು ಅವಕಾಶ ಕಲ್ಪಿಸಿಕೊಟ್ಟಿದ್ದರು. ಸೆ.9 ರ ಮುಂಜಾನೆ 7 ಗಂಟೆಯಿಂದ ಆರಂಭಗೊಂಡ ಇಡಿ ದಾಳಿ ಇಂದು ಸಹ ಮುಂದುವರೆದಿದೆ. ಎಲ್ಲಾ ಕಡೆ ಶೋಧ ಮುಗಿಯೋವರೆಗೂ ಸತೀಶ್ ಜಾರಕಿಹೊಳಿ ನಿವಾಸದಲ್ಲೇ ಇಡಿ ಅಧಿಕಾರಿಗಳು ಇರಲಿದ್ದಾರೆ.
ಸತೀಶ್ ಜಾರಕಿಹೊಳಿಯವರಿಗೆ ಮಲಗಲು ಅವಕಾಶ ನೀಡಿದ ಬೆನ್ನಲ್ಲೇ ತಡರಾತ್ರಿ 3 ಗಂಟೆಗೆ ಇಡಿ ಅಧಿಕಾರಿಗಳ ಒಂದು ತಂಡ ಅವರ ಮನೆಗೆ ಆಗಮಿಸಿದೆ. ಸಂಪೂರ್ಣ ದಾಳಿ ಅಂತ್ಯವಾದ ಬಳಿಕ ಪಂಚನಾಮೆ ನಡೆಯಲಿದೆ. ಇದನ್ನೂ ಓದಿ: 178 ಕೋಟಿ ಅಬಕಾರಿ ಅಕ್ರಮ – ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಇಡಿ ದಾಳಿಗೆ ಕಾರಣ ಏನು?

