ಬದ್ರುದ್ದೀನ್ ಕೆ ಮಾಣಿ
ಬಿ.ಎಸ್.ಯಡಿಯೂರಪ್ಪ ಅವರಿಗೆ ಇನ್ನೂ ಮೂರು ವರ್ಷ ಮುಖ್ಯಮಂತ್ರಿ ಹುದ್ದೆ ಅಭಾದಿತ, ಆದರೆ ಅದಾದ ಬಳಿಕ ನಿವೃತ್ತಿ ಪಡೆದು ಪಕ್ಷದ ಸಂಘಟನೆಗೆ ಶ್ರಮಿಸುವ ಕೆಲಸ ಮುಂದುವರಿಸ್ತಾರೆ, ಅದು ಅವರ ಪಕ್ಷ ನಿಷ್ಠೆ ಎಂದು ಇತ್ತೀಚೆಗೆ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ನೀಡಿದ ಹೇಳಿಕೆ ಬಿಜೆಪಿ ವಲಯದಲ್ಲಿ ಸಂಚಲನ ಮೂಡಿಸಿದೆ. ಸತತ 4 ದಶಕಗಳಿಗೂ ಹೆಚ್ಚು ಕಾಲ ರಾಜ್ಯದಲ್ಲಿ ಪಕ್ಷ ಕಟ್ಟಲು ಶ್ರಮಿಸಿ, ಝೀರೋದಿಂದ ಸರ್ಕಾರ ರಚನೆಯವರೆಗೆ ಬಿಜೆಪಿಯನ್ನು ತಂದು ನಿಲ್ಲಿಸಿರುವ ಯಡಿಯೂರಪ್ಪ ಅವರ ನಿವೃತ್ತಿ ಸಹಜವಾಗಿ ಪಕ್ಷದ ವಲಯದಲ್ಲಿ ಚರ್ಚೆಯ ವಿಷಯ.
ಮುಂದಿನ ತಿಂಗಳು ಫೆಬ್ರವರಿ 27ಕ್ಕೆ 78 ವಸಂತಗಳನ್ನು ಪೂರೈಸಲಿರುವ ಬಿಎಸ್‍ವೈ, ಬಿಜೆಪಿಯ ನಾಯಕರಲ್ಲಿ ಅತ್ಯಂತ ಪ್ರಮುಖರು. ಇತ್ತೀಚೆಗೆ ಪಕ್ಷದ ಹೈಕಮಾಂಡ್ ಜಾರಿಗೆ ತಂದಿರುವ 70 ವರ್ಷಕ್ಕಿಂತ ಹಿರಿಯರಿಗೆ ನಿವೃತ್ತಿ ನೀಡುವ ನಿಯಮ ಯಡಿಯೂರಪ್ಪ ಅವರಿಗೆ ಈವರೆಗೆ ಅನ್ವಯವಾಗಿಲ್ಲ. ಕರ್ನಾಟಕದಲ್ಲಿ ಅವರಿಗೆ ಇರುವ ವರ್ಚಸ್ಸು ಮತ್ತು ಪಕ್ಷದ ಮೇಲಿನ ಹಿಡಿತ, ಪ್ರಭಾವದ ಬಗ್ಗೆ ಹೈಕಮಾಂಡ್‍ಗೆ ಅರಿವಿದೆ. ಹಾಗೊಂದು ವೇಳೆ ಏಕಾಏಕಿ ಅವರನ್ನು ತೆರೆಯ ಮರೆಗೆ ಸರಿಸಿದರೆ ಪಕ್ಷದ ಸಂಘಟನೆಯ ಮೇಲಾಗುವ ಪರಿಣಾಮಗಳ ಬಗ್ಗೆಯೂ ವರಿಷ್ಠರಿಗೆ ಗೊತ್ತಿದೆ. ಅದಕ್ಕಾಗಿಯೇ ಈ ನಿಯಮದಿಂದ ಬಿಎಸ್‍ವೈ ಅವರಿಗೆ ವಿನಾಯಿತಿ ಎಂಬುದು ಗೊತ್ತೇ ಇದೆ. ಹಾಗಾದ್ರೆ ಅವರೇ ಖುದ್ದಾಗಿ ನಿವೃತ್ತಿಯಾಗ್ತೀನಿ ಅಂದ್ರೂ ಅಷ್ಟು ಸುಲಭವಾಗಿ ಅದಕ್ಕೆ ಒಪ್ಪಲು ಕೂಡಾ ಹೈಕಮಾಂಡ್ ಸಿದ್ಧವಿಲ್ಲ. ಅಂದ್ರೆ, ಬಿಎಸ್‍ವೈ ವರ್ಚಸ್ಸನ್ನು ಮುಂದೆಯೂ ಬಳಸಿಕೊಳ್ಳುವ ಹಾಗೆ, ಅವರ ಬೆಂಬಲಿಗರಿಗೆ ಅಭಿಮಾನಿಗಳಿಗೆ ಯಾವುದೇ ರೀತಿಯಲ್ಲಿ ಅಸಮಾಧಾನ ಆಗದ ರೀತಿಯಲ್ಲಿ ಗೌರವಯುತವಾಗಿ ನಡೆಸಿಕೊಂಡು, ತೆರೆಯ ಮರೆಗೆ ಸರಿಸಲು ಹೈಕಮಾಂಡ್ ಚಿಂತಿಸುತ್ತಿರುವುದಂತೂ ನಿಜ.
Advertisement
Advertisement
ಅಂದ್ರೆ ಪಕ್ಷ ನಿವೃತ್ತಿಯಾಗಲು ಸೂಚಿಸುವ ಮುನ್ನ ಅಥವಾ ನಿರ್ಲಕ್ಷಿಸುತ್ತಾ, ಕಡೆಗಣನೆ ಮಾಡಲು ಆರಂಭಿಸುವ ಮುನ್ನವೇ ಖುದ್ದಾಗಿ ನಿವೃತ್ತಿ ಪಡೆಯುವ ಲೆಕ್ಕಾಚಾರದಲ್ಲಿದ್ದಾರಾ ಬಿಎಸ್‍ವೈ ಅನ್ನೋ ಅನುಮಾನ ಕೂಡಾ ಇದೆ. ಕೈಕೊಡುತ್ತಿರುವ ಆರೋಗ್ಯ, ವಯಸ್ಸಿನ ಕಾರಣ ಮುಂದಿಟ್ಟು ಮುಂದಿನ ದಿನಗಳಲ್ಲಿ ತಮ್ಮ ಪುತ್ರರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ, ಗೌರವ ಪಡೆಯುವ ಲೆಕ್ಕಾಚಾರದೊಂದಿಗೆ ಬಿಎಸ್‍ವೈ ಸಕ್ರಿಯ ರಾಜಕೀಯದಿಂದ ದೂರವಾಗುತ್ತಾರೆ ಅನ್ನೋ ಮಾತು ಕೂಡ ಇದೆ. ತಮ್ಮ ಸರ್ಕಾರದ 100 ದಿನ ಪೂರೈಸಿದ ಸಂದರ್ಭದಲ್ಲಿ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದ ಬಿಎಸ್‍ವೈ, ರಾಜಕಾರಣಕ್ಕೆ ನಿವೃತ್ತಿ ಅನ್ನೋದಿಲ್ಲ, ಆದ್ರೆ ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ 150 ಸೀಟು ಗೆಲ್ಲುವಂತೆ ಮಾಡಿ ಮತ್ತೆ ಅಧಿಕಾರಕ್ಕೆ ತರುವ ಗುರಿ ಹೊಂದಿದ್ದೇನೆ. ಮುಂದೆ ಯಾವ ರಾಜ್ಯಪಾಲ ಹುದ್ದೆಯನ್ನೂ ಪಡೆಯದೇ ಪಕ್ಷದ ಸಾಮಾನ್ಯ ಕಾರ್ಯರ್ತನಾಗಿ ಪಕ್ಷದ ಸಂಘಟನೆಯಲ್ಲಿ ತೊಡಗುತ್ತೇನೆ ಎಂದು ಹೇಳಿದ್ದರು. ಇದನ್ನೆಲ್ಲಾ ಗಮನಿಸಿದ್ರೆ, ಯಡಿಯೂರಪ್ಪ ಕೂಡಾ ಗೌರವಯುತವಾಗಿ ರಾಜಕೀಯ ನಿವೃತ್ತಿ ಪಡೆಯುವ ಸಿದ್ಧತೆಯಲ್ಲಿದ್ದಾರೆ ಅನ್ನೋದನ್ನು ಪುಷ್ಟೀಕರಿಸುತ್ತದೆ. ಹಾಗಂತ ಯಡಿಯೂರಪ್ಪ ಮಾತ್ರ ಅಲ್ಲ, ರಾಜ್ಯದ ಇನ್ನೂ ಅನೇಕ ಹಿರಿಯ ರಾಜಕಾರಣಿಗಳು ನಿವೃತ್ತಿಯ ಬಗ್ಗೆ ಮಾತನಾಡಿದ್ದುಂಟು. ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಇದೇ ಕೊನೆಯ ಚುನಾವಣೆ ಮತ್ತೆ ಸ್ಪರ್ಧಿಸಲಾರೆ ಎಂದಿದ್ದರು. ಆದ್ರೆ 2018ರಲ್ಲಿ ಬದಲಾದ ಸನ್ನಿವೇಶದ ನೆಪದಲ್ಲಿ ಮೈಸೂರು ಬಿಟ್ಟು ಬದಾಮಿಯಲ್ಲಿ ಮತ್ತೆ ಚುನಾವಣೆಗೆ ಸ್ಪರ್ಧಿಸಿ ಸಕ್ರಿಯ ರಾಜಕಾರಣದಲ್ಲಿ ಮುಂದುವರಿದಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರಂತೂ ನೂರಾರು ಬಾರಿ ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿ ರಾಜಕಾರಣದಲ್ಲಿ ಸಕ್ರಿಯವಾಗಿದ್ದಾರೆ. ಆದ್ರೆ ಯಡಿಯೂರಪ್ಪ ಹಾಗಲ್ಲ, ತಮ್ಮ ಹೇಳಿಕೆಗೆ ಬದ್ಧರಾಗಿ, ನಿವೃತ್ತಿಯಾಗಬಹುದು ಎಂಬುದು ಅವರನ್ನು ಹತ್ತಿರದಿಂದ ಬಲ್ಲವರ ನಂಬಿಕೆ.
Advertisement
Advertisement
ಹಾಗಾದ್ರೆ, ಪಕ್ಷದ ಶಕ್ತಿಶಾಲಿ ನಾಯಕನೊಬ್ಬ ತೆರೆಗೆ ಸರಿದರೆ ಪಕ್ಷದ ಭವಿಷ್ಯವೇನು ಅನ್ನೋ ಲೆಕ್ಕಾಚಾರವನ್ನು ವರಿಷ್ಠರು ಹಾಕುವುದು ಸಹಜ. ಪರ್ಯಾಯ ನಾಯಕತ್ವದ ಹುಡುಕಾಟವನ್ನು ಈಗಾಗಲೇ ಅವರು ಆರಂಭಿಸಿರುವುದು ಕೂಡಾ ಗುಟ್ಟಾಗಿ ಉಳಿದಿಲ್ಲ. ಹೀಗಾಗಿಯೇ ಯುವ ಮುಖಗಳಿಗೆ ವರಿಷ್ಠರು ಆದ್ಯತೆ ನೀಡತೊಡಗಿದ್ದಾರೆ. ಹಾಗಂತ ಅವರ್ಯಾರೂ ಬಿಎಸ್‍ವೈ ಅವರ ಸ್ಥಾನವನ್ನು ತುಂಬ್ತಾರೆ ಅನ್ನೋದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ, ಯಡಿಯೂರಪ್ಪ ಅವರ ವರ್ಚಸ್ಸು, ಅವರ ಶಕ್ತಿ ಅನಿವಾರ್ಯ ಅನ್ನೋ ವಾತಾವರಣ ಪಕ್ಷದಲ್ಲಿ ಇನ್ನೂ ಇದೆ. ಅವರ ಹೊರತಾಗಿ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದು ಸುಲಭದ ಮಾತಲ್ಲ. ಹಾಗಾದ್ರೆ ಅವರ ನಿವೃತ್ತಿ, ಸಂಘಟನೆಯ ಮೇಲೆ ಪರಿಣಾಮ ಬೀರದಂತೆ, ಗೌರವಯುತ ವಿದಾಯ ಹೇಳುವುದು ಪಕ್ಷಕ್ಕೆ ಅನಿವಾರ್ಯವಾಗಿದೆ. ಪಕ್ಷದ ವರಿಷ್ಠರು ಯಡಿಯೂರಪ್ಪ ಅವರ ಮೂಲಕವೇ ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ತಮ್ಮ ನಿಲುವೇನು ಅನ್ನೋದನ್ನು ತಿಳಿಸುವ ಹಾಗೆ ಮಾಡಲೇಬೇಕಾಗಿದೆ, ಇಲ್ಲದಿದ್ರೆ ಅದು ಉಲ್ಟಾ ಹೊಡೆದ್ರೆ ಏನಾಗುತ್ತೆ ಅನ್ನೋ ಆತಂಕ ಕೂಡಾ ವರಿಷ್ಠರಿಗೆ ಇದೆ.
ಯಡಿಯೂರಪ್ಪ ಅವರು ಬಯಸುವ ಹಾಗೆ, ಷರತ್ತಿಗೆ ಒಳಪಟ್ಟೇ ಗೌರವಯುತ ವಿದಾಯ ಹೇಳುವುದೊಂದೇ ಪಕ್ಷದ ವರಿಷ್ಠರಿಗೆ ಇರುವ ಮಾರ್ಗ ಅನ್ನೋದಂತೂ ನಿಜ. 3 ವರ್ಷ ಮುಂಚಿತವಾಗಿಯೇ ಅದಕ್ಕಾಗಿ ಸಿದ್ಧತೆ ನಡೆಸುತ್ತಾ ಬಿಜೆಪಿ ಹೈಕಮಾಂಡ್ ಇತಿಹಾಸ ಸೃಷ್ಟಿಸಲು ಹೊರಟಿರುವುದಂತೂ ಸತ್ಯ. ಈಗಲೇ ಅವರ ನಿವೃತ್ತಿಯ ವಿಷಯವನ್ನು ಹರಿಯಬಿಟ್ಟು ಪಕ್ಷದ ನಾಯಕರು ಎಡವಟ್ಟು ಮಾಡಿದ್ರಾ ಅನ್ನೋ ಅಭಿಪ್ರಾಯವೂ ಇದೆ. ಬಿಎಸ್‍ವೈ ನಿವೃತ್ತಿ ವಿಷಯ ಪಕ್ಷದ ಸಂಘಟನೆ ಮೇಲೆ ಪರಿಣಾಮ ಬೀರುತ್ತೆ ಅನ್ನೋ ಆತಂಕದಲ್ಲಿರುವ ಹಲವು ನಾಯಕರು, ಅವಧಿಗೆ ಮುನ್ನವೇ ನಿವೃತ್ತಿಯ ಬಗ್ಗೆ ಚರ್ಚೆ ನಡೆಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಬಿಜೆಪಿಯ ಪ್ರಭಾವಿ ನಾಯಕ, ರಾಜ್ಯ ಕಂಡ ಮೇರು ರಾಜಕಾರಣಿ ಬಿಎಸ್‍ವೈ ನಿವೃತ್ತಿ ಹೇಗೆ ಅನ್ನೋ ಕುತೂಹಲ ಸಹಜವಾಗಿಯೇ ಉಳಿದಿದೆ.
[ಈ ಬರಹದಲ್ಲಿ ಪ್ರಕಟವಾಗಿರುವ ಅಭಿಪ್ರಾಯಗಳು ಲೇಖಕರದ್ದು.]