– ಬೆಳೆ ಪರಿಹಾರ ಹೆಚ್ಚಳಕ್ಕೆ ಅನ್ನದಾತರ ಆಗ್ರಹ
ಧಾರವಾಡ: ರಾಜ್ಯದಲ್ಲಿ ಬರಗಾಲ ಆವರಿಸಿದ್ದು, ಸರ್ಕಾರ ಪ್ರತಿ ರೈತರಿಗೆ (Farmers) 2,500 ಪರಿಹಾರ ಕೊಡಲು ನಿರ್ಧರಿಸಿದೆ. ಆದರೆ, ಇದನ್ನ ಅನ್ನದಾತರು ವಿರೋಧಿಸಿದ್ದಾರೆ.
ಭಿಕ್ಷುಕರಿಗೆ ನೀಡಿದಂತೆ ರಾಜ್ಯ ಸರ್ಕಾರ (Karnataka Govt) ರೈತರಿಗೆ 2,500 ರೂಪಾಯಿ ನೀಡುವುದು ಬೇಡ ನಾವೇ ಹೆಚ್ಚುವರಿಯಾಗಿ 500 ರೂಪಾಯಿ ಹಾಕಿ ಒಟ್ಟು 3 ಸಾವಿರ ಹಣ ನೀಡುತ್ತೇವೆ. ಸರ್ಕಾರಕ್ಕೆ ಇನ್ನೂ ಏನಾದರೂ ಕಡಿಮೆ ಬಿದ್ದರೆ ತಿಳಿಸಲಿ ಸಾಲ ಮಾಡಿ ಸರ್ಕಾರಕ್ಕೆ ಹಣ ಕೊಡುತ್ತೇವೆ ಎಂದು ರೈತರು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಬರಗಾಲದ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ಬರಬೇಕು ಪ್ರತಿ ರೈತರಗೆ ಬರ ಪರಿಹಾರವಾಗಿ 50 ಸಾವಿರ ರೂ. ನೀಡಬೇಕು. ಆದ್ರೆ ಮೂಗಿಗೆ ತುಪ್ಪ ಸವರಿದಂತೆ 2,500 ರೂ. ಕೊಡುತ್ತಿದ್ದು, ಇದು ಗೊಬ್ಬರ ಮತ್ತು ಬೀಜಕ್ಕೂ ಸಾಕಾಗಲ್ಲ. ಹೀಗಾಗಿ ಹೆಚ್ಚುವರಿಯಾಗಿ 500 ರೂಪಾಯಿ ಸೇರಿಸಿ 3,000 ರೂ. ಮಾಡಿ ಸರ್ಕಾರಕ್ಕೆ ಕಳುಹಿಸಲು ನಾವು ಸಿದ್ಧರಾಗಿದ್ದೇವೆ. ಈ ಹಣವನ್ನ ಸರ್ಕಾರ ಪಡೆದುಕೊಳ್ಳಬೇಕು ಎಂದು ಕುಂದಗೋಳ ತಾಲೂಕಿನ ವಿವಿಧ ಹಳ್ಳಿಯ ರೈತರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಕೈಯಲ್ಲಿ 500 ರೂ. ಮುಖಬೆಲೆಯ ನೋಟುಗಳನ್ನ ಹಿಡಿದು ಸರ್ಕಾರಕ್ಕೆ ತಾವೇ ಹಣ ಕೊಡುವ ಭರವಸೆಯನ್ನ ಅನ್ನದಾತರು ನೀಡಿದ್ದಾರೆ. ಜಗತ್ತಿಗೆ ಅನ್ನ ಹಾಕುವ ರೈತ ಭಿಕ್ಷುಕನಂತೆ ಸರ್ಕಾರದ ಮುಂದೆ ಕೈ ಒಡ್ಡುವುದು ಸರಿಯಲ್ಲ. ಆ ಪರಿಸ್ಥಿತಿಯನ್ನ ಸರ್ಕಾರ ರೈತರಿಗೆ ತಂದಿಡಬಾರದು. ಕೂಡಲೇ ಎಲ್ಲ ರೈತರಿಗೆ 50 ಸಾವಿರ ಬರ ಪರಿಹಾರ ನೀಡಬೇಕು. ಇಲ್ಲದೇ ಹೋದಲ್ಲಿ ಬರುವ ಅ.26 ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಬಾರಕೋಲು ಚಳವಳಿ ನಡೆಸುವ ಎಚ್ಚರಿಕೆಯನ್ನು ರೈತರು ನೀಡಿದ್ದಾರೆ.
ಸರ್ಕಾರ ನೀಡುತ್ತಿರುವ 2,500 ಪರಿಹಾರ ತಿರಸ್ಕರಿಸುತ್ತಿರುವ ರೈತರು ಪ್ರತಿ ರೈತನಿಗೆ 50 ಸಾವಿರ ಪರಿಹಾರ ನೀಡಬೇಕು. ಇಲ್ಲದೇ ಹೋದರೆ ಉಗ್ರ ಹೋರಾಟದ ಎಚ್ಚರಿಕೆ ರೈತರು ನೀಡಿದ್ದಾರೆ.

