ಮುಂಬೈ: IIT ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಕೇಸ್ ವಿಚಾರಣೆ ನಡೆಯುತ್ತಿದೆ. ಈ ಬೆನ್ನಲ್ಲೇ ಸಾವಿಗೆ ಪ್ರಚೋದನೆ ನೀಡಿದ ಆರೋಪ ಹೊತ್ತಿರುವ ಪ್ರಾಧ್ಯಾಪಕರನ್ನ ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ.
ಮೃತ ಸಾಹಿಲ್ ಕುಟುಂಬದವರು ಕ್ಯಾಂಪಸ್ ಅಧಿಕಾರಿಗಳು ಮತ್ತು ಪ್ರಾಧ್ಯಾಪಕರ ವಿರುದ್ಧ ಜಾತಿ ಆಧಾರಿತ ತಾರತಮ್ಯದ ಆರೋಪದಡಿ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಮುಂಬೈ ಪೊಲೀಸರು ಪ್ರೊಫೆಸರ್ ಡೂಲ್ಲಾ ವಿರುದ್ಧ FIR ದಾಖಲಿಸಿದ್ದಾರೆ. ಇದೀಗ ಪ್ರಕರಣವನ್ನು ಮುಂಬೈ ಕ್ರೈಂ ಬ್ರ್ಯಾಂಚ್ಗೆ ವರ್ಗಾಯಿಸಲಾಗಿದ್ದು, ಆರೋಪಗಳ ಬಗ್ಗೆ ತನಿಖೆ ನಡೆಯುತ್ತಿದೆ.
10 ಸದಸ್ಯರ ಸಮಿತಿ ರಚಿಸಿದ IIT ಬಾಂಬೆ
ಸಾಹಿಲ್ ಸಾವಿನ ಸುತ್ತಲಿನ ಘಟನೆಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸಲು IIT ಬಾಂಬೆ 10 ಸದಸ್ಯರ ಸಮಿತಿಯನ್ನು ರಚಿಸಿದೆ. ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ.
ಪೋಷಕರು, ವಿದ್ಯಾರ್ಥಿಗಳ ಹೇಳಿಕೆ ದಾಖಲು
ಇತ್ತ ಮುಂಬೈ ಕ್ರೈಂ ಬ್ರ್ಯಾಂಚ್ ಕೂಡ ತನಿಖೆಯನ್ನು ಚುರುಕುಗೊಳಿಸಿದೆ. ಮಂಗಳವಾರ ಸಾಹಿಲ್ ಅವರ ಪೋಷಕರ ಹೇಳಿಕೆ ದಾಖಲಿಸಲಾಗಿದೆ. ಪರೀಕ್ಷಾ ಹಾಲ್ನಲ್ಲಿ ಸಾಹಿಲ್ ಜೊತೆ ಇದ್ದವರು, ಹಾಸ್ಟೆಲ್ನಲ್ಲಿ ಅವರ ಸಂಪರ್ಕದಲ್ಲಿದ್ದವರು ಹಾಗೂ ಸ್ನೇಹಿತರಿಂದ ಮಾಹಿತಿ ಪಡೆಯಲಾಗಿದೆ.
ಸಾಹಿಲ್ನ ಚಾಟ್ ಜಿಪಿಟಿ ಹಿಸ್ಟರಿ ಪರಿಶೀಲನೆ
ಸಾಹಿಲ್ ಸಾವಿನ ಹಿಂದೆ ನಡೆದಿರುವ ಘಟನೆಗಳ ಸರಣಿಯನ್ನು ತಿಳಿದುಕೊಳ್ಳಲು ಪೊಲೀಸರು ತಾಂತ್ರಿಕ ಸಾಕ್ಷ್ಯಗಳ ಮೇಲೂ ಗಮನಹರಿಸಿದ್ದಾರೆ. ಸಾಹಿಲ್ ಬಳಸುತ್ತಿದ್ದ ಲಾಕ್ ಆಗಿರುವ ಐಫೋನ್ ಅನ್ನು ತಾಂತ್ರಿಕ ಸಹಾಯದಿಂದ ಪರಿಶೀಲಿಸಲಾಗುತ್ತಿದೆ.ಇದನ್ನೂ ಓದಿ: ತರಬೇತಿ ಮುಗಿಸಿ ವಾಪಸ್ ಬರುವಾಗ ದುರಂತ – ಅಮೆರಿಕದ ಮತ್ತೊಂದು F-16 ಯುದ್ಧವಿಮಾನ ಪತನ
ಅವರ ಫೋನ್ನಿಂದ ಡೇಟಾ ಪಡೆಯಲು ಪೊಲೀಸರು ಪ್ರಯತ್ನಿಸುತ್ತಿದ್ದು, ವಿಶೇಷವಾಗಿ ಚಾಟ್ ಜಿಪಿಟಿ ಹಿಸ್ಟರಿಯನ್ನು ಪರಿಶೀಲಿಸುವ ಪ್ರಯತ್ನ ನಡೆಯುತ್ತಿದೆ. ಇದರಿಂದ ಸಾಹಿಲ್ ಮನಸ್ಥಿತಿ, ಅವರು ಎದುರಿಸಿದ್ದ ಸಮಸ್ಯೆಗಳು ಹಾಗೂ ಸಾವಿಗೂ ಮುನ್ನ ನಡೆದ ಘಟನೆಗಳ ಬಗ್ಗೆ ಯಾವುದೇ ಮಾಹಿತಿ ಸಿಗುತ್ತದೆಯೇ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ತನಿಖೆಯಲ್ಲಿ ಸಿಗುತ್ತಿರುವ ಡಿಜಿಟಲ್ ಸಾಕ್ಷ್ಯಗಳು, ದಾಖಲಾಗಿರುವ ಹೇಳಿಕೆಗಳು ಮತ್ತು ಇತರ ಮಾಹಿತಿಯನ್ನು ಅಧಿಕಾರಿಗಳು ಒಟ್ಟಿಗೆ ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ರಾಮನಗರ | ಹಳ್ಳದ ನೀರಲ್ಲಿ ಮುಳುಗಿ ಇಬ್ಬರು ಮಕ್ಕಳು ದುರ್ಮರಣ

