ಬೆಂಗಳೂರು: ಪ್ರೇಯಸಿ ಮನೆಗೆ ಹೋಗಿ ಪತಿಗೆ ಸಿಕ್ಕಿಬಿದ್ದು ಆಕೆಯ ಪತಿ ಹಾಗೂ ಕುಟುಂಬಸ್ಥರಿಂದ ಹಲ್ಲೆಗೊಳಗಾಗಿದ್ದ ಯುವಕ ಸಾವನ್ನಪ್ಪಿದ ಘಟನೆ ಬ್ಯಾಟರಾಯಪುರ (Byatarayanapura) ಪೊಲೀಸ್ ಠಾಣಾ ವ್ಯಾಪ್ತಿಯ ಶ್ಯಾಮಣ್ಣ ಗಾರ್ಡನ್‌ನಲ್ಲಿ ನಡೆದಿದೆ.
ರಾಮನಗರದ ಬಿಡಿ ಕಾಲೋನಿ ನಿವಾಸಿ ಮೊಹಮ್ಮದ್ ಖಾಸಿಂ (27) ಕೊಲೆಯಾದ ಯುವಕ. ಮಾಜಿ ಪ್ರೇಯಸಿ ಮೇ 25 ರಂದು ಕರೆ ಮಾಡಿದ್ದ ಹಿನ್ನಲೆ ಯುವಕ ಮನೆಗೆ ಹೋಗಿದ್ದ. ಈ ವೇಳೆ ಪತಿ ಹಾಗೂ ಕುಟುಂಬಸ್ಥರ ಕೈಗೆ ಸಿಕ್ಕಿಬಿದ್ದಿದ್ದ. ಈ ವೇಳೆ ಆತನ ಮೇಲೆ ಹಲ್ಲೆ ಮಾಡಿದ್ದರು. ಗಾಯಗೊಂಡಿದ್ದ ಖಾಸಿಂ ಮನೆಗೆ ತೆರಳಿ ಮಲಗಿದ್ದ. ಆತನಿಗೆ ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ.
ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ, ಕೊಲೆ ಆರೋಪದ ಮೇಲೆ ಮಾಜಿ ಪ್ರೇಯಸಿಯನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
