ಚೆನ್ನೈ: ಏಪ್ರಿಲ್ 23 ರಂದು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ (TamilNadu Polls) ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) 28 ಅಭ್ಯರ್ಥಿಗಳನ್ನ ಘೋಷಿಸಿದೆ. ದ್ರಾವಿಡ ಮುನ್ನೇಟ್ರ ಕಳಗಂ (DMK) ಜೊತೆಗಿನ ಮೈತ್ರಿಯಲ್ಲಿ ಪಕ್ಷಕ್ಕೆ ಹಂಚಿಯಾದ ಕ್ಷೇತ್ರಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನ ಅಂತಿಮಗೊಳಿಸಿದೆ.
ಎಐಸಿಸಿ ನಾಯಕತ್ವ ಹಾಗೂ ರಾಜ್ಯ ಘಟಕದ ಮುಖ್ಯಸ್ಥ ಕೆ. ಸೆಲ್ವಪೆರುಂಥಗೈ ನಡುವಿನ ದೀರ್ಘ ಸಮಾಲೋಚನೆ ಬಳಿಕ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನ (Congress Candidates List) ಅಂತಿಮಗೊಳಿಸಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ತಿಳಿಸಿದ್ದಾರೆ. ಹಿರಿಯ ನಾಯಕರೊಂದಿಗೆ ಹಲವು ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಇದನ್ನೂ ಓದಿ: Tamil Nadu Polls | ಸಿಎಂ ಸ್ಟಾಲಿನ್, ನಟ ವಿಜಯ್ ನಾಮಪತ್ರ ಸಲ್ಲಿಕೆ – ಶಕ್ತಿ ಪ್ರದರ್ಶನ

ಎಐಸಿಸಿ ಬಿಡುಗಡೆಗೊಳಿಸಿದ ಅಧಿಕೃತ ಪ್ರಕಟಣೆಯಲ್ಲಿ, ಪ್ರಮುಖ ನಾಯಕರು ಹಾಗೂ ಹಲವು ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ತಮಿಳುನಾಡು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಸೆಲ್ವಪೆರುಂಥಗೈ ಅವರನ್ನ ಶ್ರೀಪೆರುಂಬುದೂರು (ಎಸ್‌ಸಿ) ಕ್ಷೇತ್ರದಿಂದ ಹಾಗೂ ಡಾ. ಎ.ಚೆಲ್ಲಾ ಕುಮಾರ್ ಅವರನ್ನು ಕೃಷ್ಣಗಿರಿ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಮುಖ್ಯವಾಗಿ ಇತ್ತೀಷೆಗಷ್ಟೇ ಕಾಂಗ್ರೆಸ್ ಸೇರ್ಪಡೆಯಾದ ಪಿಎಂಕೆ ನಾಯಕ ಜಿಕೆಎಂ ತಮಿಳು ಕುಮಾರನ್ ಅವರನ್ನ ಪೆನ್ನಗರಂ ಕ್ಷೇತ್ರದಿಂದ ಅಖಾಡಕ್ಕಿಳಿಸಲಾಗಿದೆ.
ಇತರ ಪ್ರಮುಖ ಅಭ್ಯರ್ಥಿಗಳಲ್ಲಿ, ಪೊನ್ನೇರಿ (SC) ಕ್ಷೇತ್ರದಿಂದ ದುರೈ ಚಂದ್ರಶೇಖರ್, ವೇಲಾಚೇರಿಯಿಂದ ಜೆಎಂಎಚ್ ಆಸ್ಸನ್ ಮೌಲಾನಾ, ಶೋಲಿಂಗೂರಿನಿಂದ ಎಎಂ ಮುನಿರತಿನಂ, ಈರೋಡ್ (ಪೂರ್ವ) ದಿಂದ ಗೋಪಿನಾಥ್ ಪಳನಿಯಪ್ಪನ್ ಮತ್ತು ಉದಗಮಂಡಲಂನಿಂದ ಬಿ ರಾಮಚಂದ್ರನ್, ಶ್ರೀವೈಕುಂಠಂನಿಂದ ಎಸ್. ಊರ್ವಶಿ ಅಮೃತರಾಜ್, ನಂಗುನೇರಿಯಿಂದ ರೂಬಿ ಮನೋಹರನ್ ಮತ್ತು ಕೊಳಚೆಲ್ನಿಂದ ಡಾ. ತರಗೈ ಕತ್ಬರ್ಟ್ ಅವರನ್ನು ಕಣಕ್ಕಿಳಿಸಿದೆ. ಇದನ್ನೂ ಓದಿ: Tamilnadu Assembly Elections | ಬಿಜೆಪಿಯಿಂದ 27 ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್

164 ಕ್ಷೇತ್ರಗಳಲ್ಲಿ ಡಿಎಂಕೆ ಸ್ಪರ್ಧೆ
ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳ ಪೈಕಿ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ ಮೈತ್ರಿಕೂಟದ ಡಿಎಂಕೆ 164 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಇನ್ನುಳಿದ 70 ಸ್ಥಾನಗಳನ್ನು ಮೈತ್ರಿಕೂಟದ ಇತರ ಪಕ್ಷಗಳು ಹಂಚಿಕೊಂಡಿವೆ. ಕಾಂಗ್ರೆಸ್ 28, ಕಮ್ಯುನಿಸ್ಟ್ ಪಕ್ಷ ಆಫ್ ಇಂಡಿಯಾ (ಸಿಪಿಐ) 5, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) (ಸಿಪಿಐ(ಎಂ) 5, ವಿಸಿಕೆ 8 ಮತ್ತು ಎಂಡಿಎಂಕೆ 4 ಸ್ಥಾನಗಳಲ್ಲಿ ಸ್ಪರ್ಧಿಸಿದ್ರೆ, ಸಣ್ಣ ಪಕ್ಷಗಳಾದ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) 10, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) 2 ಸ್ಥಾನಗಳಲ್ಲಿ ಸ್ಪರ್ಧೆ ಮಾಡುತ್ತಿವೆ.
ಹಾಲಿ ಸರ್ಕಾರದ ಅವಧಿ ಮೇ 10 ರಂದು ಮುಕ್ತಾಯಗೊಳ್ಳಲಿದೆ. ಹಾಗಾಗಿ ಏಪ್ರಿಲ್ 23 ರಂದು ಒಂದೇ ಹಂತದಲ್ಲಿ 234 ಕ್ಷೇತ್ರಗಳಿಗೆ ಮತದಾನ (Voting) ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ. ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನಗಳ ಮೇಲಿನ ತೆರಿಗೆ ವಿನಾಯಿತಿ ಹಿಂಪಡೆದಿದ್ದು ರಾಜ್ಯ ಸರ್ಕಾರದ ಆರ್ಥಿಕ ದಿವಾಳಿತನದ ಸೂಚಕ: ಜೋಶಿ ಟೀಕೆ

