ನವದೆಹಲಿ: ನಿರ್ಮಾಣ ಹಾಗೂ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಲ್ಲಿ(Infrastructure Project) ಕಂಡುಬರುತ್ತಿರುವ ಕಳಪೆ ಗುಣಮಟ್ಟದ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಕಾಮಗಾರಿಗಳ ಗುಣಮಟ್ಟ ಪರಿಶೀಲನೆಗೆ ಈಗ ನಾಲ್ಕನೇ ವ್ಯಕ್ತಿಗಳಿಂದ (Fourth-party) ಆಡಿಟ್ ಮೊರೆ ಹೋಗಬೇಕೆ?” ಎಂದು ಅವರು ಕೇಂದ್ರ ಸರ್ಕಾರದ ಕಾರ್ಯದರ್ಶಿಗಳು ಹಾಗೂ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳನ್ನು ಪ್ರಶ್ನಿಸಿದ್ದಾರೆ.
ಸಾಮಾನ್ಯವಾಗಿ ಯೋಜನೆಗಳ ಗುಣಮಟ್ಟ ಪರಿಶೀಲನೆಗೆ ‘ಥರ್ಡ್ ಪಾರ್ಟಿ’ (ಮೂರನೇ ವ್ಯಕ್ತಿ/ಸಂಸ್ಥೆ) ಆಡಿಟ್ ವ್ಯವಸ್ಥೆ ಚಾಲ್ತಿಯಲ್ಲಿದ್ದರೂ ಅದು ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಪ್ರಧಾನಿ ಬೇಸರ ವ್ಯಕ್ತಪಡಿಸಿದರು.
ಮಂಗಳವಾರ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾಮಗಾರಿಗಳಲ್ಲಿ ಗುಣಮಟ್ಟದ ಕೊರತೆಯನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಈ ರೀತಿಯ ಕಾರ್ಯವೈಖರಿ ನಡೆಯುವುದಿಲ್ಲ ಎಂದು ಉನ್ನತ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.
ಈ ಸಭೆಯಲ್ಲಿ ರೈಲ್ವೆ, ರಸ್ತೆ ಮತ್ತು ವಿದ್ಯುತ್ ಕ್ಷೇತ್ರಗಳಿಗೆ ಸಂಬಂಧಿಸಿದಂತೆ 9 ರಾಜ್ಯಗಳಲ್ಲಿ ನಡೆಯುತ್ತಿರುವ ಸುಮಾರು 30,000 ಸಾವಿರ ಕೋಟಿ ರೂ. ಅಧಿಕ ವೆಚ್ಚದ ಆರು ಪ್ರಮುಖ ಮೂಲಸೌಕರ್ಯ ಯೋಜನೆಗಳ ಪ್ರಗತಿಯನ್ನು ಪ್ರಧಾನಿ ಪರಿಶೀಲಿಸಿದರು. ಮೂಲಸೌಕರ್ಯ ಕಾಮಗಾರಿಗಳನ್ನು ಕೇವಲ ಬಿಡಿಭಾಗಗಳು ಅಥವಾ ಪ್ಯಾಕೇಜ್‌ಗಳಾಗಿ ನೋಡದೇ ಸಮಗ್ರ ದೃಷ್ಟಿಕೋನದಿಂದ ಮೇಲ್ವಿಚಾರಣೆ ನಡೆಸಬೇಕು ಎಂದು ಅವರು ತಿಳಿಸಿದರು. ಇದನ್ನೂ ಓದಿ: ನಮ್ಮ ಧರ್ಮದ ಬಗ್ಗೆ ನಾವೇ ತೀರ್ಮಾನಿಸುತ್ತೇವೆ, ಹಿಜಾಬ್ ಆದೇಶ ಇಸ್ಲಾಂ ಮೇಲಿನ ನೇರ ದಾಳಿ – ಹೈಕೋರ್ಟ್ ತೀರ್ಪಿಗೆ ಓವೈಸಿ ಕಿಡಿ
ಯೋಜನೆಗಳ ತ್ವರಿತ ಅನುಷ್ಠಾನದ ಜೊತೆಗೆ ರಾಜಿ ಮಾಡಿಕೊಳ್ಳದೇ ಗುಣಮಟ್ಟವೂ ಇರಬೇಕು. ಸಚಿವಾಲಯಗಳು, ರಾಜ್ಯ ಸರ್ಕಾರಗಳು ಮತ್ತು ಅನುಷ್ಠಾನ ಸಂಸ್ಥೆಗಳು ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಹಾಗೂ ಪ್ರತಿ ಹಂತದಲ್ಲೂ ಗುಣಮಟ್ಟದ ಮೇಲ್ವಿಚಾರಣೆಯನ್ನು ಬಲಪಡಿಸಬೇಕು ಎಂದು ಪ್ರಧಾನಿ ಕರೆ ನೀಡಿದ್ದಾರೆ
ವಿದ್ಯುತ್ ಉತ್ಪಾದನೆ ಹೆಚ್ಚಿಸಿದರೆ ಮಾತ್ರ ಸಾಲದು. ಸರಿಯಾದ ಪ್ರಸರಣ ಮಾರ್ಗಗಳೂ ಇರಬೇಕು. ಇದು “ಕಾಲುವೆಗಳನ್ನು ನಿರ್ಮಿಸದೆ ಅಣೆಕಟ್ಟು ಕಟ್ಟಿದಂತೆ” ಯಾವುದೇ ಪ್ರಯೋಜನ ನೀಡುವುದಿಲ್ಲ ಎಂದು ವಿದ್ಯುತ್ ಯೋಜನೆಗಳ ಪರಿಶೀಲನೆ ವೇಳೆ ಪ್ರಧಾನಿ ಹೇಳಿದರು. ಇದನ್ನೂ ಓದಿ: ವಿರೋಧದ ಬೆನ್ನಲ್ಲೇ ಕೃತಿ ಸನೋನ್ ರಕ್ಷಾಬಂಧನ ಜಾಹೀರಾತು ಹಿಂಪಡೆದ ಜಿವಾ
ಹಿರಿಯ ನಾಗರಿಕರು, ಯುವಕರು ಸೇರಿದಂತೆ ದುರ್ಬಲ ವರ್ಗದವರನ್ನು ಗುರಿಯಾಗಿಸಿಕೊಂಡು ಸೈಬರ್ ಅಪರಾಧಗಳ ಎಚ್ಚರಿಕೆ ಚಿಹ್ನೆಗಳು ಮತ್ತು ಸುರಕ್ಷಿತ ಡಿಜಿಟಲ್ ಪದ್ಧತಿಗಳ ಬಗ್ಗೆ ನಿರಂತರ ಜಾಗೃತಿ ಮೂಡಿಸಲು ಪ್ರಧಾನಿ ಸೂಚಿಸಿದರು. ಈ ಸಭೆಯಲ್ಲಿ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಅವರು ಸೈಬರ್ ಅಪರಾಧ ನಿಯಂತ್ರಣಕ್ಕೆ 20 ರಾಜ್ಯಗಳು ಕೈಗೊಂಡಿರುವ ಕ್ರಮಗಳ ಕುರಿತು ವಿವರವಾದ ಮಾಹಿತಿ ನೀಡಿದರು.
