– ಕೇಂದ್ರದಲ್ಲಿ ರಾಷ್ಟ್ರೀಯ ಸಂಘಟಕ ಹುದ್ದೆ ಸೃಷ್ಟಿ
ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಬೆನ್ನಲ್ಲೇ ರಾಜ್ಯ ಬಿಜೆಪಿಗೂ ಮೇಜರ್ ಸರ್ಜರಿಯಾಗುವ ಲಕ್ಷಣ ಕಂಡುಬರುತ್ತಿದೆ. ರಾಜ್ಯ ಬಿಜೆಪಿಯಲ್ಲೂ ಜಾತಿ ಸಮೀಕರಣದ ಮೂಲಕ ಪ್ರಮುಖ ಹುದ್ದೆಗಳ ಬದಲಾವಣೆ ಬಗ್ಗೆ ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದೆ ಎನ್ನಲಾಗಿದೆ.
ಕೇಂದ್ರದಲ್ಲಿ ರಾಷ್ಟ್ರೀಯ ಸಂಘಟಕ ಹುದ್ದೆ ಸೃಷ್ಟಿಸಲಾಗಿದೆ. ನಾಗೇಂದ್ರನಾಥ್ ತ್ರಿಪಾಠಿಗೆ ರಾಷ್ಟ್ರೀಯ ಸಂಘಟಕ ಹುದ್ದೆ ನೀಡಲಾಗಿದೆ. ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ವರ್ಚುವಲ್ ಕೋರ್ ಕಮಿಟಿ ಸಭೆಯಲ್ಲಿ ಮುಂದಿನ ವಿಧಾನಸಭೆ ಚುನಾವಣೆಗೆ ರಾಜ್ಯ ಬಿಜೆಪಿ ಏನೆಲ್ಲ ಬದಲಾವಣೆ ಮಾಡಿಕೊಳ್ಳಬೇಕೆಂಬ ಬಗ್ಗೆಯೂ ಚರ್ಚಿಸಲಾಗಿದೆ.
ಸದ್ಯ ರಾಜ್ಯ ಬಿಜೆಪಿಯಲ್ಲಿ ಹಾಲಿ ಪ್ರಮುಖ ಹುದ್ದೆಗಳಲ್ಲಿರುವವರನ್ನು ಕೆಳಗಿಳಿಸಿ ಜಾತಿ ಸಮೀಕರಣ ಆಧಾರದಲ್ಲಿ ಬೇರೆಯವರನ್ನು ತರುವ ಬಗ್ಗೆ ಗಂಭೀರ ಚರ್ಚೆ ನಡೆಸಲಾಗಿದೆ. ರಾಜ್ಯಾಧ್ಯಕ್ಷ ಹುದ್ದೆ, ಬಿಜೆಪಿ ಕೋರ್ ಕಮಿಟಿ ಪುನಾರಚನೆ, ಪದಾಧಿಕಾರಿಗಳ ಬದಲಾವಣೆ, ವಿಪಕ್ಷ ನಾಯಕರ ಹುದ್ದೆಗಳಲ್ಲಿ ಭಾರೀ ಬದಲಾವಣೆ ಮಾಡುವ ನಿರೀಕ್ಷೆ ಇದೆ.
ಕೆಲವರ ಸ್ಥಾನಗಳಿಗೆ ಕುತ್ತು ಎದುರಾಗುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ. ಸದ್ಯಕ್ಕೆ ಎಲ್ಲವನ್ನೂ ಸಿದ್ಧಪಡಿಸಿಕೊಂಡು ಆದಷ್ಟು ಬೇಗ ಬದಲಾವಣೆಗೆ ಹೈಕಮಾಂಡ್ ಮುಂದಾಗುವ ಸಾಧ್ಯತೆ ಇದೆ.
