ಮುಂಬೈ: 19ನೇ ಆವೃತ್ತಿಯ ಐಪಿಎಲ್ ಮುಗಿಯುತ್ತಿದ್ದಂತೆ ಟೀಮ್ ಇಂಡಿಯಾದಲ್ಲಿ ಗಮನಾರ್ಹ ಬದಲಾವಣೆಗಳು ನಡೆಯಲಿವೆ. ಈ ನಿಟ್ಟಿನಲ್ಲಿ ಕಳೆದ 2 ವರ್ಷಗಳಿಂದ ನಾಯಕನಾಗಿ ಟಿ20 ತಂಡವನ್ನ ಮುನ್ನಡೆಸುತ್ತಿರುವ ಸೂರ್ಯಕುಮಾರ್ ಯಾದವ್ ಅವರನ್ನ ಕೆಳಗಿಳಿಸಿ ಅವರ ಸ್ಥಾನಕ್ಕೆ ಬೇರೊಬ್ಬರ ನಾಯಕನನ್ನ ನೇಮಕ ಮಾಡುವ ಸಾಧ್ಯತೆಗಳಿವೆ. ಆದ್ರೆ ಇದು ಯಾರೂ ಊಹಿಸದ ರೀತಿಯಲ್ಲಿರಬಹುದು.
ಹೌದು. ಭಾರತ ಅಂತಾರಾಷ್ಟ್ರೀಯ ಟಿ20 ತಂಡದ ಮುಂದಿನ ನಾಯಕ ಯಾರಾಗಬೇಕು ಅಂದ್ರೆ ಎಲ್ಲರ ಬಾಯಲ್ಲಿ ಹೇಳೋದು ಒಂದೇ ಹೆಸರು ಶ್ರೇಯಸ್ ಅಯ್ಯರ್. ಕಳೆದ 2 ಆವೃತ್ತಿಗಳಿಂದಲೂ ಪಂಜಾಬ್ ಕಿಂಗ್ಸ್ ತಂಡವನ್ನ ಮುನ್ನಡೆಸುತ್ತಿರುವ ಅಯ್ಯರ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಆದ್ರೆ ಅಯ್ಯರ್ ಅಭಿಮಾನಿಗಳಿಗೆ ಆಯ್ಕೆ ಸಮಿತಿ ಮಾಸ್ಟರ್ ಸ್ಟ್ರೋಕ್ ಕೊಡುವಂತೆ ಕಾಣ್ತಿದೆ.

ನಾಯಕನ ರೇಸ್‌ಗೆ ಸಿಎಸ್‌ಕೆ ಸ್ಟಾರ್ ಬ್ಯಾಟರ್ ಸಂಜು ಸ್ಯಾಮ್ಸನ್ ಎಂಟ್ರಿ ಕೊಟ್ಟಿದ್ದಾರೆ. ಈ ವರ್ಷದ ಆರಂಭದಲ್ಲಿ ಟಿ20 ವಿಶ್ವಕಪ್ ಗೆದ್ದ ನಂತರ ಟೀಮ್ ಇಂಡಿಯಾ ಯಾವುದೇ ಪಂದ್ಯಗಳನ್ನು ಆಡಿಲ್ಲ. ಹೊಸ ಸೀಸನ್ ಜೂನ್ ಅಂತ್ಯದಲ್ಲಿ ಐರ್ಲೆಂಡ್ ವಿರುದ್ಧ ಎರಡು ಪಂದ್ಯಗಳ ಟಿ20 ಸರಣಿಯೊಂದಿಗೆ ಪ್ರಾರಂಭವಾಗಲಿದೆ. ಐಪಿಎಲ್ ಮುಗಿದ ನಂತರ ಆಯ್ಕೆ ಸಮಿತಿ ಸಭೆ ಸೇರಿ ಈ ಕುರಿತು ನಿರ್ಧರಿಸಲಿದೆ.
ವರದಿಗಳ ಪ್ರಕಾರ, ಈ ಸಭೆಯಲ್ಲಿ ಸಂಜು ಸ್ಯಾಮ್ಸನ್ ಅವರನ್ನ ಹೊಸ ನಾಯಕನಾಗಿ ಅಧಿಕೃತವಾಗಿ ಘೋಷಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಟಿ20 ವಿಶ್ವಕಪ್‌ನಲ್ಲಿ ಅವರ ನಿರ್ಣಾಯಕ ಇನ್ನಿಂಗ್ಸ್, ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗಾಗಿ ಅವರ ಪ್ರಸ್ತುತ ಅದ್ಭುತ ಪ್ರದರ್ಶನ ಮತ್ತು ರಾಜಸ್ಥಾನ ಫ್ರಾಂಚೈಸಿಯನ್ನು ಮುನ್ನಡೆಸಿದ ಅವರ ಹಿಂದಿನ ಅನುಭವ ಉಲ್ಲೇಖಿಸಿ ಆಯ್ಕೆದಾರರು ಸ್ಯಾಮ್ಸನ್ ಕಡೆಗೆ ಒಲವು ತೋರುತ್ತಿದ್ದಾರೆ ಎನ್ನಲಾಗ್ತಿದೆ.

ಈ ಐಪಿಎಲ್ ಋತುವಿನಲ್ಲಿ ಇಲ್ಲಿಯವರೆಗೆ, ಸ್ಯಾಮ್ಸನ್ 10 ಪಂದ್ಯಗಳನ್ನು ಆಡಿ 402 ರನ್ ಗಳಿಸಿದ್ದಾರೆ, ಇದರಲ್ಲಿ ಎರಡು ಶತಕಗಳು ಮತ್ತು ಒಂದು ಅರ್ಧಶತಕ ಸೇರಿದೆ. ಇದಕ್ಕೆ ವ್ಯತಿರಿಕ್ತವಾಗಿ, ಶ್ರೇಯಸ್ ಅಯ್ಯರ್ ಐಪಿಎಲ್‌ನಲ್ಲಿ ನಾಯಕ ಮತ್ತು ಆಟಗಾರನಾಗಿ ನಿರಂತರ ಯಶಸ್ಸಿನ ಹೊರತಾಗಿಯೂ ಟಿ20 ತಂಡದಿಂದ ದೀರ್ಘಕಾಲ ಹೊರಗಿರುವ ಕಾರಣ ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ ಎಂದು ವರದಿಗಳು ಸೂಚಿಸುತ್ತವೆ.
ಸೂರ್ಯನಿಗೆ ಏನಾಯ್ತು?
2022 ರ ವರ್ಷದಲ್ಲಿ ವಿಶ್ವದ ನಂ.1 ಟಿ20 ಬ್ಯಾಟರ್ ಆಗಿ ಮೆರೆದಾಡಿದ್ದ ಟಿ20 ಹಾಲಿ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ನಾಯಕತ್ವ ಸ್ಥಾನ ಅಲಂಕರಿಸಿದ ಬಳಿಕ ಲಯಕ್ಕೆ ಮರಳುವುದು ತುಂಬಾ ವಿರಳವಾಗಿದೆ. ಪ್ರಸ್ತುತ ಐಪಿಎಲ್‌ನಲ್ಲಿ ಆಡಿರುವ 10 ಇನ್ನಿಂಗ್ಸ್‌ನಲ್ಲೂ ಕೂಡ ಕೇವಲ 195 ರನ್ ಗಳಿಸಿದ್ದಾರೆ. ಹೀಗಾಗಿ ಆಯ್ಕೆದಾರರು ಸೂರ್ಯನ ಆಟದ ಮೇಲೆ ನಿಗಾ ಇಟ್ಟಿದ್ದಾರೆ.

