– ಯಾರಿಗೂ ಕೇಂದ್ರದಲ್ಲಿ ಉನ್ನತ ಸ್ಥಾನ ದೊರೆತಿಲ್ಲ
ಶಿವಮೊಗ್ಗ : ಕಳೆದ 6 ವರ್ಷದ ಮೋದಿ ಸರ್ಕಾರದ ಅವಧಿಯಲ್ಲಿ ರಾಜ್ಯದ ಯಾವ ನಾಯಕರಿಗೂ ಕೇಂದ್ರದಲ್ಲಿ ಉನ್ನತ ಸ್ಥಾನ ದೊರೆತಿಲ್ಲ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದವರಿಗೆ ರಾಜ್ಯಪಾಲ ಹುದ್ದೆ ಸೇರಿದಂತೆ ಯಾವ ಹುದ್ದೆಯೂ ದೊರೆತಿಲ್ಲ. ವಾಜಪೇಯಿಯವರು ಪ್ರಧಾನಿಯಾಗಿದ್ದ ವೇಳೆ ರಾಮಜೋಯಿಸರು ರಾಜ್ಯಪಾಲರಾಗಿದ್ದರು. ಆದರೆ ಮೋದಿ ಸರ್ಕಾರ ಬಂದ ನಂತರ ಕರ್ನಾಟಕದ ಯಾರೊಬ್ಬರು ರಾಜ್ಯಪಾಲರಾಗಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
Advertisement
Advertisement
ಕರ್ನಾಟಕ ರಾಜ್ಯದಿಂದ ಕಳೆದ ಬಾರಿ ಸಂಸತ್ ಗೆ 18 ಮಂದಿ ಹಾಗೂ ಈ ಬಾರಿ 25 ಮಂದಿ ಆಯ್ಕೆ ಮಾಡಿ ಕಳುಹಿಸಿದೆ. ಅಲ್ಲದೇ ರಾಜ್ಯದಲ್ಲಿ ಬಿಜೆಪಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿದೆ. ವೈಯಕ್ತಿಕವಾಗಿ ನನಗೆ ರಾಜ್ಯಪಾಲನಾಗುವ ಅವಕಾಶ ಬರಬೇಕಿತ್ತು ಆದರೆ ಬಂದಿಲ್ಲ. ಈ ಮಧ್ಯದಲ್ಲಿ ಡಿ.ಎಚ್.ಶಂಕರಮೂರ್ತಿ ರಾಜ್ಯಪಾಲರಾಗುತ್ತಾರೆ ಎಂಬ ಗುಸುಗುಸು ಆರಂಭವಾಯ್ತು. ಅದು ಮಧ್ಯದಲ್ಲಿ ಹಾಗೆ ನಿಂತು ಹೋಯ್ತು ಎಂದು ಹೇಳುವ ಮೂಲಕ ಶಂಕರಮೂರ್ತಿ ಅವರು ರಾಜ್ಯಪಾಲರಾಗುವ ಆಸೆಯನ್ನು ಹೊರ ಹಾಕಿದ್ದಾರೆ.