ಬೆಂಗಳೂರು: 2028ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹಾಗೂ 2029ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ(Congress) ಅಧಿಕಾರಕ್ಕೆ ಬರುವುದು ನಿಶ್ಚಿತ. ಇದಕ್ಕೆ ದೇಶದ ಕಾರ್ಮಿಕರು ಹಾಗೂ ಜನಸಾಮಾನ್ಯರ ಬೆಂಬಲ ಅಗತ್ಯ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(D K Shivakumar) ಹೇಳಿದರು.
ಭಾನುವಾರ ಕಾಂಗ್ರೆಸ್ ಕಚೇರಿಯ ಭಾರತ್ ಜೋಡೊ ಸಭಾಂಗಣದಲ್ಲಿ ನಡೆದ ಎಐಟಿಯುಸಿ (ಇಂಟೆಕ್) 316ನೇ ಅಖಿಲ ಭಾರತ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಇಂಟೆಕ್ ಮೂಲಕ ದೇಶದ ಶ್ರಮಿಕರು ಹಾಗೂ ಕಾರ್ಮಿಕರ ಬಲ ಹೆಚ್ಚಾಗಿದೆ. ಕಾಂಗ್ರೆಸ್ ಪಕ್ಷ ಯಾವುದೇ ರಾಜಕೀಯ ತೀರ್ಮಾನ ತೆಗೆದುಕೊಂಡರೂ ಕಾರ್ಯಕಾರಿ ಸಮಿತಿಯಲ್ಲಿ ಇಂಟೆಕ್ ಸದಸ್ಯರ ಪಾತ್ರ ಪ್ರಮುಖವಾಗಿರುತ್ತದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಸಂದರ್ಭದಲ್ಲಿ ಇಂಟೆಕ್, ಎನ್‌ಎಸ್‌ಯುಐ, ಯುವ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ ಪಕ್ಷದ ನಾಲ್ಕು ಆಧಾರ ಸ್ತಂಭಗಳು ಎಂದು ಹೇಳಿದ್ದರು. ತಾವು ವಿದ್ಯಾರ್ಥಿ ನಾಯಕನಾಗಿ ರಾಜಕೀಯಕ್ಕೆ ಬಂದಿದ್ದು, ಸಂಘಟನೆಯ ಶಕ್ತಿಯ ಬಗ್ಗೆ ಚೆನ್ನಾಗಿ ಅರಿತಿದ್ದೇನೆ ಎಂದು ಹೇಳಿದರು.
ಕಾರ್ಮಿಕರಿಲ್ಲದೆ ದೇಶದ ಆರ್ಥಿಕ ಪ್ರಗತಿ ಅಸಾಧ್ಯಕೃಷಿಕ, ಶಿಕ್ಷಕ, ಸೈನಿಕ ಹಾಗೂ ಕಾರ್ಮಿಕರಿಲ್ಲದೆ ಸಮಾಜ ಮುನ್ನಡೆಯುವುದಿಲ್ಲ. ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಶ್ರಮ, ಶಕ್ತಿ ಹಾಗೂ ಬದ್ಧತೆಯ ಪಾತ್ರ ಅಪಾರವಾಗಿದೆ. ಕಾರ್ಮಿಕರಿಲ್ಲದೆ ಯಾವುದೇ ದೇಶದ ಆರ್ಥಿಕತೆ ಬೆಳೆಯುವುದಿಲ್ಲ. ಉದ್ಯಮಿಗಳು ಬೆಳೆಯಬೇಕಾದರೆ ಕಾರ್ಮಿಕರೂ ಬಲವಾಗಿರಬೇಕು. ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಜೂನ್ 30ರಿಂದ ಎಸ್‌ಐಆರ್ ಆರಂಭ
ಜೂನ್ 30ರಿಂದ ಎಸ್‌ಐಆರ್ ಪ್ರಕ್ರಿಯೆ ಆರಂಭವಾಗುತ್ತಿದೆ. ಬಿಜೆಪಿ ಮತಗಳನ್ನು ಡಿಲೀಟ್ ಮಾಡಿಸುತ್ತಿದೆ. ದೇಶದ ಶ್ರಮಿಕರು ಹಾಗೂ ಕಾರ್ಮಿಕರ ಮತಗಳನ್ನು ಗುರಿಯಾಗಿಸಲಾಗುತ್ತಿದೆ. ಆದ್ದರಿಂದ ಎಲ್ಲರೂ ಎಚ್ಚರಿಕೆಯಿಂದಿದ್ದು ತಮ್ಮ ಮತಗಳು ಪಟ್ಟಿಯಿಂದ ಕೈಬಿಡದಂತೆ ಗಮನಹರಿಸಬೇಕು ಎಂದು ಕರೆ ನೀಡಿದರು.
ಸಂಜೀವ್ ರೆಡ್ಡಿ ಹಲವು ವರ್ಷಗಳಿಂದ ಈ ಸಂಘಟನೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಆಸ್ಕರ್ ಫರ್ನಾಂಡೀಸ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಕಾರ್ಮಿಕ ಸಚಿವರಾಗಿದ್ದಾಗ ಕಾರ್ಮಿಕರ ಪರ ಹಲವು ಕ್ರಾಂತಿಕಾರಿ ಬದಲಾವಣೆಗಳನ್ನು ತಂದರು. ಕಾರ್ಮಿಕ ಚಳುವಳಿಗೆ ಮಾನ್ಯತೆ ನೀಡಿದರು. ಕಾರ್ಮಿಕರಿಗಾಗಿ ಇಎಸ್‌ಐ ಆಸ್ಪತ್ರೆಗಳನ್ನು ಸ್ಥಾಪಿಸಿದರು. ಕಾರ್ಮಿಕರ ಮಕ್ಕಳಿಗೆ ಇಎಸ್‌ಐ ಆಸ್ಪತ್ರೆಗಳ ಮೂಲಕ ಉಚಿತ ವೈದ್ಯಕೀಯ ಶಿಕ್ಷಣದ ಅವಕಾಶ ಕಲ್ಪಿಸಲಾಯಿತು. 10ರಿಂದ 15 ಮೆಡಿಕಲ್ ಕಾಲೇಜುಗಳನ್ನೂ ಸ್ಥಾಪಿಸಲಾಯಿತು. ಅವರ ನೇತೃತ್ವದಲ್ಲಿ ಕಾರ್ಮಿಕರ ಬದುಕಿನಲ್ಲಿ ಮಹತ್ವದ ಬದಲಾವಣೆಗಳು ಆರಂಭವಾದವು ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳು ಜನರ ಪರ
ನಾನು ಸರ್ಕಾರದ ಪ್ರತಿನಿಧಿಯಾಗಿದ್ದು, ಯಾವಾಗಲೂ ಕಾರ್ಮಿಕರ ಪರವಾಗಿಯೇ ಇರುತ್ತೇನೆ. ನಮ್ಮ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ಕಾರ್ಮಿಕರು, ಮಹಿಳೆಯರು ಹಾಗೂ ಜನಸಾಮಾನ್ಯರ ಹಿತಕ್ಕಾಗಿ ರೂಪಿಸಲಾಗಿದೆ. ಈ ಯೋಜನೆಗಳನ್ನು ಪ್ರಧಾನಿ ಸೇರಿದಂತೆ ಹಲವರು ಟೀಕಿಸಿದ್ದರು. ಆದರೆ ಬೆಲೆ ಏರಿಕೆಯ ಸಂದರ್ಭದಲ್ಲಿ ಜನರಿಗೆ ನೆರವಾಗಲೆಂದು ಅವುಗಳನ್ನು ಜಾರಿಗೆ ತರಲಾಯಿತು. ಪ್ರತಿ ವರ್ಷ 50 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ವೆಚ್ಚ ಮಾಡಲಾಗುತ್ತಿದೆ. ಟೀಕೆ ಮಾಡಿದವರೇ ಇಂದು ಗ್ಯಾರಂಟಿ ಯೋಜನೆಗಳನ್ನು ಅನುಕರಣೆ ಮಾಡುತ್ತಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ: ಒಂದೇ ಮಳೆಗೆ ತುಂಬಿ ಹರಿದ ಗೊಬ್ಬರು ಹಳ್ಳ – ಜೆಸಿಬಿಯಿಂದ ಸಂತ್ರಸ್ತರ ರಕ್ಷಣೆ
ನನ್ನ ಮೇಲೆ ವಿಶ್ವಾಸವಿಟ್ಟು ಸರ್ಕಾರದ ಜವಾಬ್ದಾರಿ ನೀಡಲಾಗಿದೆ. ನಾನು ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತೇನೆ. ಆರು ವರ್ಷಗಳ ಹಿಂದೆ ಪಕ್ಷ ಸಂಕಷ್ಟದಲ್ಲಿದ್ದಾಗ ಅದರ ನೇತೃತ್ವ ವಹಿಸಿಕೊಂಡೆ. ಕಾಂಗ್ರೆಸ್ ಪಕ್ಷದ ಇತಿಹಾಸವೇ ದೇಶದ ಇತಿಹಾಸ. ಕಾಂಗ್ರೆಸ್ ಶಕ್ತಿಯೇ ದೇಶದ ಶಕ್ತಿ. ಜವಾಹರಲಾಲ್ ನೆಹರು ಅವರ ಕಾಲದಿಂದಲೇ ಕಾಂಗ್ರೆಸ್ ದೇಶ ಕಟ್ಟುವ ಕೆಲಸ ಮಾಡಿದೆ. ಸಂವಿಧಾನದ ಮೂಲಕ ಪ್ರತಿಯೊಬ್ಬ ಪ್ರಜೆಗೂ ಹಕ್ಕುಗಳನ್ನು ನೀಡಿದ್ದು, ಸಮಾಜದ ಪ್ರತಿಯೊಂದು ವರ್ಗಕ್ಕೂ ನ್ಯಾಯ ಒದಗಿಸಿದೆ ಎಂದು ಹೇಳಿದರು.
ಇಂದು ದೇಶ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ನಮ್ಮ ನೆರೆಹೊರೆಯ ಮಿತ್ರ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಕಳೆದುಕೊಂಡಿದ್ದೇವೆ. ಆದರೆ ಕರ್ನಾಟಕ ಆರ್ಥಿಕವಾಗಿ ಸದೃಢವಾಗಿದೆ. ವಿವಿಧ ತೆರಿಗೆಗಳ ಮೂಲಕ ದೇಶದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿದೆ. ಭಾರತವನ್ನು ಇಂದು ಬೆಂಗಳೂರು ಮೂಲಕ ನೋಡಲಾಗುತ್ತಿದೆ. ಬೆಂಗಳೂರಿನಲ್ಲಿ ಸುಮಾರು 25 ಲಕ್ಷ ಐಟಿ ಉದ್ಯೋಗಿಗಳಿದ್ದು, ಕ್ಯಾಲಿಫೋರ್ನಿಯಾದಲ್ಲಿ 16 ಲಕ್ಷ ಉದ್ಯೋಗಿಗಳಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ: ನಾಟಿ ಕೋಳಿ, ಮುದ್ದೆ, ಚಿಕನ್ ಚಾಪ್ಸ್ – ಬಾಯಿ ಚಪ್ಪರಿಸಿ ತಿಂದ ಸಿದ್ರಾಮಯ್ಯ
ಕೊನೆಯಲ್ಲಿ, ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಪಡಿಸೋಣ ಎಂದು ಡಿ.ಕೆ. ಶಿವಕುಮಾರ್ ಕರೆ ನೀಡಿದರು.
