ಬೆಂಗಳೂರು: ಪತ್ನಿ ಚೆನ್ನಮ್ಮ (Chennamma) ಅಗಲಿಕೆಯ ದುಃಖದಲ್ಲಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ (H.D.Deve Gowda) ಕಣ್ಣೀರು ಒರೆಸಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಸಂತೈಸಿದರು.
ಪತ್ನಿಯ ಪಾರ್ಥಿವ ಶರೀರದ ಮುಂದೆ ಕುಳಿತು ಹೆಚ್.ಡಿ.ದೇವೇಗೌಡರು ಕಣ್ಣೀರಿಟ್ಟಿದ್ದರು. ಶನಿವಾರ ಅಂತಿಮ ದರ್ಶನಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ ಅವರು ಗೌಡರ ಪಕ್ಕದಲ್ಲೇ ಕುಳಿತು ಸಾಂತ್ವನ ಹೇಳಿದರು. ಕರವಸ್ತ್ರ ತೆಗೆದುಕೊಂಡು ಹೆಚ್‌ಡಿಡಿ ಕಣ್ಣೀರು ಒರೆಸಿದರು. ತಾಯಿ ಕಳೆದುಕೊಂಡ ದುಃಖದಲ್ಲಿದ್ದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರಿಗೂ ಸಾಂತ್ವನ ಹೇಳಿದರು. ಇದನ್ನೂ ಓದಿ: ಚೆನ್ನಮ್ಮ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಲು ಎರಡು ಟ್ರ್ಯಾಕ್ಟರ್ ಹೂ ತಂದ ಸ್ವರೂಪ್

ಚೆನ್ನಮ್ಮ ಅವರ ನಿಧನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿ ಪೋಸ್ಟ್ ಕೂಡ ಹಂಚಿಕೊಂಡಿದ್ದರು. ‘ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮನವರ ನಿಧನದಿಂದ ದುಃಖಿತನಾಗಿದ್ದೇನೆ. ಜನತಾ ಪರಿವಾರದಲ್ಲಿದ್ದ ನಾನು ದೇವೇಗೌಡರ ಕುಟುಂಬದೊಂದಿಗೆ ನಿಕಟವಾದ ಒಡನಾಟ ಇಟ್ಟುಕೊಂಡವನಾಗಿ ಚೆನ್ನಮ್ಮನವರನ್ನು ಸಮೀಪದಿಂದ ಬಲ್ಲವನು. ಚೆನ್ನಮ್ಮನವರು ತಮ್ಮ ಜೀವನದಲ್ಲಿ ಎದುರಾದ ಕಷ್ಟ – ನೋವುಗಳಿಂದ ಕುಗ್ಗದೆ, ಎಲ್ಲವನ್ನೂ ಧೈರ್ಯದಿಂದ ಎದುರಿಸಿದ್ದ ಗಟ್ಟಿಗಿತ್ತಿ. ದೇವೇಗೌಡರ ರಾಜಕೀಯ ಜೀವನದ ಏಳುಬೀಳಿನ ನಡುವೆ ದೊಡ್ಡ ಕುಟುಂಬವನ್ನು ಪೊರೆಯುತ್ತಾ ಬಂದ ಅವರು ಒಬ್ಬ ಆದರ್ಶ ಗೃಹಿಣಿಯಾಗಿದ್ದರು.
ಮಾಜಿ ಪ್ರಧಾನಿಗಳ ಮಡದಿಯಾಗಿದ್ದರೂ ಯಾವ ಹಮ್ಮು ಬಿಮ್ಮು ಇಲ್ಲದೆ ಎಲ್ಲರನ್ನೂ ಅಕ್ಕರೆಯಿಂದ ಕಾಣುತ್ತಿದ್ದ ಚೆನ್ನಮ್ಮನವರು, ಮಾದರಿ ಸತಿಯಾಗಿ ತುಂಬು ಜೀವನ ಸಾಗಿಸಿದವರು. ದೀರ್ಘಕಾಲದ ಸಂಗಾತಿಯನ್ನು ಈ ಇಳಿವಯಸ್ಸಿನಲ್ಲಿ ಕಳೆದುಕೊಂಡ ದೇವೇಗೌಡರಿಗೆ ದು:ಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ. ಗೌಡರ ಕುಟುಂಬ ಸದಸ್ಯರಿಗೆ ನನ್ನ ಸಂತಾಪಗಳು. ಅವರ ನೋವಿನಲ್ಲಿ ನಾನೂ ಭಾಗಿಯಾಗಿದ್ದೇನೆ. ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ’ ಎಂದು ಮಾಜಿ ಸಿಎಂ ಪ್ರಾರ್ಥಿಸಿದ್ದರು. ಇದನ್ನೂ ಓದಿ: ಪತ್ನಿಗೆ ಬಾಳೆಹಣ್ಣು ತಿನ್ನಿಸಿದ ಹೆಚ್‌ಡಿಡಿ – ಚೆನ್ನಮ್ಮ ಸಾವಿಗೂ ಮುನ್ನ ಪತಿ ಜೊತೆಗಿನ ಅವಿಸ್ಮರಣೀಯ ಕ್ಷಣಗಳು..
