– ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರಿಗೂ ನನ್ನ ಹೃದಯ ತೆರೆದಿದೆ
ರಾಮನಗರ: 2028ರಲ್ಲೂ ತಾವೇ ಮುಖ್ಯಮಂತ್ರಿಯಾಗಿ ಮುಂದುವರಿಯುವ ಆಶಯವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(D.K Sivakumar) ವ್ಯಕ್ತಪಡಿಸಿದ್ದಾರೆ.
ಕನಕಪುರ ತಾಲೂಕಿನ ಬೇಕುಪ್ಪೆ ಗ್ರಾಮದಲ್ಲಿ ನಡೆದ ಕೃತಜ್ಞತಾ ಸಮರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಾದ್ಯಂತ ಪ್ರವಾಸ ಮಾಡಬೇಕಿರುವ ಕಾರಣ ಕ್ಷೇತ್ರದ ಜನರಿಗೆ ಹೆಚ್ಚು ಸಮಯ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನೂತನ ಸಿಎಂ ಜನರನ್ನುದ್ದೇಶಿಸಿ, ನಾನು ಇಡೀ ರಾಜ್ಯ ಸುತ್ತಬೇಕಿದೆ. ನಿಮಗೆ ಹೆಚ್ಚು ಸಮಯ ಕೊಡಲು ಆಗಲ್ಲ. 2028ಕ್ಕೂ ನಾನು ಬರಬೇಕು ತಾನೇ? ಬರಿ ಎರಡು ವರ್ಷದ ಮುಖ್ಯಮಂತ್ರಿ ನೋಡಬೇಕಾ? 2028ಕ್ಕೂ ನಾನೇ ಬರಬೇಕು ಅಂದ್ರೆ ನನಗೆ ಬಿಡುವು ಮಾಡಬೇಕು. ಎಲ್ಲೆಡೆ ಕನಕಪುರ ಅಂದ್ರೆ ಸಿಎಂ ಕ್ಷೇತ್ರ ಅಂತಾರೆ. ಆ ಅಧಿಕಾರ ಕೊಟ್ಟಿದ್ದು ನೀವು. ನಿಮ್ಮ ಆಶೀರ್ವಾದ ಸದಾ ನನ್ನ ಮೇಲೆ ಇರಲಿ. ನನ್ನ ಕೊನೆಯ ಉಸಿರು ಇರುವವರೆಗೂ ನಿಮ್ಮ ಮಗನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಈ ದೇಶದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಅವರು ಮತ್ತೊಬ್ಬ ಡಿ.ಕೆ.ಶಿವಕುಮಾರ್ ಅವರನ್ನು ತಯಾರು ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.ಇದನ್ನೂ ಓದಿ:ಬಳ್ಳಾರಿಯಲ್ಲಿ ಮಳೆ ಅವಾಂತರ – KEB ಘಟಕಕ್ಕೆ ನುಗ್ಗಿದ ನೀರು, ಇಡೀ ನಗರಕ್ಕೆ ಕರೆಂಟ್ ಕಟ್
ರಾಜಕೀಯ ಭಿನ್ನಾಭಿಪ್ರಾಯಗಳ ಬಗ್ಗೆ ಮಾತನಾಡಿ, ಯಾರು ಯಾರ ಜೊತೆಯೂ ಜಗಳ ಆಡಬೇಡಿ. ಯಾವುದೇ ಪಕ್ಷದವರಾಗಿದ್ದರೂ ತಲೆ ಕೆಡಿಸಿಕೊಳ್ಳಬೇಡಿ. ಮುಂದೊಂದು ದಿನ ಎಲ್ಲರಿಗೂ ಅರ್ಥವಾಗುತ್ತದೆ. ಮನುಷ್ಯನ ಬದುಕು ಶಾಶ್ವತ ಅಲ್ಲ. ನಾನು ಶಾಶ್ವತ ಅಲ್ಲ, ನೀವು ಶಾಶ್ವತ ಅಲ್ಲ. ನಮ್ಮ ಕೆಲಸ ಮಾತ್ರ ಶಾಶ್ವತ ಎಂದು ಹೇಳಿದರು.
ಎಸ್‌ಐಆರ್(ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ) ವಿಚಾರ ಪ್ರಸ್ತಾಪಿಸಿದ ಡಿಕೆ ಶಿವಕುಮಾರ್, ಯಾರೂ ತಮ್ಮ ಮತವನ್ನು ಬೇರೆ ಕಡೆಗೆ ವರ್ಗಾಯಿಸಬೇಡಿ. ನಿಮ್ಮ ಊರಿನಲ್ಲೇ ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಿ. ಎಲ್ಲಾ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಕಾಮುಕನಿಗೆ 3 ವರ್ಷ ಜೈಲು ಶಿಕ್ಷೆ,15 ಸಾವಿರ ದಂಡ
ಯಾರು ಜಗಳವಾಡಬೇಡಿ. ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗದಂತೆ ನಡೆದುಕೊಳ್ಳಿ. ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರಿಗೂ ನನ್ನ ಮನೆ ಮತ್ತು ನನ್ನ ಹೃದಯ ತೆರೆದಿದೆ ಎಂದು ಪಕ್ಷಕ್ಕೆ ಸೇರುವಂತೆ ಆಹ್ವಾನ ನೀಡಿದರು.
