ಮಂಡ್ಯ: ಭೂಮಿ ಕಳೆದುಕೊಂಡ ರೈತರಿಗೆ (Farmers) ಪರಿಹಾರ ನೀಡಲು ನಿರ್ಲಕ್ಷ್ಯ ಹಾಗೂ ಉಡಾಫೆ ತೋರಿದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ನ್ಯಾಯಾಲಯ ಹೊಡೆತ ನೀಡಿದೆ. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮಂಡ್ಯ (Mandya) ಜಿಲ್ಲೆಯ ಕೆ.ಆರ್ ಪೇಟೆಯ HLBC ಕಚೇರಿಯನ್ನ ಇಂದು ಜಪ್ತಿ ಮಾಡಲಾಗಿದೆ.

ಕೆ.ಆರ್ ಪೇಟೆ (KR Pete) ತಾಲೂಕಿನ ಹೊಸಹೊಳಲು ಮೇಲ್ಕಾಲುವೆ ನಿರ್ಮಾಣಕ್ಕಾಗಿ ತಾಲ್ಲೂಕಿನ 40 ಕ್ಕೂ ಹೆಚ್ಚು ರೈತರು ತಮ್ಮ ಫಲವತ್ತಾದ ಭೂಮಿಯನ್ನು ಸರ್ಕಾರಕ್ಕೆ ನೀಡಿದ್ದರು. ಭೂಮಿ ಕಳೆದುಕೊಂಡು ವರ್ಷಗಳೇ ಕಳೆದರೂ ರೈತರಿಗೆ ಸಿಗಬೇಕಾದ ನ್ಯಾಯಸಮ್ಮತ ಪರಿಹಾರ ನೀಡಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸತಾಯಿಸುತ್ತಿದ್ದರು. ರೈತರು ಹಲವು ಬಾರಿ ಕಚೇರಿಗೆ ಅಲೆದು, ಮನವಿ ಸಲ್ಲಿಸಿದರೂ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದರು.

ಅಧಿಕಾರಿಗಳ ನಿರಂತರ ಉಡಾಫೆ ಧೋರಣೆಯಿಂದ ಬೇಸತ್ತ ರೈತರು ನ್ಯಾಯಕ್ಕಾಗಿ ಕೆ.ಆರ್ ಪೇಟೆ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ರೈತರಿಗೆ ತಕ್ಷಣ ಪರಿಹಾರ ನೀಡುವಂತೆ ಆದೇಶಿಸಿತ್ತು. ಆದರೆ, ಕೋರ್ಟ್ ಆದೇಶಕ್ಕೂ ಕ್ಯಾರೆ ಎನ್ನದ ಅಧಿಕಾರಿಗಳು ಪರಿಹಾರ ನೀಡುವಲ್ಲಿ ಮತ್ತೆ ವಿಳಂಬ ಧೋರಣೆ ಮುಂದುವರಿಸಿದ್ದರು. ಇದನ್ನೂ ಓದಿ: ಅಕ್ರಮ ಸಂಬಂಧ ಆರೋಪ – ನಿಂದಿಸಿದ್ದಕ್ಕೆ ಮಹಿಳೆ ಆತ್ಮಹತ್ಯೆ, 6 ಮಂದಿ ವಿರುದ್ಧ ಎಫ್‌ಐಆರ್

ನ್ಯಾಯಾಲಯದ ಆದೇಶವನ್ನು ಪಾಲಿಸದ ಅಧಿಕಾರಿಗಳ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕೆ.ಆರ್.ಪೇಟೆ ಸಿವಿಲ್ ಕೋರ್ಟ್, ಕಾವೇರಿ ನೀರಾವರಿ ನಿಗಮದ ಹೆಚ್‌ಎಲ್‌ಬಿಸಿ ಕಚೇರಿಯನ್ನು ಜಪ್ತಿ ಮಾಡಲು ಆದೇಶ ಹೊರಡಿಸಿತು.
ನ್ಯಾಯಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಇಂದು ಕಚೇರಿಗೆ ಆಗಮಿಸಿ, ಕೋರ್ಟ್ ಆದೇಶದಂತೆ ಕಚೇರಿಯಲ್ಲಿದ್ದ ಕಂಪ್ಯೂಟರ್‌ಗಳು, ಕಡತಗಳು, ಮೇಜು ಹಾಗೂ ಕುರ್ಚಿಗಳು ಸೇರಿದಂತೆ ಎಲ್ಲಾ ಕಚೇರಿ ಸಾಮಗ್ರಿಗಳನ್ನು ವಶಕ್ಕೆ ಪಡೆದು ಕಚೇರಿಯನ್ನು ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: 2 ಕೋಟಿ ವಿಮೆ ಹಣಕ್ಕಾಗಿ ಮಾಜಿ ಸೈನಿಕನ ಕೊಲೆ – ಗ್ಲೂಕೋಸ್ ಬಾಟಲ್‌ನಲ್ಲಿ ವಿಷ ಹಾಕಿ ಪತ್ನಿಯಿಂದ ಹತ್ಯೆ?
