Connect with us

Bellary

ಜಿಂದಾಲ್‍ನಲ್ಲಿ ಕೊರೊನಾ ಸ್ಫೋಟ- 11 ಸಾವಿರ ಕಾರ್ಮಿಕರಿಗೆ 4 ದಿನ ಕ್ವಾರಂಟೈನ್‍ ಚಿಂತನೆ

Published

on

– ಕಾಟಾಚಾರಕ್ಕೆ ಕ್ವಾರಂಟೈನ್ ಮಾಡಲು ಮುಂದಾದ ಜಿಂದಾಲ್

ಬಳ್ಳಾರಿ: ರಾಜ್ಯದ ಅತೀ ದೊಡ್ಡ ಉಕ್ಕಿನ ಕಾರ್ಖಾನೆ ಜಿಂದಾಲ್ ನಲ್ಲಿ ಕೊರೊನಾ ರಣ ಕೇಕೆ ಹಾಕುತ್ತಿದೆ. ಕೇವಲ ಮೂರು ದಿನಗಳಲ್ಲಿ 86 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇನ್ನೂ 526 ಜನರ ವರದಿ ಬರಬೇಕಿದೆ. ಇಷ್ಟಾದರೂ ಕಾರ್ಮಿಕರನ್ನು ಕ್ವಾರಂಟೈನ್ ಮಾಡಲು ಜಿಂದಾಲ್ ಸಮೂಹ ಸಂಸ್ಥೆ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸುತ್ತಿದ್ದು, ಕೇವಲ ನಾಲ್ಕು ದಿನಗಳ ಕಾಲ ಕ್ವಾರಂಟೈನ್ ಮಾಡುವುದಾಗಿ ತಿಳಿಸಿದೆ.

ಜಿಂದಾಲ್‍ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಶತಕ ಸಮೀಪಿಸಿದ್ದು, ಕೇವಲ ಮೂರು ದಿನಗಳಲ್ಲಿ 86 ಜನರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಹೀಗಿರುವಾಗ ಜಿಂದಾಲ್ ನೆಪ ಮಾತ್ರಕ್ಕೆ ಕಾರ್ಮಿಕರನ್ನು ಕೇವಲ ನಾಲ್ಕು ದಿನಗಳ ಕಾಲ ಹೋಮ್ ಕ್ವಾರಂಟೈನ್ ಮಾಡಲು ಮುಂದಾಗಿದೆ. ಸರ್ಕಾರ ಸಾಂಸ್ಥಿಕ ಹಾಗೂ ಹೋಮ್ ಕ್ವಾರಂಟೈನ್ 14 ದಿನಗಳಿಗೆ ಮೀಸಲು ಮಾಡಿದೆ. ಆದರೆ ಜಿಂದಾಲ್ ಮಾತ್ರ ಕೇವಲ ನಾಲ್ಕು ದಿನಗಳ ಕಾಲ ಕಾಟಾಚಾರಕ್ಕೆ ಕ್ವಾರಂಟೈನ್ ಮಾಡುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ಬಳ್ಳಾರಿಯ 1,793, ಸಂಡೂರಿನ 503, ಹೊಸಪೇಟೆಯ 989, ತೋರಣಗಲ್ ಸುತ್ತಲಿನ ಹಳ್ಳಿಯ 4,262, ಜಿಂದಾಲ್ ಟೌನ್‍ಶಿಪ್ ನಲ್ಲಿ ವಾಸವಾಗಿರುವ 3,207 ಸೇರಿದಂತೆ ಒಟ್ಟು 10,751 ಕಾರ್ಮಿಕರನ್ನು ಹೋಮ್ ಕ್ವಾರಂಟೈನ್ ಮಾಡಲು ಮುಂದಾಗಿದೆ. ರಾಜ್ಯದ ನಂಬರ್ ಒನ್ ಉಕ್ಕು ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಜಿಂದಾಲ್ ಸಂಸ್ಥೆ, ಇಂದು ಕೊರೊನಾ ಕಾರ್ಖಾನೆಯಾಗಿ ಮಾರ್ಪಟ್ಟಿದೆ.

ಲಾಕ್‍ಡೌನ್ ಸಮಯದಲ್ಲಿ ಕಾರ್ಖಾನೆ ಬಂದ್ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದರು. ಆದರೆ ಬಂದ್ ಮಾಡಿರಲಿಲ್ಲ. ಅಲ್ಲದೆ ಈ ಹಿಂದೆ ಕಾರ್ಖಾನೆಯಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ಕೇವಲ ಮೂರು ದಿನಗಳಲ್ಲಿ 86 ಪ್ರಕರಣಗಳು ಪತ್ತೆಯಾಗಿವೆ. ಇಷ್ಟಾದರೂ ಕಾರ್ಖಾನೆ ಬಂದ್ ಮಾಡಲಾಗಿಲ್ಲ. ಈಗಲಾದರೂ ಜಿಂದಾಲ್ ಸಂಪೂರ್ಣ ಬಂದ್ ಮಾಡುವಂತೆ ಒತ್ತಡ ಹೆಚ್ಚಾಗಿದೆ.

ಈ ಸಮೂಹ ಸಂಸ್ಥೆಯಲ್ಲಿ 35 ಸಾವಿರಕ್ಕೂ ಅಧಿಕ ಜನ ಕೆಲಸ ಮಾಡುತ್ತಿದ್ದು, ಇವರ ರಕ್ಷಣೆ ಮಾಡುವುದು ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿದೆ. ಹೀಗಿದ್ದರೂ ಜಿಂದಾಲ್ ಮಾತ್ರ ಕಾಟಾಚಾರಕ್ಕೆ ಕೇವಲ ನಾಲ್ಕು ದಿನಗಳ ಕಾಲ ಕ್ವಾರಂಟೈನ್ ಮಾಡುತ್ತಿದೆ. ಹೀಗಾಗಿ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಜಿಂದಾಲ್ ನಲ್ಲಿ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಎಚ್ಚರಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 147 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 86 ಜಿಂದಾಲ್ ಪ್ರಕರಣಗಳಾಗಿವೆ. ಅಲ್ಲದೆ ಇಂದು ಜಿಲ್ಲೆಯಲ್ಲಿ 53 ಪ್ರಕರಣಗಳು ಪತ್ತೆಯಾಗಿದ್ದು, 46 ಜಿಂದಾಲ್ ಪ್ರಕರಣಗಳಾಗಿವೆ. ಹೀಗಾಗಿ ಜಿಂದಾಲ್‍ನಲ್ಲಿ ಭಾರೀ ಪ್ರಮಾಣದಲ್ಲಿ ಕೊರೊನಾ ಸ್ಫೋಟವಾಗುವ ಸಂಭವವಿದೆ.