ಮಂಗಳೂರು: ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೊಳಗಾದ ಕುಂಬಾರಿಕೆ ವೃತ್ತಿ ಮಾಡುವವರಿಗೂ ಐದು ಸಾವಿರ ರೂಪಾಯಿಗಳ ವಿಶೇಷ ಪರಿಹಾರ ನೆರವು ನೀಡಬೇಕೆಂದು ಕರ್ನಾಟಕ ರಾಜ್ಯ ಕುಲಾಲ್ ಕುಂಬಾರ ಯುವವೇದಿಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದೆ.
ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿ ಇರುವವರ ನೆರವಿಗೆ 1,610 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಪರಿಹಾರ ಘೋಷಿಸುವ ಮೂಲಕ ಹೆಚ್ಚಿನ ನೆರವು ನೀಡಿರುವ ತಮ್ಮ ನಡೆ ಸ್ವಾಗತಾರ್ಹ. ಆದರೆ ರಾಜ್ಯಾದ್ಯಂತ ಸಂಕಷ್ಟಕ್ಕೆ ಸಿಲುಕಿರುವ ಇನ್ನೂ ಹಲವು ಶ್ರಮಿಕ ಸಮುದಾಯಗಳಿವೆ. ಅದರಲ್ಲಿ ಕುಂಬಾರರು ಇದ್ದಾರೆ. ರಾಜ್ಯದ 40ರಿಂದ 50 ಸಾವಿರ ಕುಂಬಾರ ಕುಟುಂಬಗಳು ತಮ್ಮ ಕುಂಬಾರಿಕೆ ವೃತ್ತಿ ಮುಂದುವರಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ವಿಶೇಷವಾಗಿ ಬೇಸಿಗೆಯಲ್ಲಿ ಮಣ್ಣಿನ ಮಡಿಕೆಗಳಿಗೆ ಹೆಚ್ಚಿನ ಬೇಡಿಕೆ ಇರುತ್ತಿತ್ತು. ಆದರೆ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮಡಿಕೆಗಳ ಮಾರಾಟ ಸ್ಥಗಿತಗೊಂಡಿದೆ ಎಂದು ಸಿಎಂಗೆ ಮನವಿ ಮಾಡಲಾಗಿದೆ. ಇದನ್ನೂ ಓದಿ: ಆರ್ಥಿಕ ಸಂಕಷ್ಟದ ನಡುವೆ ಅತಿದೊಡ್ಡ ಪ್ಯಾಕೇಜ್- ಆಟೋ, ಟ್ಯಾಕ್ಸಿ ಚಾಲಕರು, ಕ್ಷೌರಿಕರಿಗೆ 5 ಸಾವಿರ ನೆರವು
Advertisement
Advertisement
ಬೇಸಿಗೆ ಕಾಲದ ಮಡಿಕೆ ವ್ಯಾಪಾರಕ್ಕಾಗಿ ಮುಂಚಿತವಾಗಿ ಸಿದ್ಧಪಡಿಸಿದ ಮಡಿಕೆಗಳು ಮೂಲೆಯಲ್ಲಿ ಸಂಗ್ರಹಿಸಿದ ಕಾರಣ ಅಲ್ಲಿಯೇ ಒಡೆದು ಹೋಗುತ್ತಿವೆ. ಮಡಿಕೆ ಮಾರಾಟವೇ ಜೀವನ ನಿರ್ವಹಣೆಗೆ ಆಸರೆಯಾಗಿರುವ ಕುಂಬಾರರ ಬದುಕಿಗೆ ಕೊರೊನಾ ರೋಗ ಕೊಳ್ಳಿ ಹೊಡೆದಿದೆ. ಕಳೆದ 40 ದಿನಗಳಿಂದ ಕೆಲಸ ಇಲ್ಲದೇ ಮನೆಯಲ್ಲಿರುವ ಕಸುಬುದಾರರು ಸರ್ಕಾರದ ಆರ್ಥಿಕ ನೆರವಿಗಾಗಿ ಕಾಯುತ್ತಿದ್ದಾರೆ. ಇಂತಹ ದುರಿತ ಕಾಲದಲ್ಲಿ ಕುಂಬಾರಿಕೆ ಕಸುಬುದಾರರಿಗೂ ಐದು ಸಾವಿರ ರೂಪಾಯಿಗಳ ವಿಶೇಷ ಪರಿಹಾರ ನೆರವು ನೀಡಬೇಕು ಎಂದು ಕರ್ನಾಟಕ ರಾಜ್ಯ ಕುಲಾಲ್ ಕುಂಬಾರ ಯುವವೇದಿಕೆ ಹಾಗೂ ಕುಲಾಲ್ ಮಹಿಳಾ ಸಂಘಟನೆಗಳ ವತಿಯಿಂದ ಸಿಎಂಗೆ ಮನವಿ ಮಾಡಿದ್ದಾರೆ.