ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪುಗಳು ಇನ್ನೂ ಹಸಿರಾಗಿರುವಾಗಲೇ, ಭಾರತವು ತನ್ನ 80ನೇ ಸ್ವಾತಂತ್ರ್ಯ ದಿನಾಚರಣೆಯ ಸುಸಂದರ್ಭಕ್ಕೆ ಸಂಭ್ರಮದಿಂದ ಹೆಜ್ಜೆ ಇಡುತ್ತಿದೆ. ನೂರಾರು ವರ್ಷಗಳ ಗುಲಾಮಗಿರಿಯ ಸಂಕೋಲೆಗಳನ್ನು ಕಳಚಿ, ಪ್ರಜಾಪ್ರಭುತ್ವದ ಬೆಳಕಿನಲ್ಲಿ ಮುನ್ನಡೆದ ಭಾರತದ ಐತಿಹಾಸಿಕ ಪಯಣಕ್ಕೆ ಸಾಕ್ಷಿಯಾಗಿ ನಿಂತಿರುವುದು ದೆಹಲಿಯ ಐತಿಹಾಸಿಕ ಕೆಂಪು ಕೋಟೆ.
ತ್ರಿವರ್ಣ ಧ್ವಜವು ಮತ್ತೊಮ್ಮೆ ಮುಗಿಲೆತ್ತರಕ್ಕೆ ಹಾರಾಡಲು ಸಿದ್ಧವಾಗುತ್ತಿದ್ದು, ಈ ಬಾರಿಯ ಆಚರಣೆಯು ಕೇವಲ ಒಂದು ಧ್ವಜಾರೋಹಣಕ್ಕೆ ಸೀಮಿತವಾಗಿರದೇ, ‘ವಿಕಸಿತ ಭಾರತ’ದ ಕನಸಿಗೆ ನವ ಚೈತನ್ಯ ತುಂಬುವ ವಿಶೇಷತೆಗಳಿಂದ ಕಂಗೊಳಿಸುತ್ತಿದೆ. ರಾಷ್ಟ್ರದ ಏಕತೆ, ತಂತ್ರಜ್ಞಾನದ ಪ್ರಗತಿ ಮತ್ತು ಸಾಂಸ್ಕೃತಿಕ ವೈಭವವನ್ನು ಜಗತ್ತಿಗೆ ಸಾರಲು ಕೆಂಪು ಕೋಟೆ ಈ ಬಾರಿ ಹೇಗೆ ಸಜ್ಜಾಗಿದೆ? ಇಲ್ಲಿದೆ ಈ ಬಾರಿಯ ಸಂಭ್ರಮದ ಸಂಪೂರ್ಣ ಚಿತ್ರಣ.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 80ನೇ ವರ್ಷದ ಸಂಭ್ರಮ:
ಸಾಮಾನ್ಯವಾಗಿ ಪ್ರತಿಯೊಬ್ಬರಲ್ಲೂ ಕಾಡುವ 79ನೇ ಅಥವಾ 80ನೇ ಸ್ವಾತಂತ್ರ್ಯ ದಿನಾಚರಣೆಯ ಗೊಂದಲಕ್ಕೆ ಈ ಬಾರಿ ಪೂರ್ಣ ವಿರಾಮ ಬಿದ್ದಿದೆ. 2026ರಿಂದ 1947 ಅನ್ನು ಕಳೆದಾಗ 79 ಎಂಬ ಸಂಖ್ಯೆ ದೊರೆತರೂ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಆಗಸ್ಟ್ 15, 1947 ಅನ್ನು ಮೊದಲ ಸ್ವಾತಂತ್ರ್ಯ ದಿನವೆಂದು ಪರಿಗಣಿಸುವುದರಿಂದ ಈ ವರ್ಷ (ಆಗಸ್ಟ್ 15, 2026 – ಶನಿವಾರ) ದೇಶವು ತನ್ನ ಭವ್ಯ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಡಗರದಿಂದ ಆಚರಿಸಲಿದೆ. ಈ ಬಾರಿಯ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲು ‘ವಿಕಸಿತ ಭಾರತ@2047ಕ್ಕಾಗಿ ಯುವ ಶಕ್ತಿ’ (Yuva Shakti for Viksit Bharat@2047) ಎಂಬ ಥೀಮ್ ಇಟ್ಟುಕೊಳ್ಳಲಾಗಿದೆ. ಈ ಮೂಲಕ ದೇಶದ ಪ್ರಗತಿಯಲ್ಲಿ ಯುವಜನತೆಯ ಪಾತ್ರವನ್ನು ಎತ್ತಿಹಿಡಿಯಲಾಗುತ್ತಿದೆ.
ಆಗಸ್ಟ್ 15ರ ಬೆಳಿಗ್ಗೆ ಕೆಂಪು ಕೋಟೆಯ ಅಂಗಳದಲ್ಲಿ ಆಯೋಜಿಸಲಾದ ಸಾಂಪ್ರದಾಯಿಕ ಆಚರಣೆಗಳು ಪ್ರತಿಯೊಬ್ಬ ಭಾರತೀಯನಲ್ಲೂ ದೇಶಭಕ್ತಿಯ ರೋಮಾಂಚನ ಮೂಡಿಸಲಿವೆ. ದೆಹಲಿ ಪೊಲೀಸರು ಮತ್ತು ಮೂರೂ ಸಶಸ್ತ್ರ ಪಡೆಗಳಿಂದ ಪ್ರಧಾನಿಯವರಿಗೆ ಲಭಿಸುವ ‘ಗಾರ್ಡ್ ಆಫ್ ಆನರ್’ (Guard of Honour) ಗೌರವದ ನಂತರ, ಧ್ವಜಾರೋಹಣದ ವೇಳೆ ಕೇಳಿಬರುವ 21 ತೋಪುಗಳ ಗೌರವ ಸಮರ್ಪಣೆ (21-Gun Salute) ಹಾಗೂ ವಾಯುಪಡೆಯ ಹೆಲಿಕಾಪ್ಟರ್‌ಗಳ ಮೂಲಕ ಕೆಂಪು ಕೋಟೆಯ ಮೈದಾನದ ಮೇಲೆ ನೆರವೇರುವ ಪುಷ್ಪವೃಷ್ಟಿಯು ಈ ಬಾರಿಯ ಮುಖ್ಯ ಆಕರ್ಷಣೆಯಾಗಿರಲಿದೆ. ಆ ಬಳಿಕ ಪ್ರಧಾನಿಯವರಿಂದ ತ್ರಿವರ್ಣ ಧ್ವಜಾರೋಹಣ ಹಾಗೂ ದೇಶವನ್ನು ಉದ್ದೇಶಿಸಿ ಐತಿಹಾಸಿಕ ಭಾಷಣ ನೆರವೇರಲಿದೆ.

ವಂದೇ ಮಾತರಂ’ 150ನೇ ವರ್ಷದ ಐತಿಹಾಸಿಕ ಸಂಭ್ರಮ
ಭಾರತದ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ರಚನೆಯಾಗಿ 150 ವರ್ಷಗಳು ಪೂರೈಸುತ್ತಿರುವ ಸವಿನೆನಪಿಗಾಗಿ ವಿಶೇಷ ಗೌರವ ಸಲ್ಲಿಸಲಾಗುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೆಂಪು ಕೋಟೆಗೆ ಆಗಮಿಸುತ್ತಿದ್ದಂತೆ ರಾಷ್ಟ್ರಗೀತೆಯ ಜೊತೆಗೆ ವಂದೇ ಮಾತರಂ ಗೀತೆಯ ಗಾಯನ ಜರುಗಲಿದೆ.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಲಕ್ಷಾಂತರ ಜನರಲ್ಲಿ ದೇಶಭಕ್ತಿಯ ಕಿಚ್ಚು ಹೊತ್ತಿಸಿದ್ದ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ರಚನೆಯಾಗಿ 150 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ, ಕೆಂಪು ಕೋಟೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಧಾನಿ ಮೋದಿ ಅವರ ಆಗಮನದ ವೇಳೆ ಈ ಗೀತೆಯನ್ನು ಗಾಯನ ಮಾಡಲಾಗುತ್ತಿದೆ. ಜ್ಞಾನಪಥದಲ್ಲಿ 2,500 ಎನ್‌ಸಿಸಿ ಕೆಡೆಟ್‌ಗಳು ಮತ್ತು ‘ಮೈ ಭಾರತ್’ (MY Bharat) ಸ್ವಯಂಸೇವಕರು ಹೂವುಗಳ ಅಲಂಕಾರದೊಂದಿಗೆ ‘ವಂದೇ ಮಾತರಂ’ ಆಕಾರದಲ್ಲಿ ಆಸೀನರಾಗಲಿದ್ದಾರೆ. ಭಾರತೀಯ ವಾಯುಪಡೆಯ ಎಂಐ-17 (Mi-17) ಹೆಲಿಕಾಪ್ಟರ್ ‘ವಂದೇ ಮಾತರಂ’ 150 ವರ್ಷಗಳ ಸ್ಮರಣಾರ್ಥದ ಬ್ಯಾನರ್ ಹಿಡಿದು ಆಗಮಿಸಿ, ನೆರೆದಿರುವ ಜನಸ್ತೋಮದ ಮೇಲೆ ಪುಷ್ಪವೃಷ್ಟಿ ಸುರಿಸಲಿದೆ.

ಈಗಾಗಲೇ ಆಗಸ್ಟ್ 08 ರಿಂದ 15ರವರೆಗೆ ಸೇನೆ, ನೌಕಾಪಡೆ, ವಾಯುಪಡೆ, ಕೋಸ್ಟ್ ಗಾರ್ಡ್, ಸಿಆರ್‌ಪಿಎಫ್, ಬಿಎಸ್‌ಎಫ್ ಸೇರಿದಂತೆ ವಿವಿಧ ಪಡೆಗಳ ಮಿಲಿಟರಿ ಬ್ಯಾಂಡ್ ತಂಡಗಳು ದೇಶದ 343 ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರಿಗಾಗಿ ದೇಶಭಕ್ತಿ ಸಂಗೀತ ಪ್ರದರ್ಶನ ನೀಡುತ್ತಿವೆ.
‘ಯುವ ಶಕ್ತಿ’ ಮತ್ತು ವಿಕಸಿತ ಭಾರತ@2047
2026ರ ಆಚರಣೆಯು ‘ವಿಕಸಿತ ಭಾರತ@2047ಕ್ಕಾಗಿ ಯುವ ಶಕ್ತಿ’ ಎಂಬ ಥೀಮ್ ಹೊಂದಿದ್ದು, 2026ರ ಅಂತಾರಾಷ್ಟ್ರೀಯ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತ ಓಲಿಂಪಿಯಾಡ್‌ನಲ್ಲಿ ಪದಕ ಗೆದ್ದ 19 ಸಾಧಕ ವಿದ್ಯಾರ್ಥಿಗಳನ್ನು ಕೆಂಪು ಕೋಟೆಯ ಮುಖ್ಯ ವೇದಿಕೆಯಲ್ಲಿ ಆಹ್ವಾನಿಸಿ ಗೌರವಿಸಲಾಗುತ್ತಿದೆ. ಇದೇ ವೇಳೆ ಭಾರತವು ಬಾಹ್ಯಾಕಾಶ ಮತ್ತು ಪರಮಾಣು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸಿದ ಪ್ರಗತಿಯನ್ನು ಪ್ರದರ್ಶಿಸುವ ಅಲಂಕಾರಿಕ ವ್ಯವಸ್ಥೆ ಮಾಡಲಾಗಿದೆ.

5,000 ಪ್ರಮುಖ ವಿಶೇಷ ಅತಿಥಿಗಳು
ದೇಶದ ನಾನಾ ರಂಗಗಳಲ್ಲಿ ಸಾಧನೆ ಮಾಡಿದ ಸುಮಾರು 5,000 ವಿಶೇಷ ಅತಿಥಿಗಳಿಗೆ ಆಹ್ವಾನ ನೀಡಲಾಗಿದ್ದು, ಅವರ ಪ್ರಮುಖ ವರ್ಗಗಳು ಹೀಗಿವೆ:
ಯುವ ಮತ್ತು ಉದ್ಯಮ ರಂಗ: ರಾಷ್ಟ್ರೀಯ ನಾವೀನ್ಯತಾ ಕಾರ್ಯಕ್ರಮಗಳ ಯುವ ಸಂಶೋಧಕರು, ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಸ್ಕೀಮ್‌ನ ಅತ್ಯುತ್ತಮ ಇಂಟರ್ನ್‌ಗಳು, ನವೋದ್ಯಮಗಳ (Startups) ಸಾಧಕರು, ಪಿಎಂ ಕೌಶಲ್ಯ ವಿಕಾಸ ಯೋಜನೆಯಡಿ ತರಬೇತಿ ಪಡೆದ ಯುವಕರು ಮತ್ತು ‘ಮೈ ಭಾರತ್’ ಸ್ವಯಂಸೇವಕರು.

ಸಾಮಾಜಿಕ ಹಾಗೂ ಆರ್ಥಿಕ ರಂಗ: ‘ನಮಸ್ತೆ’, ‘ಪಿಎಂ ಅಜಯ್’, ‘ಸೀಡ್’ ಯೋಜನೆಗಳ ಫಲಾನುಭವಿಗಳು, ದೆಹಲಿ ಸರ್ಕಾರಿ ಶಾಲೆಯ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳು, ಅಂತಾರಾಷ್ಟ್ರೀಯ ಯೋಗ ದಿನದ ಸ್ವಯಂಸೇವಕರು, ಪಿಎಂ ಮುದ್ರಾ ಯೋಜನೆಯ ಮಹಿಳಾ ಉದ್ಯಮಿಗಳು, ಪಿಎಂ ಆವಾಸ್ (ನಗರ) ಹಾಗೂ ಪಿಎಂ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆಯ ಫಲಾನುಭವಿಗಳು.
ಶ್ರಮಿಕರು ಮತ್ತು ಕಾಯಕಯೋಗಿಗಳು: ಪಿಎಂ ವಿಶ್ವಕರ್ಮ ಯೋಜನೆಯ ಕುಶಲಕರ್ಮಿಗಳು, ‘ಭಾರತ್ ಟ್ಯಾಕ್ಸಿ’ ಚಾಲಕರು, ಪಿಎಂ ಸ್ವನಿಧಿ ಯೋಜನೆಯ ಬೀದಿಬದಿ ವ್ಯಾಪಾರಿಗಳು, ದೆಹಲಿ ಮೆಟ್ರೋ ಮತ್ತು ಕರ್ತವ್ಯ ಪಥ/ಸೆಂಟ್ರಲ್ ವಿಸ್ಟಾ ನಿರ್ಮಾಣ ಕಾರ್ಮಿಕರು, ನಗರ ನೈರ್ಮಲ್ಯ ಸಿಬ್ಬಂದಿ ಹಾಗೂ ಸರ್ಕಾರಿ ಆಸ್ಪತ್ರೆಗಳ ನರ್ಸಿಂಗ್ ಮತ್ತು ವಾರ್ಡ್ ಸಿಬ್ಬಂದಿ.

ಸಾಂಸ್ಕೃತಿಕ ವೈವಿಧ್ಯತೆ: ದೇಶದ ವಿವಿಧ ರಾಜ್ಯಗಳ ಸಾಂಪ್ರದಾಯಿಕ ಉಡುಪಿನಲ್ಲಿ ಆಗಮಿಸಲಿರುವ 1,500ಕ್ಕೂ ಹೆಚ್ಚು ದೆಹಲಿ ನಿವಾಸಿಗಳು ಭಾರತದ ‘ಕಿರು ನೋಟ’ವನ್ನು ಪ್ರದರ್ಶಿಸಲಿದ್ದಾರೆ.
ರಕ್ಷಣಾ ಸಚಿವಾಲಯವು ‘ಮೈ ಗವ್’ (MyGov) ಸಹಯೋಗದಲ್ಲಿ ಆಯೋಜಿಸಿದ್ದ ಎಐ (AI) ಕುರಿತ ಪ್ರಬಂಧ ಸ್ಪರ್ಧೆ, ಚಿತ್ರಕಲೆ ಹಾಗೂ ‘ಭಾರತದ ಸಂವಿಧಾನ’, ‘ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು’, ‘ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಸಾಧನೆ’ ಕುರಿತ ರಸಪ್ರಶ್ನೆ ಸ್ಪರ್ಧೆಗಳ 600ಕ್ಕೂ ಹೆಚ್ಚು ವಿಜೇತರು ಕೆಂಪು ಕೋಟೆಯ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಸಾರ್ವಜನಿಕರ ಅನುಕೂಲಕ್ಕಾಗಿ ವಿಶೇಷ ವ್ಯವಸ್ಥೆಗಳು:
ಸಾರ್ವಜಸಾನಿಕರ ವಸ್ತುಗಳನ್ನು ಸುರಕ್ಷಿತವಾಗಿಡಲು 6 ಪ್ರಮುಖ ಸ್ಥಳಗಳಲ್ಲಿ 25 ಕ್ಲೋಕ್ ರೂಮ್‌ಗಳನ್ನು ಸ್ಥಾಪಿಸಲಾಗಿದೆ. ಜನರಿಗೆ ನೆರವಾಗಲು ಎನ್‌ಸಿಸಿ ಮತ್ತು ಮೈ ಭಾರತ್‌ನ 200 ಸ್ವಯಂಸೇವಕರು ಕಾರ್ಯನಿರ್ವಹಿಸಲಿದ್ದಾರೆ.
ಆಗಸ್ಟ್ 15ರಂದು ಬೆಳಿಗ್ಗೆ 4 ಗಂಟೆಯಿಂದಲೇ ಮೆಟ್ರೋ ಸಂಚಾರ ಆರಂಭವಾಗಲಿದ್ದು, ಆಹ್ವಾನಿತರಿಗೆ ಇ-ಆಹ್ವಾನ ಪತ್ರಿಕೆಯೊಂದಿಗೆ ಉಚಿತ ಮೆಟ್ರೋ ಕ್ಯೂಆರ್ ಕೋಡ್ ಒದಗಿಸಲಾಗಿದೆ. ದಿವ್ಯಾಂಗರು ಮತ್ತು ಹಿರಿಯರಿಗಾಗಿ 20 ವೀಲ್‌ಚೇರ್‌ಗಳು, ಗೂಗಲ್ ಮತ್ತು ಮಾಪ್‌ಲ್ಸ್ ಆಪ್‌ಗಳಲ್ಲಿ ಸಂಚಾರ ಮಾರ್ಗಸೂಚಿ, ಮಳೆಯಿಂದ ರಕ್ಷಣೆಗೆ ‘ರೈನ್ ಪೋಂಚೊ’ ಹಾಗೂ ಪಾದಚಾರಿಗಳಿಗೆ ಸುಲಭವಾಗಿ ಚಲಿಸಲು ರಾಂಪ್ ಮತ್ತು ಮೆಟ್ಟಿಲುಗಳ ವ್ಯವಸ್ಥೆ ಮಾಡಲಾಗಿದೆ.

ಇನ್ನೂ ಈ ಹಿಂದೆ ಆಸನ ವ್ಯವಸ್ಥೆಗಳಿಗೆ ನದಿಗಳ ಹೆಸರಿಡಲಾಗಿತ್ತು. ಆದರೆ ಈ ಬಾರಿ ಜಲ ಸಂರಕ್ಷಣೆಯ ಜಾಗೃತಿಗಾಗಿ ಭಾರತದ ಪ್ರಮುಖ ಸರೋವರಗಳ ಹೆಸರುಗಳನ್ನು ಇಡಲಾಗಿದೆ. ಕಾರ್ಯಕ್ರಮ ಮುಗಿದ ತಕ್ಷಣವೇ ಕೆಂಪು ಕೋಟೆಯ ಮೈದಾನವನ್ನು ಸ್ವಚ್ಛಗೊಳಿಸಲು ಎನ್‌ಸಿಸಿ ಹಾಗೂ ಮೈ ಭಾರತ್ ಸ್ವಯಂಸೇವಕರಿಂದ ವಿಶೇಷ ‘ಪ್ಲಾಗಿಂಗ್’ ಮತ್ತು ಸ್ವಚ್ಛತಾ ಅಭಿಯಾನ ನಡೆಯಲಿದೆ. ಮಳೆ ಬಂದರೆ ನೀರು ನಿಲ್ಲದಂತೆ ಕೆಂಪು ಕೋಟೆಯ ಸುತ್ತಮುತ್ತಲಿನ ಒಳಚರಂಡಿ ಮತ್ತು ತ್ಯಾಜ್ಯ ನೀರು ನಿರ್ಗಮನ ವ್ಯವಸ್ಥೆಯನ್ನು ಸಂಪೂರ್ಣವಾಗಿ ಶುಚಿಗೊಳಿಸಲಾಗಿದೆ.
ಆನ್‌ಲೈನ್ ಟಿಕೆಟ್ ಬುಕಿಂಗ್ ವ್ಯವಸ್ಥೆ
2026ರ ಆಗಸ್ಟ್ 15ರಂದು ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯಲಿರುವ 80ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮವನ್ನು ವೀಕ್ಷಿಸಲು ಸಾರ್ವಜನಿಕರು ರಕ್ಷಣಾ ಸಚಿವಾಲಯದ ಅಧಿಕೃತ ‘ಆಮಂತ್ರಣ’ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಮೊಬೈಲ್ ಫೋನ್ ಅಥವಾ ಕಂಪ್ಯೂಟರ್ ಬಳಸಿ ಸುಲಭವಾಗಿ ಟಿಕೆಟ್ ಕಾಯ್ದಿರಿಸಬಹುದು. ಬುಕಿಂಗ್ ಪೂರ್ಣಗೊಳಿಸಲು ಗುರುತಿನ ಚೀಟಿ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆ ಅಗತ್ಯವಿದೆ.
ಸಾರ್ವಜನಿಕರ ಅನುಕೂಲಕ್ಕಾಗಿ ಮೂರು ವಿಭಿನ್ನ ದರ ಮತ್ತು ಆಸನ ವಿಭಾಗಗಳಲ್ಲಿ ಟಿಕೆಟ್‌ಗಳು ಲಭ್ಯವಿರಲಿವೆ. 20, 100, 500 ರೂ.ಗಳಲ್ಲಿ ಟಿಕೆಟ್ ದೊರೆಯಲಿದೆ.

ದೆಹಲಿಯಲ್ಲಿ ಹೈ-ಅಲರ್ಟ್ ಮತ್ತು ಬಿಗಿ ಭದ್ರತಾ ವ್ಯವಸ್ಥೆ
ಸ್ವಾತಂತ್ರ್ಯ ದಿನಾಚರಣೆಯು ಶಾಂತಿಯುತವಾಗಿ ಜರುಗಲು ದೆಹಲಿ ಪೊಲೀಸರು ರಾಜಧಾನಿಯಾದ್ಯಂತ ಅತ್ಯಂತ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.
ನಗರದ ಗಡಿ ಪ್ರದೇಶಗಳು, ದೆಹಲಿ ಪ್ರವೇಶಿಸುವ ವಾಹನಗಳು, ಜನದಟ್ಟಣೆಯ ಮಾರುಕಟ್ಟೆಗಳು, ಮಾಲ್‌ಗಳು, ಹೋಟೆಲ್‌ಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಪೋಲಿಸ್ ಮತ್ತು ಅರೆಸೇನಾ ಪಡೆಗಳನ್ನು ಹೆಚ್ಚಿಸಲಾಗಿದೆ. ಹರಿಯಾಣ ಗಡಿಯ ಆಯಾ ನಗರದಲ್ಲಿ ವಾಹನಗಳ ತೀವ್ರ ತನಿಖೆ ನಡೆಸಲಾಗುತ್ತಿದೆ. ಪೂರ್ವ ದೆಹಲಿ ಹಾಗೂ ಯಮುನಾ ನದಿ ತೀರ ಸೇರಿದಂತೆ ಪ್ರಮುಖ ಹಾಗೂ ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾ ಇಡಲು ಡ್ರೋನ್‌ಗಳನ್ನು ಬಳಸಲಾಗುತ್ತಿದೆ.
ಈಶಾನ್ಯ ದೆಹಲಿಯಲ್ಲಿ ಯಾವುದೇ ಅಹಿತಕರ ಘಟನೆಗಳು ಅಥವಾ ಜಂಟಿ ಪ್ರತಿಭಟನೆಗಳನ್ನು ಎದುರಿಸಲು ಬೃಹತ್ ‘ಮಾಕ್ ಡ್ರಿಲ್’ ಆಯೋಜಿಸಲಾಗಿತ್ತು. ಇದರಲ್ಲಿ 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದು, ವಾಟರ್ ಕ್ಯಾನನ್, ‘ವಜ್ರ’ ವಾಹನಗಳು ಮತ್ತು ಅಶ್ರುವಾಯು ಬಂದೂಕುಗಳನ್ನು ಬಳಸುವ ತರಬೇತಿ ನೀಡಲಾಗಿದೆ.


