ಬೆಂಗಳೂರು: ಮೊದಲ ದಿನದ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಜನವರಿ 9ರಂದು ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡಿ ವೇದಿಕೆಯಲ್ಲಿ ಭಾಷಣ ಮಾಡಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೊರೊನಾ ಎ ಸಿಂಪ್ಟಮ್ಯಾಟಿಕ್ ಸೋಂಕು ತಗುಲಿದೆ. ಇದೀಗ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಹೋಂ ಐಸೋಲೇಶನ್‍ನಲ್ಲಿದ್ದಾರೆ. ದೆಹಲಿಯ ಖರ್ಗೆಯವರ ಕಚೇರಿಯ ಐವರು ಸಿಬ್ಬಂದಿಗೂ ಸೋಂಕು ದೃಢಪಟ್ಟಿದೆ. ಈ ಕುರಿತಂತೆ ರಾಜ್ಯಸಭೆ ವಿಪಕ್ಷ ನಾಯಕರ ಕಚೇರಿಯಿಂದ ಮಾಧ್ಯಮ ಪ್ರಕಟಣೆ ಮೂಲಕ ಮಾಹಿತಿ ಲಭ್ಯವಾಗಿದೆ.
Advertisement
Advertisement
ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಆರಂಭಗೊಂಡಿದ್ದು, ದಿನದಿಂದ ದಿನೇ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಲೇ ಇದೆ. ಈ ಮಧ್ಯೆ ಕಳೆದ ನಾಲ್ಕು ದಿನಗಳಿಂದ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಯೋಜನೆಯನ್ನು ಹಮ್ಮಿಕೊಂಡಿದೆ. ಇದನ್ನೂ ಓದಿ: ಪಾದಯಾತ್ರೆ ತಡೆಯಲು ಯಾರಿಗೆ ಕಾಯುತ್ತಿದ್ದೀರಿ – ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ
Advertisement
Advertisement
ಈಗಾಗಲೇ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಿಎಂ ಇಬ್ರಾಹಿಂ, ಮೊಯ್ಲಿ, ಮಲ್ಲಾಜಮ್ಮ, ಶಿವಶಂಕರ್ ರೆಡ್ಡಿ ಸೇರಿದಂತೆ ಹಲವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇನ್ನೂ ತಿಳಿಯದೇ ಇರುವ ಹಲವರು ಮಂದಿಯಲ್ಲಿ ಕಾಣಿಸಿಕೊಂಡಿದೆ. ಅಲ್ಲದೇ ಮೇಕೆದಾಟು ಪಾದಯಾತ್ರೆಯನ್ನು ತಕ್ಷಣ ನಿಲ್ಲಿಸುವಂತೆ ಹೈಕೋರ್ಟ್ ಬುಧವಾರ ಆದೇಶ ನೀಡಿದೆ. ಮೇಕೆದಾಟು ಪಾದಯಾತ್ರೆಗೆ ಅನುಮತಿ ಕೊಟ್ಟಿಲ್ಲದಿದ್ದರೆ ತಡೆಯಲು ಯಾರಿಗಾಗಿ ಕಾಯುತ್ತಿದ್ದೀರಿ ಎಂದು ಹೈಕೋರ್ಟ್ ಸರ್ಕಾರವನ್ನು ಪ್ರಶ್ನಿಸಿ ಛೀಮಾರಿ ಹಾಕಿದೆ. ಈ ಬೆನ್ನಲ್ಲೇ ರಾಜ್ಯ ಸರ್ಕಾರ ಕಾಂಗ್ರೆಸ್ ನಡೆಸುತ್ತಿದ್ದ ಮೇಕೆದಾಟು ಪಾದಯಾತ್ರೆಗೆ ನಿರ್ಬಂಧ ಹೇರಿದೆ. ಇದನ್ನೂ ಓದಿ: ಪಾದಯಾತ್ರೆ ನಿಲ್ಲಿಸದಿದ್ದರೆ ಕಾನೂನು ಪ್ರಕಾರ ನಿಲ್ಲಿಸುತ್ತೇವೆ: ಆರಗ ಜ್ಞಾನೇಂದ್ರ
ಈ ಎಲ್ಲ ಕಾರಣಗಳಿಂದ ಕೊರೊನಾ ಕಾರಣಾಂತರದಿಂದ ಪ್ರತಿಭಟನೆ ಮುಂದುವರಿಸಬೇಕೇ? ಬೇಡವೇ ಎಂಬುದರ ಬಗ್ಗೆ ಕಾಂಗ್ರೆಸ್‍ನಲ್ಲಿ ಗೊಂದಲ ಮೂಡಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಇಂದು ರಾಮನಗರ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಹಿರಿಯ ಮುಖಂಡರು, ಶಾಸಕರು, ಸಂಸದರು, ಹಾಲಿ ಮತ್ತು ಮಾಜಿ ಶಾಸಕರೊಂದಿಗೆ ತುರ್ತು ಸಭೆ ನಡೆಸುತ್ತಿದ್ದಾರೆ. ಈ ಸಭೆಯ ಬಳಿಕ ಪಾದಯಾತ್ರೆ ಬಗ್ಗೆ ಮುಂದಿನ ನಿರ್ಧಾರವನ್ನು ಕಾಂಗ್ರೆಸ್ ಕೈಗೊಳ್ಳಲಿದೆ.