– ಬರ್ತ್‌ಡೇ ಸೆಲೆಬ್ರೇಷನ್ ನೆಪದಲ್ಲಿ ಮರ್ಡರ್ ಪ್ಲ್ಯಾನ್?
ನವದೆಹಲಿ: ಮಸ್ಸೂರಿಯ (Missouri) ಹೋಂಸ್ಟೇಯೊಂದರಲ್ಲಿ (Home Stay Death) ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಘಟನೆ ನಡೆದ ಸುಮಾರು ಒಂದು ತಿಂಗಳ ಬಳಿಕ, ಮೃತೆಯ ಪತಿಯನ್ನು ದೆಹಲಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
27 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಪಿ. ರಾಧಾ ಗಾಯತ್ರಿ, ಪತಿ ಸೋಮಯಾಶ್ರೀ ಚರಣ್‌ನ ಹುಟ್ಟುಹಬ್ಬ ಆಚರಿಸಲು ಮಸ್ಸೂರಿ-ಧನೌಲ್ತಿ ರಸ್ತೆಯಲ್ಲಿರುವ ಹೋಂಸ್ಟೇಗೆ ತೆರಳಿದ್ದರು. ಜೂ. 15ರಂದು ಮಹಿಳೆ ಹೋಂಸ್ಟೇ ರೂಮ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು.
ಘಟನೆ ವೇಳೆ ಪತಿ, ರಾತ್ರಿ ಡ್ರಿಕ್ಸ್ ಮಾಡಿ ಮಲಗಿದ್ವಿ, ಬೆಳಿಗ್ಗೆ ಎದ್ದಾಗ ಪತ್ನಿ ಮೃತಪಟ್ಟಿರುವುದು ಗೊತ್ತಾಯಿತು ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದ. ಆದರೆ, ಸ್ಥಳ ಪರಿಶೀಲನೆ ವೇಳೆ ಮೃತದೇಹ ಬಟ್ಟೆಗಳಿಲ್ಲದೆ ಬೆತ್ತಲೆಯಾಗಿ ನೆಲದ ಮೇಲೆ ಪತ್ತೆಯಾಗಿತ್ತು. ಬೆಡ್‌ಶೀಟ್ ಮೇಲೆ ರಕ್ತದ ಕಲೆಗಳು ಕಂಡುಬಂದಿದ್ದವು. ಕೊಠಡಿಯಲ್ಲಿ ಎರಡು ಖಾಲಿ ಮದ್ಯದ ಬಾಟಲಿಗಳು ಹಾಗೂ ಆಹಾರ ಪದಾರ್ಥಗಳೂ ಪತ್ತೆಯಾಗಿದ್ದವು. ಪತಿಯ ಹುಟ್ಟುಹಬ್ಬ ಆಚರಿಸಲು ಟ್ರಿಪ್‌ಗೆ ತೆರಳಿದ್ದ ವೇಳೆ ಪತ್ನಿಯನ್ನು ಕೊಲೆ ಮಾಡಲು ಪ್ಲ್ಯಾನ್ ಮಾಡಿದ್ನಾ ಎಂಬ ಶಂಕೆ ವ್ಯಕ್ತವಾಗಿದೆ.ಇದನ್ನೂ ಓದಿ: ಜಾನಕಿ ಅಮ್ಮ ಮೊದಲು, ಕೊನೆಯ ಹಾಡು ಹಾಡಿದ್ದು, ಗಾಯನ ನಿಲ್ಲಿಸಿದ್ದು ಮೈಸೂರಿನಲ್ಲೇ!
ಮೃತಳ ತಂದೆ ಪಿ. ಸುಧಾಕರ್, ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು. ಪತಿಯ ಪಾತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು.
ತನಿಖೆಯ ವೇಳೆ ಪತಿಯ ಪಾತ್ರದ ಬಗ್ಗೆ ಸಾಕ್ಷ್ಯಗಳು ದೊರೆತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಮಸ್ಸೂರಿ ನ್ಯಾಯಾಲಯದಿಂದ ಜಾಮೀನು ರಹಿತ ವಾರಂಟ್ ಪಡೆದು, ಪೂರ್ವ ದೆಹಲಿಯ ಮಧು ವಿಹಾರ್ ಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಶನಿವಾರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ಇನ್ನಷ್ಟು ತನಿಖೆ ಮುಂದುವರಿಸಿದ್ದಾರೆ. ಈ ದಂಪತಿ ಕಳೆದ ವರ್ಷ ನವೆಂಬರ್ 8ರಂದು ವಿವಾಹವಾಗಿದ್ದರು.ಇದನ್ನೂ ಓದಿ: ಪೆಟ್ರೋಲ್ ಟ್ಯಾಂಕ್‌ಗೆ ನೀರು ಹಾಕಿ ಎಥೆನಾಲ್ ವಿರುದ್ಧ ಅಪಪ್ರಚಾರ – ಯೂಟ್ಯೂಬರ್ ವಿರುದ್ಧ ಟೊಯೋಟಾ ಎಫ್‌ಐಆರ್
