Connect with us

ಕರ್ನಾಟಕದ ಗೆಲುವಿನಿಂದ ಕಾಂಗ್ರೆಸ್ಸಿಗೆ ದೇಶದಲ್ಲೇ ಹೊಸ ಶಕ್ತಿ ಬರುತ್ತೆ: ಸಿಎಂ

ಕರ್ನಾಟಕದ ಗೆಲುವಿನಿಂದ ಕಾಂಗ್ರೆಸ್ಸಿಗೆ ದೇಶದಲ್ಲೇ ಹೊಸ ಶಕ್ತಿ ಬರುತ್ತೆ: ಸಿಎಂ

ಬಳ್ಳಾರಿ: ಕರ್ನಾಟಕ ವಿಧಾನಸಭೆ ಚುನಾವಣೆ ಗೆಲ್ಲುವ ಮೂಲಕ ದೇಶದಲ್ಲಿ ಕಾಂಗ್ರೆಸ್ ಹೊಸ ಶಕ್ತಿ ಬರಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಹೊಸಪೇಟೆಯಲ್ಲಿ ನಡೆದ ಜನಾರ್ಶೀವಾದ ಯಾತ್ರೆಯಲ್ಲಿ ಮಾತನಾಡಿದ ಅವರು, ಕರ್ನಾಟಕವನ್ನು ಗೆಲ್ಲುವ ಮೂಲಕ ರಾಹುಲ್ ಗಾಂಧಿ ಅವರನ್ನು ದೇಶದ ಪ್ರಧಾನಿಯಾಗಿ ಮಾಡಬೇಕಿದೆ. ಇದಕ್ಕೆ ಕರ್ನಾಟಕ ವಿಧಾನಸಭಾ ಚುನಾವಣೆ ಗೆಲುವು ನಾಂದಿಯಾಗಲಿದೆ ಎಂದರು.

ಭ್ರಷ್ಟಾಚಾರಿಗಳಾದ ಬಿಎಸ್ ಯಡಿಯೂರಪ್ಪ, ಕೃಷ್ಣಯ್ಯ ಶೆಟ್ಟಿ ಅವರನ್ನು ಪಕ್ಕದಲ್ಲೇ ಕೂರಿಸಿಕೊಂಡು ನಮ್ಮ ಸರ್ಕಾರವನ್ನು 10% ಕಮಿಷನ್ ಸರ್ಕಾರ ಎಂದ ಪ್ರಧಾನಿ ಮೋದಿಗೆ ನಾಚಿಕೆಯಾಗಬೇಕು. ದೇಶದ ಯಾವುದೇ ನಾಯಕರು ಪ್ರಧಾನಿ ಮೋದಿ ಅವರ ರೀತಿ ಭಾಷಣ ಮಾಡಿರಲಿಲ್ಲ. ಅವರು ಒಂದು ಪಕ್ಷದ ನಾಯಕರಾಗಿಯೂ ಮಾತನಾಡಿಲಿಲ್ಲ. ತಾವು ಪ್ರಧಾನಿ ಎಂಬುದನ್ನು ಮರೆತು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.

ಅರಮನೆ ಮೈದಾನದಲ್ಲಿ ಮಾತನಾಡಿದ ಪ್ರಧಾನಿಗಳು ಮಹದಾಯಿ ಬಗ್ಗೆ ಎಲ್ಲಿಯೂ ಪ್ರಸ್ತಾಪ ಮಾಡಲಿಲ್ಲ. ಸರ್ವಪಕ್ಷ ನಿಯೋಗ ಪ್ರಧಾನಿ ಬಳಿಗೆ ಕರೆದುಕೊಂಡು ಹೋಗಿದ್ದೇವು. ಆದರೆ ಅವರು ಮಧ್ಯಸ್ಥಿಕೆಗೆ ಒಪ್ಪಲಿಲ್ಲ. ಹೀಗಾಗಿ ರಾಜ್ಯದ ಜನ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿಕೊಂಡರು.

ಬಳ್ಳಾರಿ ಹೊಸಪೇಟೆ ಐತಿಹಾಸಿಕ ಸ್ಥಳ. ಹಂಪಿ ವಿಜಯನಗರದ ಅರಸರ ರಾಜಧಾನಿಯಾಗಿತ್ತು. ಶ್ರೀಕೃಷ್ಣದೇವರಾಯರು ಇತಿಹಾಸದಲ್ಲಿ ಸ್ಮರಣೀಯ ವ್ಯಕ್ತಿ. ಅವರ ಆಡಳಿತದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಿತ್ತು. ಈ ಪ್ರದೇಶದಿಂದಲೇ ರಾಹುಲ್ ಗಾಂಧಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಅಲ್ಲದೇ ರಾಹುಲ್ ಗಾಂಧಿ ಅವರು ಎಐಸಿಸಿ ಅಧ್ಯಕ್ಷರಾದ ಮೇಲೆ ಮೊದಲ ಬಾರಿ ಬಂದಿದ್ದಾರೆ. ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದು 4 ವರ್ಷ 9 ತಿಂಗಳಾಗಿದೆ. ಜನಪರ ಆಡಳಿತ ಕೊಟ್ಟಿದ್ದೇವೆ. ಪ್ರಣಾಳಿಕೆಯ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ ಎಂದರು.

ನಮ್ಮ ಸರ್ಕಾರದ ಕಾರ್ಯಕ್ರಮಗಳು ಕೇವಲ ಒಂದು ಜಾತಿಗೆ ಸೀಮಿತವಾಗಿಲ್ಲ. ಆರು ಕೋಟಿ ಜನರು ಒಂದಲ್ಲ ಒಂದು ರೀತಿ ಸರ್ಕಾರದ ಯಾವುದಾದರೊಂದು ಯೋಜನೆಯ ಫಲ ಪಡೆದಿದ್ದಾರೆ. ಬಡ ಜನರಿಗೆ ಶಕ್ತಿ ತುಂಬುವ ಕೆಲಸವನ್ನು ನಾವು ಮಾಡಿದ್ದೇವೆ. ಹೊಸ ಕರ್ನಾಟಕಕ್ಕಾಗಿ ಅಭಿವೃದ್ಧಿ ಮೂಲಕ ಭಾಷ್ಯ ಬರೆದಿದ್ದೇವೆ. ನವ ಕರ್ನಾಟಕ ನಿರ್ಮಾಣ ಕೇವಲ ಕಾಂಗ್ರೆಸ್ ನಿಂದ ಸಾಧ್ಯ. ಹೀಗಾಗಿ ಮರಳಿ ಕಾಂಗ್ರೆಸ್‍ಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

ರಿಪಬ್ಲಿಕ್ ಆಫ್ ಬಳ್ಳಾರಿ: ಬಿಜೆಪಿ ಅಧಿಕಾರದಲ್ಲಿ ಇದ್ದ ಸಮಯದಲ್ಲಿ ಬಳ್ಳಾರಿಯನ್ನು ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ಕರೆಯುತ್ತಿದ್ದರು. ಆದರೆ ನಾವು ಆ ಕಳಂಕವನ್ನು ತೊಲಗಿಸಿದ್ದೇವೆ. ಬಳ್ಳಾರಿ ಅಕ್ರಮ ಗಣಿಗಾರಿಕೆ ಕುರಿತು ಸಂತೋಷ್ ಹೆಗ್ಡೆ ವರದಿ ಕೊಟ್ಟಿದ್ದರು. ಬಳ್ಳಾರಿಯೇ ಒಂದು ದೇಶ. ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸಿದ್ದೇವೆ. ಇಲ್ಲಿಂದಲೇ ಬಿಜೆಪಿ ಪತನ ಆರಂಭವಾಯಿತು ಎಂದರು.

ಅಮೀತ್ ಶಾ, ಹೆಗ್ದೆ ವಿರುದ್ಧ ಕಿಡಿ: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ನಾಲಾಯಕ್. ಅವರು ಗ್ರಾಮಪಂಚಾಯತಿ ಸದಸ್ಯನಾಗಲು ಕೂಡ ಅನರ್ಹ. ಅಮಿತ್ ಶಾ ಮರ್ಡರ್ ಕೇಸ್ ನಲ್ಲಿ ಸಿಕ್ಕಿಬಿದ್ದಿದ್ದರು. ಅಲ್ಲದೇ ಗಡಿಪಾರಿಗೆ ಗುರಿಯಾಗಿದ್ದರು. ಅದನ್ನು ಮರೆತು ಮೋದಿ ಮರೆತು ಬಿಟ್ಟಿದ್ದಾರೆ. ಗೋದ್ರಾ ಹತ್ಯಾಖಂಡದ ರೂವಾರಿ ಯಾರು ಎಂದು ಪ್ರಶ್ನಿಸುವ ಮೂಲಕ ವ್ಯಂಗ್ಯ ಮಾಡಿದರು.

ಕರ್ನಾಟಕ ಬಸವಣ್ಣ, ಶಿಶುನಾಳ ಷರೀಫ್, ಕನಕದಾಸರ ಭೂಮಿ. ಇಲ್ಲಿ ನಿಮ್ಮ ಕೋಮು ದಾಳ ಕೆಲಸ ಮಾಡಲ್ಲ. ರಾಜ್ಯದ ಜನ ನಮ್ಮ ಸರಕಾರವನ್ನು ಒಪ್ಪಿಕೊಂಡಿದ್ದಾರೆ. ನಮ್ಮ ಸರಕಾರದ ವಿರುದ್ಧ ಪ್ರಭುತ್ವದ ವಿರುದ್ಧ ಅಲೆ ಇಲ್ಲ. ಕೋಮು ದಳ್ಳುರಿಗೆ ಬೆಂಬಲ ನೀಡುತ್ತಿದ್ದಿರ, ಆದರೆ ನಿಮ್ಮ ಪ್ರಯತ್ನ ಕೇವಲ ಭ್ರಮೆ, ಕನಸಷ್ಟೇ. ಬಳ್ಳಾರಿ ಕಾಂಗ್ರೆಸ್ ನ ಭದ್ರಕೋಟೆ. ಆನಂದ್ ಸಿಂಗ್, ನಾಗೇಂದ್ರ, ಭೀಮಾನಾಯ್ಕ ನಮ್ಮ ಜೊತೆ ಬಂದಿದ್ದಾರೆ. ಬಳ್ಳಾರಿಯ 9 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಬಿಜೆಪಿ ಮುನುಷ್ಯತ್ವ ಇಲ್ಲದ ಪಕ್ಷ ಅವರು ರಾಜ್ಯದಲ್ಲಿ ಅಧಿಕಾರಕ್ಕೆ ಬರಲೇ ಬಾರದು. ಹೀಗಾಗಿ ಮರಳಿ ಕಾಂಗ್ರೆಸ್‍ಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

Advertisement
Advertisement