ಮಂಡ್ಯ: ರಾಜ್ಯದ ಮುಖ್ಯಮಂತ್ರಿಯಾದ ಬಳಿಕ ಡಿ.ಕೆ.ಶಿವಕುಮಾರ್ (DK Shivakumar) ಅವರು ನಾಳೆ ಮೊದಲ ಬಾರಿಗೆ ಮಂಡ್ಯ (Mandya) ಜಿಲ್ಲೆಗೆ ಅಧಿಕೃತ ಭೇಟಿ ನೀಡಲಿದ್ದು, ಒಟ್ಟು 1,793 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲಿದ್ದಾರೆ.
ಸಿಎಂ ಆಗಮನದ ಹಿನ್ನೆಲೆ ಮಂಡ್ಯ ನಗರದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕಾಗಿ ಮಂಡ್ಯ ವಿವಿ ಆವರಣದಲ್ಲಿ ಬೃಹತ್ ಜರ್ಮನ್ ಟೆಂಟ್ ಅಳವಡಿಸಲಾಗಿದ್ದು, ಭವ್ಯ ವೇದಿಕೆಯನ್ನು ನಿರ್ಮಿಸಲಾಗಿದೆ. ಇದನ್ನೂ ಓದಿ: ಅ.31ರಿಂದ ಡಿ.6 ರವರೆಗೆ ರಾಷ್ಟ್ರೋತ್ಥಾನ ಸಾಹಿತ್ಯ 6ನೇ ‘ಕನ್ನಡ ಪುಸ್ತಕ ಹಬ್ಬ’
ಒಟ್ಟು 1,793 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ಈ ಪೈಕಿ 1,643 ಕೋಟಿ ರೂ. ವೆಚ್ಚದ 40 ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದು, 149 ಕೋಟಿ ರೂ. ವೆಚ್ಚದ 17 ಪೂರ್ಣಗೊಂಡ ಕಾಮಗಾರಿಗಳನ್ನು ಉದ್ಘಾಟನೆ ಮಾಡಲಿದ್ದಾರೆ. ಇದಲ್ಲದೆ, ವಿವಿಧ ಸರ್ಕಾರಿ ಯೋಜನೆಗಳ ಅರ್ಹ ಫಲಾನುಭವಿಗಳಿಗೆ ಸವಲತ್ತುಗಳನ್ನು ಸಹ ವಿತರಿಸಲಿದ್ದಾರೆ. ಮುಖ್ಯಮಂತ್ರಿಗಳ ಮೊದಲ ಭೇಟಿಯನ್ನು ಅದ್ಧೂರಿಯಾಗಿ ಸ್ವಾಗತಿಸಲು ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಆಡಳಿತ ಯಂತ್ರವು ಸಕಲ ತಯಾರಿ ನಡೆಸಿದೆ.
ಮಂಡ್ಯ ನಗರದಾದ್ಯಂತ ಹಾಗೂ ಬೆಂಗಳೂರು-ಮೈಸೂರು ಹಳೇ ಹೆದ್ದಾರಿಯಲ್ಲಿ ನೂರಾರು ಸಂಖ್ಯೆಯಲ್ಲಿ ಫ್ಲೆಕ್ಸ್ ಹಾಗೂ ಕಟೌಟ್ಗಳು ರಾರಾಜಿಸುತ್ತಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆಯ 24ನೇ ಕಂತು ಬಿಡುಗಡೆ – 9.34 ಕೋಟಿ ರೈತರ ಖಾತೆಗೆ 18,690 ಕೋಟಿ ಹಣ ಜಮೆ
