ನವದೆಹಲಿ: ದೇಶದ ರೈತರಿಗೆ ಕೇಂದ್ರ ಸರ್ಕಾರ (Central Govt) ದೀಪಾವಳಿ ಕೊಡುಗೆ ನೀಡಿದ್ದು, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan Scheme) 24ನೇ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿ (PM Modi) ಬಿಡುಗಡೆ ಮಾಡಿದ್ದಾರೆ.
ಗುಜರಾತ್ನ (Gujarat) ಬನಸ್ಕಾಂಠ ಜಿಲ್ಲೆಯ ಭಿಲ್ಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶದ 9.34 ಕೋಟಿಗೂ ಅಧಿಕ ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ಒಟ್ಟು 18,690 ಕೋಟಿ ರೂ.ಗೂ ಅಧಿಕ ಹಣವನ್ನು ನೇರ ನಗದು ವರ್ಗಾವಣೆ ಮೂಲಕ ಜಮೆ ಮಾಡಲಾಗಿದೆ. ಇದನ್ನೂ ಓದಿ: ಬದರಿನಾಥದಿಂದ ಬರುತ್ತಿದ್ದ ಹೆಲಿಕಾಪ್ಟರ್ ಜೋಶಿಮಠ ಬಳಿ ಪತನ
ಯೋಜನೆಯಡಿ ಪ್ರತಿ ಅರ್ಹ ರೈತ ಕುಟುಂಬಕ್ಕೆ 2,000 ರೂ.ಗಳಂತೆ ಹಣ ಪಾವತಿಸಲಾಗಿದೆ. ಈ ಯೋಜನೆಯಡಿ ರೈತ ಕುಟುಂಬಗಳಿಗೆ ವಾರ್ಷಿಕ 6,000 ರೂ. ಆರ್ಥಿಕ ನೆರವು ನೀಡಲಾಗುತ್ತಿದ್ದು, ವರ್ಷಕ್ಕೆ ಮೂರು ಕಂತುಗಳಲ್ಲಿ ತಲಾ 2,000 ರೂ. ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತದೆ. ಹಿಂದಿನ 23 ಕಂತುಗಳ ಮೂಲಕ ಈಗಾಗಲೇ 4.47 ಲಕ್ಷ ರೂ. ಕೋಟಿಗೂ ಅಧಿಕ ಹಣವನ್ನು ಅರ್ಹ ರೈತರಿಗೆ ವಿತರಿಸಲಾಗಿದೆ. 24ನೇ ಕಂತಿನ ಬಿಡುಗಡೆಯೊಂದಿಗೆ ಈ ಯೋಜನೆಯಡಿ ನೆರವು ಪಡೆದ ರೈತರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ.
ಈ ಕಾರ್ಯಕ್ರಮದ ಸಂದರ್ಭದಲ್ಲಿ ಕೃಷಿ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗೂ ಪ್ರಧಾನಿ ಒತ್ತು ನೀಡಿದ್ದಾರೆ. ಕೃಷಿ ಮೂಲಸೌಕರ್ಯ ನಿಧಿಯಡಿ ಸ್ಥಾಪಿಸಲಾದ 521 ಘಟಕಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗಿದ್ದು, ತೋಟಗಾರಿಕೆ ಬೆಳೆಗಳ ಉತ್ಪಾದನೆ ಮತ್ತು ಆದಾಯ ಹೆಚ್ಚಿಸುವ ಉದ್ದೇಶದಿಂದ 12 ತೋಟಗಾರಿಕೆ ಕ್ಲಸ್ಟರ್ಗಳಿಗೆ ಚಾಲನೆ ನೀಡಲಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ರೈತರು ದೇಶದ ಅನ್ನದಾತರು ಮತ್ತು ರಾಷ್ಟ್ರದ ಬಲಿಷ್ಠ ಆಧಾರಸ್ತಂಭಗಳಾಗಿದ್ದಾರೆ. ರೈತರ ಕಲ್ಯಾಣ ಮತ್ತು ಸಬಲೀಕರಣಕ್ಕೆ ತಮ್ಮ ಸರ್ಕಾರ ಆದ್ಯತೆ ನೀಡುತ್ತಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಆರ್ಥಿಕ ನೆರವು ವರ್ಗಾವಣೆ ಮಾಡಲಾಗುತ್ತಿದೆ.ಇದನ್ನೂ ಓದಿ: ಹಾಸನಾಂಬೆ ಜಾತ್ರೆ ಇತಿಹಾಸದಲ್ಲೇ ಮೊದಲ ದಿನ ಭಾರೀ ಜನಸಾಗರ – ಇದು ದೇವಿಯ ಪವಾಡ ಎಂದ ಶಿವಲಿಂಗೇಗೌಡ
ಹಿಂದಿನ ಸರ್ಕಾರಗಳು ಕನಿಷ್ಠ ಬೆಂಬಲ ಬೆಲೆ ವಿಚಾರದಲ್ಲಿ ರೈತರನ್ನು ವಂಚಿಸುತ್ತಿದ್ದವು ಎಂದು ಟೀಕಿಸಿದ ಮೋದಿ, ತಮ್ಮ ಸರ್ಕಾರ ಕೃಷಿ ಉತ್ಪಾದನೆ, ರೈತರ ಆದಾಯ ಹೆಚ್ಚಳ ಹಾಗೂ ಕೃಷಿ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ಕೃಷಿ ಕ್ಷೇತ್ರದ ಆಧುನೀಕರಣ, ತೋಟಗಾರಿಕೆ ಅಭಿವೃದ್ಧಿ ಮತ್ತು ಹೈನುಗಾರಿಕೆಗೆ ಉತ್ತೇಜನ ನೀಡುವ ಮೂಲಕ ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.ಇದನ್ನೂ ಓದಿ: ದೀಪಾವಳಿ ಹಬ್ಬದ ವ್ಯಾಪಾರಕ್ಕೆ INDIA ಒಕ್ಕೂಟದ ರ್ಯಾಲಿ ಅಡ್ಡಿ ಆತಂಕ
