ಮಡಿಕೇರಿ: ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿದ್ದ ಟಿಪ್ಪು ಜಯಂತಿಯನ್ನು ಆಚರಿಸಲು ಸಮ್ಮಿಶ್ರ ಸರ್ಕಾರ ಮುಂದಾಗಿದೆ.
ಸರ್ಕಾರದ ಸೂಚನೆ ಮೇರೆಗೆ ಟಿಪ್ಪು ಜಯಂತಿ ಕಾರ್ಯಕ್ರಮ ನಡೆಸುವ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚರ್ಚೆ ನಡೆಸಿದೆ. ಜಯಂತಿ ಆಚರಣೆ ಸಂಬಂಧಪಟ್ಟಂತೆ ಸಿಎಂ ಸೂಚನೆಯ ಮೇರೆಗೆ ಸಭೆ ಕರೆಯಲಾಗಿದೆ ಎಂದು ಸಚಿವೆ ಜಯಮಾಲಾ ಸ್ಪಷ್ಟಪಡಿಸಿದ್ದಾರೆ.
Advertisement
ಸಭೆ ಬಳಿಕ ಮಾತನಾಡಿದ ಸಚಿವೆ ಜಯಮಾಲಾ ಅವರು, ಸದ್ಯ ವಿರೋಧ ಪಕ್ಷದಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರು ಟಿಪ್ಪು ಜಯಂತಿ ಆಚರಣೆ ಮಾಡಿದ ಫೋಟೋಗಳು ಇದೆ. ಅವರೇ ಆಚರಣೆ ಮಾಡಿದ್ದ ಜಯಂತಿಗೆ ಅವರೇ ಏಕೆ ವಿರೋಧ ವ್ಯಕ್ತಪಡಿಸುತ್ತಾರೆ. ಸರ್ಕಾರದಲ್ಲಿ ಈ ಕುರಿತು ನಿಯಮ ಜಾರಿ ಮಾಡಲಾಗಿದೆ. ಅದ್ದರಿಂದ ಜಯಂತಿ ಆಚರಣೆ ನಡೆಯುತ್ತದೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ವಿರೋಧಿ ಚಟುವಟಿಕೆ ನಡೆಸಿದರೆ ಕಾನೂನು ಕ್ರಮಕೈಗೊಳ್ಳಲಾಗುತ್ತದೆ. ಆದರೆ ಜನರ ರಕ್ಷಣೆ ಅವರ ಕರ್ತವ್ಯವೂ ಆಗಿದೆ. ಇದಕ್ಕೆ ಏನೇ ಆದರೂ ಅವರೇ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಹೇಳಿದರು.
Advertisement
Advertisement
ನಂ.10ರ ಆಚರಣೆಗೆ ಸಿದ್ಧತೆ ನಡೆಸಲು ಅಧಿಕೃತವಾಗಿ ಸಭೆ ನಡೆಸುವ ಮೂಲಕ ಖಚಿತ ಮಾಹಿತಿ ನೀಡಿದೆ. ಕನ್ನಡ ಸಂಸ್ಕೃತಿ ಇಲಾಖೆ ಮೂಲಕ ಆಚರಣೆ ಮಾಡುವ ಕುರಿತು ಸಿದ್ಧತೆ ನಡೆಸಲಾಗಿದೆ. ಸಭೆಯಲ್ಲಿ ಸಚಿವೆ ಜಯಮಾಲಾ ಅವರೊಂದಿಗೆ ಸಚಿವ ಜಮೀರ್ ಅಹ್ಮದ್ ಭಾವಹಿಸಿದ್ದರು. ಇದಕ್ಕೆ ಸಮ್ಮಿಶ್ರ ಸರ್ಕಾರ ಬೆಂಬಲವೂ ಇದೆ ಎಂಬ ಸೂಚನೆಯನ್ನು ಈ ಸಭೆಯ ಮೂಲಕ ನೀಡಲಾಗಿದೆ. ಅಲ್ಲದೇ ಕಳೆದ 2 ದಿನಗಳ ಟಿಪ್ಪು ಜಯಂತಿ ಆಚರಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು, ಈ ಹಿಂದಿನ ಸರ್ಕಾರ ಯಾವ ಯೋಜನೆಗಳನ್ನು ಜಾರಿಗೆ ತಂದಿದೆ ಅದೆಲ್ಲವನ್ನು ಮುಂದುವರಿಸಲಾಗುತ್ತದೆ ಎಂದು ತಿಳಿಸಿದ್ದರು.
Advertisement
ಕನ್ನಡ ವಿರೋಧಿ ಟಿಪ್ಪು: ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಶಾಸಕ ಸಿಟಿ ರವಿ ಅವರು, ಟಿಪ್ಪು ಕನ್ನಡ ವಿರೋಧಿ ಆಗಿದ್ದು. ಅಂತಹ ಟಿಪ್ಪು ವಿರೋಧಿ ಮಾಡುವುದಕ್ಕೆ ನಮ್ಮ ವಿರೋಧ ಇದೆ. ಒಂದೊಮ್ಮೆ ಇಂತಹ ಪ್ರಯತ್ನ ಮುಂದುವರಿಸಿದರೆ ಅವರ ರಕ್ತದ ಗುಂಪು ಯಾವುದು ಎಂದು ಪ್ರಶ್ನೆ ಮಾಡಬೇಕಾಗುತ್ತದೆ. ಸಂತ ಶಿಶುನಾಳ ಶರೀಫರ ಜಯಂತಿ ಆಚರಣೆ ಮಾಡಿ ಎಂದು ಸಲಹೆ ನೀಡಿದರು.
ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿ, ಜಯಂತಿ ಆಚರಣೆಗೆ ನಮ್ಮ ವಿರೋಧ ಇದೆ. ಕಳೆದ ಬಾರಿ ಸರ್ಕಾರದ ಭಂಡತನದಿಂದ ಒಂದು ಸಾವು ಸಂಭವಿಸಿದೆ. ಅದ್ದರಿಂದ ಮೈಸೂರು ದಿವಾನ್ ಅಗಿದ್ದ ಸರ್. ಮಿರ್ಜಾ ಇಸ್ಮಾಯಿಲ್ ಅವರ ದಿನಾಚರಣೆ ಆಚರಣೆ ಮಾಡಲಿ. ನಾವು ಬೆಂಬಲ ನೀಡುತ್ತೇವೆ. ಅದ್ದರಿಂದ ಇತಿಹಾಸಕ್ಕೆ ಅಪಚಾರ ಮಾಡುವುದು ಬೇಡ. ಇದರ ವಿರುದ್ಧ ನ.5ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಮಡಿಕೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಅಭಿಮನ್ಯು ಕುಮಾರ್ ಸಿಎಂ ಅವರಿಗೆ ಆಚರಣೆ ಮಾಡದಂತೆ ಆಗ್ರಹಿಸಿದ್ದಾರೆ. ಈ ಹಿಂದೆ ಒಂದು ಕಡೆ ರಾಜ್ಯದಲ್ಲಿ ಟಿಪ್ಪು ಜಯಂತಿಯನ್ನು ಜಾರಿಗೆ ತಂದು ಗಲಭೆಗೆ ಕಾರಣವಾಗಿದ್ದ ಕಾಂಗ್ರೆಸ್ಗೆ ಇದೆಲ್ಲಾ ಬೇಕಿತ್ತಾ ಎಂದು ಕುಮಾರಸ್ವಾಮಿ ಅವರು ಅಂದು ಹೇಳಿದ್ದರು. ಅಲ್ಲದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿಯನ್ನು ಆಚರಿಸುವುದಿಲ್ಲ ಎಂದು ಹೇಳಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿದ್ದಾರೆ, ಜಯಂತಿಯನ್ನು ನಿಷೇಧಿಸಲಿ ಎಂದು ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv