ನವದೆಹಲಿ: ದೆಹಲಿಯ ಚಾವರಿ ಬಜಾರ್ನಲ್ಲಿ (Chawri Bazaar) ನಿರ್ಮಾಣ ಹಂತದಲ್ಲಿದ್ದ ಮೂರು ಅಂತಸ್ತಿನ ಕಟ್ಟಡ ಕುಸಿದು (Building Collapse) ಇಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಎಂಜಿನಿಯರ್ಗಳನ್ನು (MCD Engineers) ಅಮಾನತುಗೊಳಿಸಲಾಗಿದೆ.
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಹಿನ್ನೆಲೆ ಸಹಾಯಕ ಎಂಜಿನಿಯರ್ ಮತ್ತು ಕಿರಿಯ ಎಂಜಿನಿಯರ್ನನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಇನ್ನು ಕಟ್ಟಡ ನಿರ್ಮಾಣಕ್ಕೆ ಕಾರಣರಾದ ಬಿಲ್ಡರ್ಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಬಿಡುಗಡೆಗೆ ಆರ್ಥಿಕ ಸಮಸ್ಯೆ – ಹೈಕೋರ್ಟ್ಗೆ ರಾಜ್ಯ ಸರ್ಕಾರದಿಂದ ಪ್ರಮಾಣಪತ್ರ ಸಲ್ಲಿಕೆ
ಹಳೆ ದೆಹಲಿಯ ಚಾವರಿ ಬಜಾರ್ ಮೆಟ್ರೋ ನಿಲ್ದಾಣದ ಸಮೀಪವಿರುವ ಗಲಿ ಸಿತಾರಾದಲ್ಲಿ ಗುರುವಾರ ಬೆಳಗ್ಗೆ ಸುಮಾರು 9:50ಕ್ಕೆ ಈ ಅವಘಡ ಸಂಭವಿಸಿತ್ತು. ನಿರ್ಮಾಣ ಹಂತದಲ್ಲಿದ್ದ ಮೂರು ಅಂತಸ್ತಿನ ಕಟ್ಟಡ ಏಕಾಏಕಿ ಕುಸಿದು ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಇದನ್ನೂ ಓದಿ: ವಿಜಯಪುರದಲ್ಲಿ ಗರ್ಭಿಣಿ ಪತ್ನಿ ಎದುರೇ ಪತಿಗೆ ಗುಂಡಿಕ್ಕಿ ಹತ್ಯೆ
ಘಟನೆಗೆ ಸಂಬಂಧಿಸಿದಂತೆ ಹಳೆ ದೆಹಲಿ ವಲಯದ ಉಪ ಆಯುಕ್ತರು ಇಬ್ಬರು ಅಧಿಕಾರಿಗಳ ಅಮಾನತು ಆದೇಶ ಹೊರಡಿಸಿದ್ದಾರೆ. ಕರ್ತವ್ಯ ನಿರ್ವಹಣೆಯಲ್ಲಿ ಗಂಭೀರ ನಿರ್ಲಕ್ಷ್ಯ ತೋರಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ವಿಚಾರಣೆ ಪೂರ್ಣಗೊಳ್ಳುವವರೆಗೆ ಅಮಾನತು ಮುಂದುವರಿಯಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ತಮಿಳುನಾಡು ಜನರಿಗೆ ಸಿಎಂ ದೀಪಾವಳಿ ಗಿಫ್ಟ್; 10 ತರಕಾರಿಗಳುಳ್ಳ 2.50 ಕೆಜಿ ಪ್ಯಾಕೆಟ್ 100 ರೂ.ಗೆ ಲಭ್ಯ
ಬಿಲ್ಡರ್ಗಳಿಗಾಗಿ ಪೊಲೀಸರ ಶೋಧ:
ಕಟ್ಟಡ ನಿರ್ಮಾಣದ ಹೊಣೆ ಹೊತ್ತಿದ್ದ ಬಿಲ್ಡರ್ಗಳ ಗುರುತು ಪತ್ತೆಯಾಗಿದ್ದು, ಅವರನ್ನು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ ಎಂದು ಕೇಂದ್ರ ದೆಹಲಿ ಡಿಸಿಪಿ ರೋಹಿತ್ ರಾಜ್ಬೀರ್ ಸಿಂಗ್ ತಿಳಿಸಿದ್ದಾರೆ. ಕಟ್ಟಡದ ನಿರ್ಮಾಣ ಕಾರ್ಯಕ್ಕೆ ಯಾವುದೇ ಅನುಮತಿ ಇರಲಿಲ್ಲ. ಈ ಅಕ್ರಮದ ಬಗ್ಗೆ ಸಂಬಂಧಪಟ್ಟ ಮುನ್ಸಿಪಲ್ ಇಲಾಖೆಗಳಿಗೂ ಪೊಲೀಸರು ಪತ್ರ ಬರೆದಿದ್ದರು ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್; ತುಟ್ಟಿ ಭತ್ಯೆ ಹೆಚ್ಚಳ
ದೀಪಾವಳಿ ಸಂಭ್ರಮದ ನಡುವೆ ದುರಂತ:
ದೀಪಾವಳಿ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ಜನಸಂದಣಿ ಹೆಚ್ಚಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಇಬ್ಬರು ಮೃತಪಟ್ಟಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಅವರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಗಾಯಗೊಂಡ ನಾಲ್ವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಜನರ ಅರಮನೆಯಲ್ಲಿ ಕನ್ನಡದ ಕಂಪು; ವಿಧಾನಸೌಧದಲ್ಲಿ 110 ಕನ್ನಡ ನುಡಿಫಲಕಗಳ ಲೋಕಾರ್ಪಣೆ
ದೆಹಲಿ ಅಗ್ನಿಶಾಮಕ ದಳ ಸೇರಿದಂತೆ ಹಲವು ತಂಡಗಳು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ. ಆರಂಭದಲ್ಲಿ ಹಲವು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿತ್ತು. ಇದನ್ನೂ ಓದಿ: ವಿದ್ಯಾರ್ಥಿನಿ ಮೇಲೆ ಚೈನ್ಸಾ ಅಟ್ಯಾಕ್ – ಪ್ರೀತಿ ನಿರಾಕರಿಸಿದ್ದಕ್ಕೆ ರುಂಡ ಕತ್ತರಿಸಲು ಪ್ಲ್ಯಾನ್, ಹೊಸ ಯಂತ್ರ ತಂದಿದ್ದ ಕಿರಾತಕ
ಅನುಮತಿ ಪಡೆಯದೆ ನಿರ್ಮಾಣ:
ಕುಸಿದುಬಿದ್ದ ಕಟ್ಟಡವಿದ್ದ ನಿವೇಶನ ಸುಮಾರು 50 ಚದರ ಮೀಟರ್ ವಿಸ್ತೀರ್ಣ ಹೊಂದಿತ್ತು. ಈ ಕಟ್ಟಡಕ್ಕೆ ಯಾವುದೇ ಕಟ್ಟಡ ನಿರ್ಮಾಣ ನಕ್ಷೆಗೆ ಅನುಮೋದನೆ ದೊರೆತಿರಲಿಲ್ಲ. ಅಲ್ಲದೆ, ಕಟ್ಟಡ ನಿರ್ಮಾಣದ ಕುರಿತು ಮುನ್ಸಿಪಲ್ ಇಲಾಖೆಗೆ ಯಾವುದೇ ದೂರು ಬಂದಿರಲಿಲ್ಲ ಎಂದು ಹಿರಿಯ ಎಂಸಿಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ದೀಪಾವಳಿ ನಂತರ ವಿದ್ಯುತ್ ದರ ಕೂಡ ಏರಿಕೆಯಾಗಲಿದೆ: ಬಿ.ವೈ ರಾಘವೇಂದ್ರ ಭವಿಷ್ಯ
ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಸುಮಾರು 15 ದಿನಗಳ ಹಿಂದೆಯೇ ಸ್ಥಗಿತಗೊಳಿಸಲಾಗಿತ್ತು. ಆದರೆ, ಘಟನೆಯ ದಿನ ಕಾರ್ಮಿಕರು ಮೇಲ್ಛಾವಣಿಯ ಕೆಳಭಾಗದಲ್ಲಿದ್ದ ಆಧಾರ ವ್ಯವಸ್ಥೆಯನ್ನು ತೆರವುಗೊಳಿಸುವ ಕೆಲಸದಲ್ಲಿ ತೊಡಗಿದ್ದರು ಎನ್ನಲಾಗಿದೆ. ಇನ್ನು ಸರಿಯಾಗಿ ಹೊಂದಿಕೊಳ್ಳದ, ಎಂಜಿನಿಯರಿಂಗ್ ಮಾನದಂಡಗಳಿಗೆ ಅನುಗುಣವಾಗಿರದ ನಿರ್ಮಾಣ ಸಾಮಗ್ರಿಗಳನ್ನು ಬಳಸಿರುವುದು ಕಟ್ಟಡ ಕುಸಿತಕ್ಕೆ ಕಾರಣವಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ. ಇದನ್ನೂ ಓದಿ: ಕಾಡುಗೊಂಡನಹಳ್ಳಿ ಪಿಂಕ್ ಲೈನ್ ಮೆಟ್ರೋ ನಿಲ್ದಾಣಕ್ಕೆ ʻಅರೇಬಿಕ್ ಕಾಲೇಜುʼ ಹೆಸರಿಡಿ – ಸಿಎಂಗೆ ಜಮೀರ್ ಮನವಿ
