ಮಡಿಕೇರಿ: ಕಳೆದ ಮೂರು ದಿನಗಳಿಂದ ಕೊಂಚ ಮಟ್ಟಿಗೆ ತಗ್ಗಿದ್ದ ಮಳೆ, ಇದೀಗ ಕೊಡಗು(Kodagu) ಜಿಲ್ಲೆಯಲ್ಲಿ ಮತ್ತೆ ತನ್ನ ಅಬ್ಬರವನ್ನು ಆರಂಭಿಸಿದೆ. ಗುರುವಾರ ರಾತ್ರಿಯಿಂದಲೇ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ(Heavy Rain) ಜಿಲ್ಲೆಯಾದ್ಯಂತ ಜನಜೀವನದ ಮೇಲೆ ಮತ್ತೆ ಪರಿಣಾಮ ಬೀರುವ ಆತಂಕ ಎದುರಾಗಿದೆ.
ಮಡಿಕೇರಿ, ಸೋಮವಾರಪೇಟೆ, ಗಾಳಿಬೀಡು, ಮದೆನಾಡು ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೂ ಬಿಡುವಿಲ್ಲದೆ ಮಳೆ ಸುರಿಯುತ್ತಿದೆ. ಮಳೆಯ ತೀವ್ರತೆ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ನದಿ ಪಾತ್ರದ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಪ್ರಮುಖ ಜಲಾಶಯವಾದ ಹಾರಂಗಿಗೆ ಒಳಹರಿವು ಹೆಚ್ಚಾಗಿದೆ.
ಗರಿಷ್ಠ ಮಟ್ಟ: 2,859 ಅಡಿಗಳು
ಪ್ರಸ್ತುತ ನೀರಿನ ಮಟ್ಟ: 2,858.28 ಅಡಿಗಳು
ಒಟ್ಟು ಸಾಮರ್ಥ್ಯ: 8.5 ಟಿಎಂಸಿ
ಪ್ರಸ್ತುತ ನೀರು ಸಂಗ್ರಹ: 8.1 ಟಿಎಂಸಿ
ಒಳಹರಿವು: 5,626 ಕ್ಯೂಸೆಕ್
ಹೊರಹರಿವು: 5,083 ಕ್ಯೂಸೆಕ್
ಹಾರಂಗಿ ಜಲಾಶಯ ಭರ್ತಿಯಾಗಿದ್ದು, ಜಲಾನಯನ ಪ್ರದೇಶಗಳಲ್ಲಿ ಮಳೆ ಮುಂದುವರಿದಿದೆ. ಹವಾಮಾನ ಇಲಾಖೆಯು ಮುಂಬರುವ ಕೆಲ ದಿನಗಳ ಕಾಲ ಕೊಡಗು ಜಿಲ್ಲೆಯ ವಿವಿಧೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.



