– ನಿರಾಶ್ರಿತ ಕೇಂದ್ರಕ್ಕೆ 30 ಜನರನ್ನ ಕೊಂಡ್ಯೊಯ್ದ ಪೊಲೀಸರು
ಮಂಡ್ಯ: ಅಕ್ರಮವಾಗಿ ರಾಜ್ಯದಲ್ಲಿ ನೆಲೆಸಿರುವ ಬಾಂಗ್ಲಾದೇಶಿ ವಲಸಿಗರು ಪ್ರಯಾಣಿಸುತ್ತಿದ್ದಾರೆ ಎಂಬ ಶಂಕೆಯ ಮೇಲೆ ಕೆಎಸ್‌ಆರ್‌ಟಿಸಿ ಬಸ್ ಒಂದನ್ನು ಹಿಂದೂ ಕಾರ್ಯಕರ್ತರು ತಡೆಗಟ್ಟಿದ ಘಟನೆ ಮಂಡ್ಯ ನಗರದ ಬಸ್ ನಿಲ್ದಾಣದಲ್ಲಿ ನಡೆದಿದೆ.
ಬೆಂಗಳೂರಿನಿಂದ ಮಡಿಕೇರಿಗೆ ತೆರಳುತ್ತಿದ್ದ ಬಸ್‌ನಲ್ಲಿ ಸುಮಾರು 30 ಮಂದಿ ಪ್ರಯಾಣಿಕರಿದ್ದರು. ಇವರು ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗರಿರಬಹುದು ಎಂಬ ಅನುಮಾನದ ಮೇರೆಗೆ ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತರು ಬಸ್ ತಡೆದು ತಪಾಸಣೆಗೆ ಪಟ್ಟು ಹಿಡಿದರು. ಇದನ್ನೂ ಓದಿ: ಜಮ್ಮು-ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕ್ಲಿಂಗ್ ಸಾಧನೆ – ಉದ್ಯಮಿ ಸತೀಶ್ ರೊಟ್ಟಿ ಕುಟುಂಬಕ್ಕೆ ಕ್ರೀಡಾ ಇಲಾಖೆಯಿಂದ ಗೌರವ ಸನ್ಮಾನ

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಹಾಗೂ ಮಂಡ್ಯ ತಹಶೀಲ್ದಾರ್, ಬಸ್‌ನಲ್ಲಿದ್ದ ಪ್ರಯಾಣಿಕರ ಗುರುತಿನ ಚೀಟಿಗಳನ್ನ ಪರಿಶೀಲಿಸಿದರು. ಮೇಲ್ನೋಟಕ್ಕೆ ಇವರೆಲ್ಲರೂ ಅಸ್ಸಾಂ ಮೂಲದ ಕಾರ್ಮಿಕರು ಹಾಗೂ ಕೊಡಗಿನ ಕಾಫಿ ತೋಟಗಳಲ್ಲಿ ಕೆಲಸ ಮಾಡಲು ತೆರಳುತ್ತಿದ್ದರು ಎಂಬ ಮಾಹಿತಿ ತಿಳಿದುಬಂದಿದೆ. ಇದನ್ನೂ ಓದಿ: ಚಿತ್ರದುರ್ಗದಲ್ಲಿ ಬರ ಅವಲೋಕನ, ಜಿಲ್ಲಾ ಮಟ್ಟದ ಸಭೆ ಬಳಿಕ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಕೆ: ಟಿ.ರಘುಮೂರ್ತಿ
ಆದರೆ ಪರಿಶೀಲನೆ ವೇಳೆ ಅವರ ಬಳಿಯಿದ್ದ ಕೆಲವು ಐಡಿ ಕಾರ್ಡ್‌ಗಳು ಸ್ಕ್ಯಾನ್ ಆಗದ ಹಿನ್ನೆಲೆಯಲ್ಲಿ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಹಾಗೂ ತಾಲೂಕು ಆಡಳಿತವು ಎಲ್ಲಾ 30 ಜನರನ್ನು ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಿದೆ. ಅವರ ಬಳಿಯಿರುವ ದಾಖಲೆಗಳು ಹಾಗೂ ಹಿನ್ನೆಲೆಯ ಕುರಿತು ಬೆಳಗ್ಗೆ ಪೊಲೀಸ್ ಅಧಿಕಾರಿಗಳು ಮತ್ತು ತಹಶೀಲ್ದಾರ್ ನೇತೃತ್ವದಲ್ಲಿ ಕೂಲಂಕುಷ ತನಿಖೆ ಹಾಗೂ ಪರಿಶೀಲನೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

