ಚೆನ್ನೈ: ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಶೀಘ್ರವೇ ಗುದ್ದಲಿ ಪೂಜೆ ಮಾಡಲಾಗುವುದು ಎಂದು ಹೇಳಿದ ಬೆನ್ನಲ್ಲೇ ಮೇಕೆದಾಟು ಯೋಜನೆ (Mekedatu Project) ವಿರುದ್ಧ ಕಾನೂನು ಹೋರಾಟ ಮುಂದುವರಿಸಲು ಸಿಎಂ ಜೋಸೆಫ್ ವಿಜಯ್ (CM Joseph Vijay) ಖಡಕ್ ಸೂಚನೆ ನೀಡಿದ್ದಾರೆ
ಕರ್ನಾಟಕದ (Karnataka) ಮಹತ್ವಾಕಾಂಕ್ಷೆಯ ಮೇಕೆದಾಟು ಜಲಾಶಯ ಯೋಜನೆಯನ್ನು ಯಾವುದೇ ಕಾರಣಕ್ಕೂ ಅನುಷ್ಠಾನಕ್ಕೆ ತರಲು ಬಿಡಬಾರದು ಎಂದು ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಮೇಕೆದಾಟು ವಿರುದ್ಧದ ಕಾನೂನು ಹೋರಾಟವನ್ನು ತ್ವರಿತಗತಿಯಲ್ಲಿ ಮುಂದುವರಿಸುವಂತೆ ಹಾಗೂ ರಾಜ್ಯದ ನೀರಾವರಿ ಹಕ್ಕುಗಳನ್ನು ರಕ್ಷಿಸುವಲ್ಲಿ ಯಾವುದೇ ರಾಜಿ ಮಾಡಿಕೊಳ್ಳದಂತೆ ಅವರು ನಿರ್ದೇಶನ ನೀಡಿದ್ದಾರೆ.
ಚೆನ್ನೈನಲ್ಲಿ ಕಾವೇರಿ ಜಲವಿವಾದ ಮತ್ತು ಕಾನೂನು ತಜ್ಞರೊಂದಿಗೆ ಉನ್ನತ ಮಟ್ಟದ ತುರ್ತು ಸಭೆ ನಡೆಸಿದ ವಿಜಯ್, ಜಲ ವಿವಾದದ ಇತಿಹಾಸ, ಹಾಲಿ ನೀರು ಹಂಚಿಕೆ ಪ್ರಕ್ರಿಯೆ ಮತ್ತು ಮೇಕೆದಾಟು ಆಣೆಕಟ್ಟು ನಿರ್ಮಾಣ ಮಾಡಲು ಕರ್ನಾಟಕ ಸರ್ಕಾರ ನಡೆಸುತ್ತಿರುವ ಪ್ರಸ್ತಾಪಗಳ ಬಗ್ಗೆ ಸುದೀರ್ಘ ಮಾಹಿತಿ ಪಡೆದುಕೊಂಡರು.
ಸಭೆಯ ವೇಳೆ ಕಾನೂನು ತಜ್ಞರು ಸುಪ್ರೀಂ ಕೋರ್ಟ್‌ನಲ್ಲಿ ಮೇಕೆದಾಟು ಜಲವಿವಾದಕ್ಕೆ ಸಂಬಂಧಿಸಿದಂತೆ ನಡೆದಿರುವ ಇತ್ತೀಚಿನ ಬೆಳವಣಿಗೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ. ಇದನ್ನೂ ಓದಿ: ಮೂವರು AIADMK ಶಾಸಕರು ರಾಜೀನಾಮೆ – ಟಿವಿಕೆಗೆ ಸೇರ್ಪಡೆ

2025ರ ನವೆಂಬರ್ 13ರಂದು ನಡೆದಿದ್ದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಮೇಕೆದಾಟು ಯೋಜನೆಗೆ ಯಾವುದೇ ನೇರ ಅನುಮತಿ ನೀಡಿರಲಿಲ್ಲ. ಯೋಜನೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ ಎಂದು ಹೇಳಿದ್ದ ನ್ಯಾಯಾಲಯ, “ಈ ಯೋಜನೆ ಹಿಂದಿನ ತೀರ್ಪಿನ ವ್ಯಾಪ್ತಿಗೆ ಬರುತ್ತದೆಯೇ ಎಂಬುದನ್ನು ಕೇಂದ್ರ ಜಲ ಆಯೋಗವೇ (CWA) ನಿರ್ಧರಿಸಬೇಕು” ಎಂದು ಅಭಿಪ್ರಾಯಪಟ್ಟು ತಮಿಳುನಾಡಿನ ಪ್ರಕರಣಗಳನ್ನು ವಜಾಗೊಳಿಸಿತ್ತು.
ಸುಪ್ರೀಂ ಕೋರ್ಟ್‌ನ ಈ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರವು ಸುಪ್ರೀಂನಲ್ಲಿ ಮರುಪರಿಶೀಲನಾ ಅರ್ಜಿ (Review Petition) ಸಲ್ಲಿಸಿತ್ತು. ಈ ಅರ್ಜಿಯು ಚೇಂಬರ್ ವಿಚಾರಣೆಗೆ ಒಳಗಾಗಿ ತೀರ್ಪು ಕಾಯ್ದಿರಿಸಲ್ಪಟ್ಟಿತ್ತು. ಆದರೆ, ಇದೀಗ ಸುಪ್ರೀಂ ಕೋರ್ಟ್ ತಮಿಳುನಾಡು ಸರ್ಕಾರದ ಆ ಮರುಪರಿಶೀಲನಾ ಅರ್ಜಿಯನ್ನೂ ಸಹ ತಿರಸ್ಕರಿಸಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ಸಿಎಂಗೆ ವಿವರಿಸಿದರು. ಇದನ್ನೂ ಓದಿ: ಮೇಕೆದಾಟಿಗೂ ತಮಿಳುನಾಡು ಕ್ಯಾತೆ ಯಾಕೆ? ಯೋಜನೆಯಿಂದ ರಾಜ್ಯಕ್ಕಾಗುವ ಲಾಭ ಏನು?
ಈ ಸಭೆಯಲ್ಲಿ ತಮಿಳುನಾಡು ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಕಾವೇರಿ ಕಾನೂನು ಕೋಶದ ಪ್ರಮುಖ ನ್ಯಾಯವಾದಿಗಳು ಉಪಸ್ಥಿತರಿದ್ದರು.
ಡಿಕೆಶಿ ಹೇಳಿದ್ದೇನು?
ನಾವು ಕೇವಲ ಪ್ರಚಾರಕ್ಕಾಗಿ ಅಥವಾ ರಾಜಕೀಯ ಗಿಮಿಕ್‌ಗಾಗಿ ಹೋಗಿ ಮೇಕೆದಾಟು ಜಾಗದಲ್ಲಿ ಗುದ್ದಲಿ ಪೂಜೆ ಮಾಡುವುದಿಲ್ಲ. ಯೋಜನೆ ಮರುಪರಿಶೀಲಿಸಿ ಹೊಸ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲಾಗಿದ್ದು (DPR) ಸಿದ್ಧಪಡಿಸಲಾಗಿದ್ದು ಕೇಂದ್ರಕ್ಕೆ ಕಳಹಿಸಲಾಗುವುದು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮತ್ತು ಕೇಂದ್ರ ಪರಿಸರ ಇಲಾಖೆಯಿಂದ ಅಂತಿಮ ಕ್ಲಿಯರೆನ್ಸ್ ಸಿಕ್ಕ ತಕ್ಷಣ, ಯಾವುದೇ ವಿಳಂಬವಿಲ್ಲದೆ ಅಧಿಕೃತವಾಗಿ ಗುದ್ದಲಿ ಪೂಜೆ ನೆರವೇರಿಸಿ, ಕಾಮಗಾರಿಯನ್ನು ಆರಂಭಿಸುತ್ತೇವೆ ಎಂದು ಡಿಕೆ ಶಿವಕುಮಾರ್ ಇತ್ತೀಚಿಗೆ ಹೇಳಿದರು.
