ರಾಮನಗರ: ಯಾವುದೋ ಒಂದು ಉಪನಗರಕ್ಕಾಗಿ ಅನ್ನದಾತ ರೈತರಿಗೆ ನೋವು ಕೊಡುವುದು ಬೇಡ. ರೈತರ ಕೃಷಿ ಭೂಮಿಯನ್ನು ಕಿತ್ತುಕೊಳ್ಳುವ ಬದಲು, ಈ ಟೌನ್‌ಶಿಪ್ (Bidadi Township) ಯೋಜನೆಯನ್ನು ಬೇರೆ ಕಡೆಗೆ ಸ್ಥಳಾಂತರಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಕೇಂದ್ರ ಸಚಿವ ವಿ.ಸೋಮಣ್ಣ (V Somanna) ಹೇಳಿದ್ದಾರೆ.
ಬಹುಚರ್ಚಿತ ಬಿಡದಿ ಟೌನ್‌ಶಿಪ್ ಯೋಜನೆಗೆ ರೈತರಿಂದ ವ್ಯಕ್ತವಾಗುತ್ತಿರುವ ತೀವ್ರ ವಿರೋಧದ ಬೆನ್ನಲ್ಲೇ, ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಸಿಎಂ ಡಿ.ಕೆ.ಶಿವಕುಮಾರ್‌ಗೆ ಸಲಹೆ ನೀಡಿದ್ದಾರೆ. ಚನ್ನಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ರೈತರಿಗೆ ಅನಾನುಕೂಲ ಮಾಡಿ ಯೋಜನೆ ಜಾರಿಗೊಳಿಸುವುದು ಬೇಡ. ಬಿಡದಿ ಟೌನ್‌ಶಿಪ್ ವಿಚಾರವಾಗಿ ಈಗಾಗಲೇ ನಾನು ಸಾಕಷ್ಟು ಮಾತನಾಡಿದ್ದೇನೆ. ಭಾನುವಾರವಷ್ಟೇ ಸಿಎಂ ಸಹೋದರ ಡಿ.ಕೆ. ಸುರೇಶ್ ಜೊತೆಯೂ ಫೋನ್‌ನಲ್ಲಿ ಚರ್ಚಿಸಿದ್ದೇನೆ. ಡಿ.ಕೆ.ಶಿವಕುಮಾರ್ ಸಿಎಂ ಆಗಿ ಒಂದು ತಿಂಗಳಾಗಿದೆ. ನೀವು ಸಿಎಂ ಆಗಿ ಯಾವುದೇ ಹೊಸ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳಬೇಡಿ. ಅದರ ಬದಲು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಕೊಡಿ ಎಂದರು. ಇದನ್ನೂ ಓದಿ: ಬೆಂಗಳೂರಿನಿಂದ 100 ಕಿ.ಮೀ. ದೂರ, ಮಂಗಳೂರಿಗೂ ಚತುಷ್ಪಥ ರೈಲ್ವೆ: ಸೋಮಣ್ಣ
ಹಿಂದೆ ಹೆಚ್.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ರೈತರು ಬೇಡ ಎಂದ ತಕ್ಷಣವೇ ಈ ಯೋಜನೆಯನ್ನು ಕೈಬಿಟ್ಟಿದ್ದರು. ಇವತ್ತು ನೀವ್ಯಾಕೆ ಈ ಯೋಜನೆಗಾಗಿ ಹಠ ಮಾಡುತ್ತಿದ್ದೀರಿ, ಯಾವುದೋ ಒಂದು ಉಪನಗರಕ್ಕಾಗಿ ಅನ್ನದಾತ ರೈತರಿಗೆ ನೋವು ಕೊಡುವುದು ಬೇಡ. ರೈತರ ಕೃಷಿ ಭೂಮಿಯನ್ನು ಕಿತ್ತುಕೊಳ್ಳುವ ಬದಲು, ಈ ಟೌನ್‌ಶಿಪ್ ಯೋಜನೆಯನ್ನು ಬೇರೆ ಕಡೆಗೆ ಸ್ಥಳಾಂತರಿಸುವುದರಲ್ಲಿ ಯಾವುದೇ ತಪ್ಪಿಲ್ಲ. ನಮ್ಮ ಜಿಲ್ಲೆಯವರೇ ಇಂದು ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾರೆ ಎಂಬ ಹೆಮ್ಮೆಯಿದೆ. ಅವರು ಮೊದಲು ಬಿಡದಿ ಭಾಗದ ಬೈರಮಂಗಲ ಕೆರೆ ಶುದ್ಧೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಿ. ಹಠಮಾರಿ ಧೋರಣೆಯನ್ನು ಬಿಟ್ಟು, ವಿವಾದಿತ ಯೋಜನೆಯನ್ನು ಕೈಬಿಡಿ. ಇಡೀ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಯತ್ತ ಗಮನ ಹರಿಸಿ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಸಿಎಂ ಡಿಕೆಶಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬೈಕ್ ಸ್ಕಿಡ್ ಆಗಿ ಲಾರಿ ಚಕ್ರಕ್ಕೆ ಸಿಲುಕಿ ಎಂಬಿಎ ವಿದ್ಯಾರ್ಥಿ ಸಾವು
