– ಸೋಮವಾರ ಪ್ರಮಾಣ ವಚನ ಕಾರ್ಯಕ್ರಮ
ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಯಾವಗ ಎನ್ನುವ ಪ್ರಶ್ನೆಗೆ ಬಹುತೇಕ ಉತ್ತರ ಸಿಕ್ಕಿದೆ. ಆಷಾಢದಲ್ಲಿ ಸಂಪುಟ ವಿಸ್ತರಣೆಗೆ ನಿರ್ಧರಿಸಿರುವ ಹೈಕಮಾಂಡ್ ಜುಲೈ 19 ರಂದು ರಾಜ್ಯ ನಾಯಕರಿಗೆ ಬುಲಾವ್ ನೀಡುವ ಸಾಧ್ಯತೆ ಇದೆ. ಈ ಬಾರಿಯ ಸಂಪುಟದಲ್ಲಿ ಹೈಕಮಾಂಡ್ ಟ್ವಿಸ್ಟ್‌ವೊಂದು ಕೊಡುವ ಸಾಧ್ಯತೆಯೂ ಇದೆ.
ರಾಜ್ಯ ಕಾಂಗ್ರೆಸ್ ಶಾಸಕರು ಕುತೂಹಲದಿಂದ ಎದುರು ನೋಡುತ್ತಿರುವ ಆ ದಿನ ಕಡೆಗೂ ಬಂದಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಈ ವಾರಂತ್ಯಕ್ಕಾಗುವ ಸಾಧ್ಯತೆಯಿದೆ. ಜುಲೈ 19 ರಂದು ಹೈಕಮಾಂಡ್ ನಾಯಕರ ಜೊತೆಗೆ ದೆಹಲಿಯಲ್ಲಿ ಮಹತ್ವದ ಸಭೆ ನಡೆಯುವ ಸಾಧ್ಯತೆಗಳಿವೆ.
ಜುಲೈ 18ರ ಸಂಜೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿದೆ. ಜುಲೈ 19ರಿಂದ ಎರಡು ದಿನಗಳ ಕಾಲ ಕಾಂಗ್ರೆಸ್ ಹೈಕಮಾಂಡ್ ಜೊತೆ ಸರಣಿ ಮಾತುಕತೆ ನಡೆಯುವ ಸಾಧ್ಯತೆ ಇದ್ದು, ಸಭೆಯ ಬಳಿಕ ಜುಲೈ 20 ಅಥವಾ 21ರಂದು ಹೊಸ ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.
ಸಂಪುಟ ವಿಸ್ತರಣೆಯಲ್ಲೂ ಟ್ವಿಸ್ಟ್, ಮೂರು ಸ್ಥಾನ ಖಾಲಿ
ಸಚಿವ ಸಂಪುಟ ವಿಸ್ತರಣೆಯಲ್ಲೂ ಹೈಕಮಾಂಡ್ ಟ್ವಿಸ್ಟ್ ಕೊಡಲಿದೆ ಎನ್ನಲಾಗುತ್ತಿದೆ. ಖಾಲಿ ಇರುವ 20 ಸ್ಥಾನಗಳ ಪೈಕಿ ಎಲ್ಲ ಖಾಲಿ ಸ್ಥಾನಗಳನ್ನು ಭರ್ತಿ ಮಾಡದೆ, ಮೂರು ಸ್ಥಾನಗಳನ್ನು ಖಾಲಿ ಉಳಿಸಿ ಉಳಿದ ಸ್ಥಾನಗಳನ್ನು ಭರ್ತಿ ಮಾಡುವ ಆಯ್ಕೆಯೂ ಹೈಕಮಾಂಡ್ ಪರಿಗಣನೆಯಲ್ಲಿದೆ ಎನ್ನಲಾಗಿದೆ. ಪ್ರಾದೇಶಿಕ, ಜಾತಿ ಮತ್ತು ರಾಜಕೀಯ ಸಮತೋಲನವನ್ನು ಗಮನದಲ್ಲಿಟ್ಟುಕೊಂಡು ಅಂತಿಮ ಪಟ್ಟಿಯನ್ನು ರೂಪಿಸಲಾಗುತ್ತಿದ್ದು, ಎಚ್ಚರಿಕೆಯ ಭಾಗವಾಗಿ ಮೂರು ಸ್ಥಾನಗಳು ಖಾಲಿ ಉಳಿಸಿಕೊಳ್ಳಬಹುದು ಎನ್ನಲಾಗುತ್ತಿದೆ.
ದೆಹಲಿಯಲ್ಲಿ ಸಚಿವಾಕಾಂಕ್ಷಿಗಳ ಲಾಬಿ
ಸಂಪುಟ ವಿಸ್ತರಣೆಯ ಸುಳಿವಿನ ಬೆನ್ನಲ್ಲೇ ಸಚಿವ ಸ್ಥಾನಾಕಾಂಕ್ಷಿಗಳ ಚಟುವಟಿಕೆ ದೆಹಲಿಯಲ್ಲಿ ಚುರುಕುಗೊಂಡಿದೆ. ಹಲವು ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಈಗಾಗಲೇ ದೆಹಲಿಯಲ್ಲಿ ನೆಲೆಸಿದ್ದು, ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ತಮ್ಮ ಪರವಾಗಿ ಲಾಬಿ ನಡೆಸುತ್ತಿದ್ದಾರೆ. ಶಾಸಕರಾದ ಶಿವರಾಜ್ ತಂಗಡಗಿ, ಎಸ್.ಎಸ್.ಮಲ್ಲಿಕಾರ್ಜುನ, ನರೇಂದ್ರಸ್ವಾಮಿ, ರಾಘವೇಂದ್ರ ಹಿಟ್ನಾಳ್, ಸಿ.ಎಸ್.ನಾಡಗೌಡ, ಎಂ.ಸಿ.ಸುಧಾಕರ್, ಟಿ.ಬಿ.ಜಯಚಂದ್ರ, ಹೆಚ್.ಆರ್.ಗವಿಯಪ್ಪ, ಶಿವಾನಂದ ಪಾಟೀಲ, ಹಂಪನಗೌಡ ಬಾದರ್ಲಿ, ಆರತಿ ಕೃಷ್ಣ, ಸಲೀಂ ಅಹ್ಮದ್, ಜೆ.ಟಿ.ಪಾಟೀಲ್, ರಾಜೇಂದ್ರ ರಾಜಣ್ಣ, ಎನ್.ಎಸ್.ಬೋಸರಾಜು, ಬಸವನಗೌಡ ಬಾದರ್ಲಿ, ಬಸನಗೌಡ ತುರ್ವಿಹಾಳ, ಬಸನಗೌಡ ಭಂಡಾರಿ, ಪುಟ್ಟಣ್ಣ, ಡಿ.ಟಿ.ಶ್ರೀನಿವಾಸ್, ಎ.ಎಸ್.ಪೊನ್ನಣ್ಣ ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ.
ಇಂದಿನಿಂದ ದೆಹಲಿಯಲ್ಲಿ ಹೈಕಮಾಂಡ್ ನಾಯಕರು ಲಭ್ಯವಿದ್ದು, ಸಿಎಂ ಆಗಮನಕ್ಕೂ ಮುನ್ನ ಶಾಸಕರು, ಮಾಜಿ ಸಚಿವರು ಒಂದು ರೌಂಡ್ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಸಂಪುಟದಲ್ಲಿ ಅವಕಾಶ ಕೊಡಲು ಮನವಿ ಮಾಡಲಿದ್ದಾರೆ.
