– 25-30 ಲಕ್ಷ ಗ್ರಾಮೀಣ ಆಸ್ತಿ ಮಾಲಿಕರಿಗೆ ಇ-ಸ್ವತ್ತು ಶೀಘ್ರ
ಬೆಂಗಳೂರು: ಗ್ರಾಮಠಾಣಾ ವ್ಯಾಪ್ತಿಯಲ್ಲಿ ದಾಖಲೆ ಇರುವ ಮತ್ತು ದಾಖಲೆಗಳು ಇಲ್ಲದ ಆಸ್ತಿಗಳಿಗೆ ಇ-ಸ್ವತ್ತು (E-Swathu) ನೀಡಲು ಸರ್ಕಾರ ನಿರ್ಧರಿಸಿದ್ದು, ನ.2ರಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ (Eshwar Khandre) ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಆಸ್ತಿ ಮಾಲೀಕರ ಬಹು ದಿನಗಳ ಸಮಸ್ಯೆ ಪರಿಹರಿಸಲು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳಿಗೆ ತಿದ್ದುಪಡಿ ಮಾಡಿ, ಅಧಿಸೂಚನೆ ಹೊರಡಿಸಲಾಗಿದ್ದು, ಇ-ಸ್ವತ್ತು 2 ತಂತ್ರಾಂಶದಲ್ಲೂ ಕೆಲವು ಮಾರ್ಪಾಡು ಮಾಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: 56ನೇ ವಯಸ್ಸಿನಲ್ಲಿ 2ನೇ ಮದ್ವೆ – ಹೊಸ ಜೀವನಕ್ಕೆ ಕಾಲಿಟ್ಟ ಜಮ್ಮು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ!
ಗ್ರಾಮಠಾಣಾ ವ್ಯಾಪ್ತಿಯಲ್ಲಿ ಹಲವಾರು ತಲೆಮಾರುಗಳಿಂದ ವಾಸಿಸುತ್ತಿರುವ ಅಂದಾಜು 25-30 ಲಕ್ಷ ನಿವಾಸಿಗಳಿಗೆ ಇದರಿಂದ ಅನುಕೂಲವಾಗಲಿದೆ. ದಾಖಲೆಗಳು ಲಭ್ಯವಿಲ್ಲದ ಗ್ರಾಮಠಾಣಾ ಆಸ್ತಿಗಳಿಗೆ ನೋಂದಾಯಿತ ದಾಖಲೆಗಳಿಂದ ವಿನಾಯಿತಿ ನೀಡಲಾಗಿದ್ದು, 2025 ಏಪ್ರಿಲ್ 7ರ ಪೂರ್ವದ ವಿದ್ಯುತ್ ಬಿಲ್ ಆಧಾರದ ಮೇಲೆ ಹಾಗೂ ಸ್ಥಳ ಪರಿಶೀಲನೆ ಮಾಡಿ ಇ-ಸ್ವತ್ತು ನೀಡಲಾಗುವುದು ಎಂದರು.
ಈ ರೀತಿ ದಾಖಲೆ ಇಲ್ಲದವರಿಗೆ ಇ-ಸ್ವತ್ತು ನೀಡುವಾಗ ನ್ಯಾಯಾಲಯದಲ್ಲಿ ವ್ಯಾಜ್ಯ ಏನಾದರೂ ಇದ್ದರೆ, ಭಾಗಕ್ಕಾಗಿ ತಗಾದೆ ಇದ್ದರೆ, ಅಥವಾ ಅರ್ಜಿ ಸಲ್ಲಿಸಿದವರು ಮೂಲ ಮಾಲೀಕರಲ್ಲದಿದ್ದಲ್ಲಿ ಅಥವಾ ಇನ್ನಾವುದೇ ಸಿಂಧುವಾದ ಕಾರಣವಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ತೊಡಕು ಎದುರಾಗದಂತೆ, ಸ್ವತ್ತಿನ ಮಾಲೀಕರಿಂದ ಪ್ರಮಾಣಪತ್ರ ಪಡೆದು, ಅವರು ಸಲ್ಲಿಸಿರುವ ಮಾಹಿತಿ ತಪ್ಪಾಗಿದ್ದಲ್ಲಿ ಇ-ಸ್ವತ್ತು ಪ್ರಮಾಣ ಪತ್ರ ರದ್ದು ಮಾಡಬಹುದು ಎಂದು ಮುಚ್ಚಳಿಕೆ ಬರೆಸಿಕೊಳ್ಳಲಾಗುವುದು ಎಂದು ತಿಳಿಸಿದರು.
ವಸತಿ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಯಾವುದೇ ಹಕ್ಕು ಪತ್ರ ಪಡೆದಿದ್ದು ಪ್ರಸ್ತುತ ಸದರಿ ಹಕ್ಕುಪತ್ರ ಲಭ್ಯವಿಲ್ಲದಿದ್ದರೂ ಕೂಡ ಹಕ್ಕುಪತ್ರ ವಿತರಣಾ ಪ್ರಾಧಿಕಾರದ ಧೃಢೀಕರಣ ಪತ್ರ ಪಡೆದು ಇ -ಸ್ವತ್ತು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮಲೆನಾಡು ಪ್ರದೇಶಗಳಿಗೆ ಅನುಕೂಲವಾಗುವಂತೆ ಕಣ ಮನೆ/ಮನೆದಳ ಆಸ್ತಿಗಳಿಗೂ ಇ-ಸ್ವತ್ತು ನೀಡಲಾಗುವುದು ಎಂದು ನುಡಿದರು.
ಬಿ ಖಾತೆ ವಿಧಾನದ ಸರಳೀಕರಣ:
ನಮೂನೆ 11 ಬಿ ಪಡೆಯುವ ವಿಧಾನವನ್ನು ಸರಳೀಕರಣಗೊಳಿಸಿ ಗ್ರಾಮೀಣ ಭಾಗದ ಜನರು ಯಾವುದೇ ನೋಂದಾಯಿತ ಪತ್ರ ಇಲ್ಲದೆ ತಮ್ಮ ಕೃಷಿ ಜಮೀನಿನಲ್ಲಿ ವಾಸ/ಕೃಷಿ ಉಪಯೋಗಕ್ಕೆ ನಿರ್ಮಿಸಿರುವ ಕಟ್ಟಡಗಳಿಗೆ ಇ-ಸ್ವತ್ತು ನಮೂನೆ 11 ಬಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಕೃಷಿ ಭೂಮಿಯಲ್ಲಿ ವಸತಿ ಯೋಜನೆಯಡಿಯಲ್ಲಿ ಸೃಜನೆಯಾಗಿರುವ ಕಟ್ಟಡಗಳಿಗೆ ಮತ್ತು ಪಾರಂಪರಿಕವಾಗಿ ಅರಣ್ಯವಾಸಿಗಳು, ಅರಣ್ಯ ಭಾಗದಲ್ಲಿ ವಾಸವಾಗಿರುವವರು ಅರಣ್ಯ ಹಕ್ಕು ಕಾಯಿದೆಯಂತೆ ಹಕ್ಕು ಪತ್ರ ಪಡೆದಿದ್ದಲ್ಲಿ ಅಂತಹ ಆಸ್ತಿಗಳಿಗೆ ನಮೂನೆ ಪಡೆಯಲು ಈ ತಿದ್ದುಪಡಿ ನಿಯಮದಲ್ಲಿ ಅವಕಾಶ ನೀಡಲಾಗಿದೆ. ಹಿತ್ತಲು, ಮನೆಯಂಗಳ ಸೇರಿ ಒಟ್ಟು 4 ಸಾವಿರ ಚದರಡಿಯೊಳಗಿರುವ ನಿವೇಶನ, ಆಸ್ತಿಗಳಿಗೆ ಮಾತ್ರ ಇದು ಅನ್ವಯವಾಗಲಿದೆ. ಈ ತಿದ್ದುಪಡಿಯಿಂದ ಗ್ರಾಮೀಣ ಭಾಗದ ಪ್ರತಿಶತ 90ಕ್ಕೂ ಹೆಚ್ಚು ಆಸ್ತಿಗಳಿಗೆ ನಮೂನೆ 11ಎ/11ಬಿ ನೀಡಲು ಅವಕಾಶ ಆಗಲಿದೆ ಎಂದರು.
ಮಾದರಿ ನೀತಿ ಸಂಹಿತೆಯಿಂದ ವಿಳಂಬ:
ಗ್ರಾಮಠಾಣಾ ವ್ಯಾಪ್ತಿಯಲ್ಲಿರುವ ಎಲ್ಲ ಆಸ್ತಿಗಳಿಗೆ ಇ-ಸ್ವತ್ತು ನೀಡುವ ಅಭಿಯಾನದಡಿ ಗಾಂಧೀ ಜಯಂತಿ ದಿನವಾದ ಅಕ್ಟೋಬರ್ 2ರಿಂದ ಅರ್ಜಿಗಳನ್ನು ಸ್ವೀಕರಿಸಿ, ನವೆಂಬರ್ 1ರ ರಾಜ್ಯೋತ್ಸವ ದಿನದಿಂದ ಇ-ಸ್ವತ್ತು ಪ್ರಮಾಣ ಪತ್ರ ನೀಡುವುದಾಗಿ ಪ್ರಕಟಿಸಲಾಗಿತ್ತು. ಆದರೆ ವಿಧಾನಪರಿಷತ್ತಿನ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಅಕ್ಟೋಬರ್ 2ರಿಂದ ಈ ಅಭಿಯಾನಕ್ಕೆ ಚಾಲನೆ ನೀಡಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
ಹೀಗಾಗಿ ಈಗ ರಾಜ್ಯೋತ್ಸವದ ಕೊಡುಗೆಯಾಗಿ ನವೆಂಬರ್ 2ನೇ ವಾರದಿಂದ ಗ್ರಾಮಠಾಣ ಆಸ್ತಿಗಳಿಗೆ ಇ-ಸ್ವತ್ತು ನೀಡುವ ಅಭಿಯಾನವನ್ನು ಆರಂಭಿಸಲಾಗುತ್ತಿದ್ದು, ಅರ್ಜಿ ಸ್ವೀಕರಿಸಿ, ಪರಿಶೀಲಿಸಿ, ಡಿಸೆಂಬರ್ ಮೊದಲ ವಾರದಿಂದ ಇ-ಸ್ವತ್ತು ವಿತರಿಸಲಾಗುವುದು ಎಂದರು.
ಬಿ-ಖರಾಬಿನ ಸಮಸ್ಯೆ:
ಇದರ ಜೊತೆಗೆ ಬೆಂಗಳೂರು ಸೇರಿದಂತೆ ನಗರ, ಪಟ್ಟಣದ ಪಕ್ಕದಲ್ಲಿರುವ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕಂದಾಯ ಭೂಮಿಗಳಲ್ಲೂ ಬಡಾವಣೆ ಮಾಡಿದ್ದಾರೆ. ಹೀಗೆ ಬಡಾವಣೆ ಮಾಡುವಾಗ ಬಿ ಖರಾಬು ಭೂಮಿಯನ್ನು ಸೇರಿಸಿಕೊಂಡು ನಿವೇಶನ ವಿಂಗಡಿಸಿದ್ದಾರೆ. ಆದರೆ ಇ-ಸ್ವತ್ತಿಗೆ ಅರ್ಜಿ ಸಲ್ಲಿಸಿದವರು ಕೈಬರಹದ ಖಾತೆ ಹಾಕಿರುತ್ತಾರೆ. ಪಹಣಿ ಹಾಕಿರುವುದಿಲ್ಲ. ಹೀಗಾಗಿ ಸದರಿ ನಿವೇಶನ ಇರುವ ಬಡಾವಣೆಯಲ್ಲಿ ಬಿ ಖರಾಬು ಜಮೀನು ಇದೆಯೇ ಎಂದು ತಿಳಿಯುತ್ತಿರಲಿಲ್ಲ. ಇದು ಇಸ್ವತ್ತು ನೀಡಿಕೆ ವಿಳಂಬಕ್ಕೆ ಕಾರಣವಾಗಿದೆ. ಬಿ ಖರಾಬು ಭೂಮಿಗೆ ಖಾತೆ ನೀಡಲು ಸಾಧ್ಯವಿಲ್ಲ. ಈ ಬಗ್ಗೆ ಘನ ನ್ಯಾಯಾಲಯ ತೀರ್ಪು ಸಹ ಇದೆ ಎಂದು ಹೇಳಿದರು.
ಇಂತಹ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕಂದಾಯ ಇಲಾಖೆಯ ಸಚಿವರೊಂದಿಗೆ ಶೀಘ್ರವೇ ಸಭೆ ನಡೆಸಿ ಜನರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: 2027ರ ಜನವರಿ ಮೊದಲೆರಡು ವಾರಗಳಲ್ಲಿ ಜಿಪಂ, ತಾಪಂ ಚುನಾವಣೆ – ಈಶ್ವರ್ ಖಂಡ್ರೆ
