– 2027ರ ವಿಧಾನಸಭಾ ಚುನಾವಣೆಗೆ ಮೊದಲ ಅಭ್ಯರ್ಥಿ ಘೋಷಿಸಿದ ವಾರಿಸ್ ಪಂಜಾಬ್ ದೇ
ಚಂಡೀಗಢ: 2027ರ ಪಂಜಾಬ್ ವಿಧಾನಸಭೆ ಚುನಾವಣೆಗೆ ಅಕಾಲಿ ದಳ್ ವಾರಿಸ್ ಪಂಜಾಬ್ ದೇ ತನ್ನ ಮೊದಲ ಅಭ್ಯರ್ಥಿಯನ್ನ ಘೋಷಿಸಿದೆ.
ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ಪ್ರಕರಣದಲ್ಲಿ ಅಪರಾಧಿಯಾಗಿ ಶಿಕ್ಷೆಗೆ ಗುರಿಯಾಗಿದ್ದ ಕೆಹರ್ ಸಿಂಗ್ ಅವರ ಪುತ್ರ ಸತ್ವಂತ್ ಸಿಂಗ್ ಅವರನ್ನ ಬಸ್ಸಿ ಪಠಾನಾ ವಿಧಾನಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ. ಈ ಘೋಷಣೆ ಪಂಜಾಬ್‌ನ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ਅਕਾਲੀ ਦਲ ਵਾਰਿਸ ਪੰਜਾਬ ਦੇ ਨੇ ਸ਼ਹੀਦ ਪਰਿਵਾਰਾਂ ਦੇ ਸਨਮਾਨ ਨੂੰ ਮੁੱਖ ਰੱਖਦਿਆਂ 2027 ਲਈ ਐਲਾਨਿਆ ਪਹਿਲਾ ਉਮਦੀਵਾਰ
ਸ਼ਹੀਦ ਭਾਈ ਕੇਹਰ ਸਿੰਘ ਦੇ ਸਪੁੱਤਰ ਭਾਈ ਸਤਵੰਤ ਸਿੰਘ ਹੋਣਗੇ ਬੱਸੀ ਪਠਾਣਾਂ ਤੋਂ ਉਮੀਦਵਾਰ : ਬਾਪੂ ਤਰਸੇਮ ਸਿੰਘ
.
ਅੰਮ੍ਰਿਤਸਰ: ਅੱਜ ਅੰਮ੍ਰਿਤਸਰ ਪ੍ਰੈਸ ਕਲੱਬ ਵਿਖੇ ਮੈਂਬਰ ਪਾਰਲੀਮੈਂਟ ਭਾਈ ਅੰਮ੍ਰਿਤਪਾਲ ਸਿੰਘ ਜੀ ਦੇ ਪਿਤਾ… pic.twitter.com/7XmHUfiJJx— AKALI DAL WARIS PUNJAB DE (@officialadwpd) August 10, 2026
ಇಂದಿರಾ ಗಾಂಧಿ ಹತ್ಯೆಗೆ ಸಂಚು ರೂಪಿಸಿದ ಆರೋಪದಲ್ಲಿ ಕೆಹರ್ ಸಿಂಗ್ ದೋಷಿಯಾಗಿದ್ದರು. ಬಳಿಕ ಅವರಿಗೆ ಮರಣದಂಡನೆ ವಿಧಿಸಲಾಗಿತ್ತು. ಇದೀಗ ಅವರ ಪುತ್ರನಿಗೆ ಚುನಾವಣಾ ಟಿಕೆಟ್ ನೀಡಿರುವ ನಿರ್ಧಾರವು ಪಂಜಾಬ್‌ನ ಪಂಥಿಕ್ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ.
ಅಧಿಕಾರಕ್ಕಷ್ಟೇ ಸೀಮಿತವಲ್ಲ ನಮ್ಮ ರಾಜಕೀಯ: ತರ್ಸೆಮ್ ಸಿಂಗ್
ಅಕಾಲಿ ದಳ್ ವಾರಿಸ್ ಪಂಜಾಬ್ ದೇ ಪಕ್ಷದ ಮೊದಲ ಅಭ್ಯರ್ಥಿಯ ಘೋಷಣೆಯನ್ನು ಖಡೂರ್ ಸಾಹಿಬ್ ಸಂಸದ ಅಮೃತ್‌ಪಾಲ್ ಸಿಂಗ್ ಅವರ ತಂದೆ ತರ್ಸೆಮ್ ಸಿಂಗ್ ಮಾಡಿದ್ದಾರೆ. ಅಮೃತ್‌ಪಾಲ್ ಸಿಂಗ್ ಅವರು ಖಲಿಸ್ತಾನ್ ಚಳವಳಿಗೆ ಬೆಂಬಲ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ 2023ರಿಂದ ಜೈಲಿನಲ್ಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತರ್ಸೆಮ್ ಸಿಂಗ್, ಪಕ್ಷದ ರಾಜಕೀಯ ಕೇವಲ ಅಧಿಕಾರ ಪಡೆಯುವುದಕ್ಕೆ ಸೀಮಿತವಾಗಿಲ್ಲ ಎಂದು ಹೇಳಿದ್ದಾರೆ.

ಪಂಥಿಕ್ ತತ್ವಗಳು, ಪಂಜಾಬ್‌ನ ಹಕ್ಕುಗಳು ಹಾಗೂ ಸಮುದಾಯಕ್ಕಾಗಿ ತ್ಯಾಗ ಮಾಡಿದ ಕುಟುಂಬಗಳ ಗೌರವವನ್ನು ಎತ್ತಿಹಿಡಿಯುವುದು ಪಕ್ಷದ ಪ್ರಮುಖ ಉದ್ದೇಶವಾಗಿದೆ ಎಂದು ತರ್ಸೆಮ್ ಸಿಂಗ್ ಹೇಳಿದ್ದಾರೆ. ಇತ್ತೀಚೆಗೆ ಅಕಾಲಿ ದಳ್ ವಾರಿಸ್ ಪಂಜಾಬ್ ದೇ ಪಕ್ಷವು ಪಂಥ್ ಮತ್ತು ಸಮುದಾಯಕ್ಕಾಗಿ ತ್ಯಾಗ ಮಾಡಿದ ಕುಟುಂಬಗಳನ್ನು ಕಡೆಗಣಿಸುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಆದರೆ, ಮೊದಲ ಅಭ್ಯರ್ಥಿಯಾಗಿಯೇ ತ್ಯಾಗ ಮಾಡಿದ ಕುಟುಂಬದ ಸದಸ್ಯರನ್ನ ಕಣಕ್ಕಿಳಿಸುವ ಮೂಲಕ ಆ ರೀತಿಯ ಅಭಿಪ್ರಾಯವನ್ನ ಪಕ್ಷ ಆರಂಭದಲ್ಲೇ ತಳ್ಳಿಹಾಕಿದೆ ಎಂದು ಅವರು ತಿಳಿಸಿದ್ದಾರೆ.
ಸತ್ವಂತ್ ಸಿಂಗ್ ಸ್ಪರ್ಧೆ ಪಂಜಾಬ್ ಚುನಾವಣೆಯ ಮೇಲೆ ಪರಿಣಾಮ ಬೀರುತ್ತಾ?
2027ರ ಪಂಜಾಬ್ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಕಾರ್ಯತಂತ್ರ ರೂಪಿಸುತ್ತಿರುವ ಸಂದರ್ಭದಲ್ಲೇ ಸತ್ವಂತ್ ಸಿಂಗ್ ಅವರನ್ನ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ. ಬಸ್ಸಿ ಪಠಾನಾ ಕ್ಷೇತ್ರದಲ್ಲಿ ಪಂಥಿಕ್ ಮತಗಳ ಮೇಲೆ ಈ ಬೆಳವಣಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದರೆ, ಅವರ ಕುಟುಂಬದ ಹಿನ್ನೆಲೆಯೂ ರಾಜಕೀಯ ಚರ್ಚೆಗೆ ಕಾರಣವಾಗುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗ್ತಿದೆ.
2027ರ ಪಂಜಾಬ್ ವಿಧಾನಸಭೆ ಚುನಾವಣೆ ಮುಂದಿನ ವರ್ಷದ ಆರಂಭದಲ್ಲಿ ನಡೆಯುವ ನಿರೀಕ್ಷೆಯಿದ್ದು, ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರ ವಿಧಾನಸಭೆ ಚುನಾವಣೆಗಳೂ ಇದೇ ಅವಧಿಯಲ್ಲಿ ನಡೆಯಲಿವೆ. 2022ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ (AAP) ಭರ್ಜರಿ ಗೆಲುವು ದಾಖಲಿಸಿ 117 ಸ್ಥಾನಗಳ ಪೈಕಿ 92 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್ ಪಕ್ಷ 18 ಸ್ಥಾನಗಳಿಗೆ ಸೀಮಿತವಾಗಿತ್ತು.

