ಲಕ್ನೋ: 6 ಕೋಟಿ ಬ್ಯುಸಿನೆಸ್, 2 ಕೋಟಿ ವಿಮೆ ಹಣದ ಆಸೆಗಾಗಿ ಪತ್ನಿಯೇ ತನ್ನ ಪತಿಗೆ ಆಹಾರದಲ್ಲಿ ನಿಧಾನವಾಗಿ ವಿಷ ಬೆರೆಸಿ ಕೊಲ್ಲಲು ಯತ್ನಿಸಿದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ (Ghaziabad Crime) ನಡೆದಿದೆ.
ಆಸ್ತಿಗಾಗಿ ತನ್ನ ಗಂಡ, ಮಗ ಮತ್ತು ಸೋದರಳಿಯನನ್ನೇ ಕೊಲ್ಲಲು ಮುಂದಾಗಿದ್ದ ರೇಣು ಭಟ್ನಾಗರ್ನನ್ನ ಪೊಲೀಸರು ಬಂಧಿಸಿದ್ದಾರೆ.
ಗಾಜಿಯಾಬಾದ್ನ ವಸುಂಧರಾ ನಿವಾಸಿಯಾದ ಸುಶೀಲ್ ಕುಮಾರ್ ಭಟ್ನಾಗರ್ ಎಂಬುವವರು ಯಶಸ್ವಿ ಟ್ರಾವೆಲ್ ಏಜೆನ್ಸಿ ಬ್ಯುಸಿನೆಸ್ ಇದೆ. ಕಳೆದ ಕೆಲವು ದಿನಗಳಿಂದ ಸುಶೀಲ್, ಅವರ ಮಗ ಮತ್ತು ಸೋದರಳಿಯ ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರು. ಆರೋಗ್ಯದಲ್ಲಿ ಹಠಾತ್ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಅನುಮಾನಗೊಂಡ ಸುಶೀಲ್ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದರು. ಈ ವೇಳೆ ಅವರ ದೇಹದಲ್ಲಿ ಅಪಾಯಕಾರಿ ಪ್ರಮಾಣದ ‘ಸೀಸ’ (Lead) ಇರುವುದು ಪತ್ತೆಯಾಗಿತ್ತು.
ತಮಗೆ ನಿಧಾನವಾಗಿ ವಿಷಪ್ರಾಶನ ಮಾಡಲಾಗುತ್ತಿದೆ ಎಂಬ ಸತ್ಯ ತಿಳಿಯುತ್ತಿದ್ದಂತೆಯೇ ಸುಶೀಲ್ ಅವರು ಸೆಪ್ಟೆಂಬರ್ 24 ರಂದು ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ನವೆಂಬರ್ 23 ರಂದು ಆರೋಪಿ ರೇಣು ಭಟ್ನಾಗರ್ ಅವರನ್ನು ಬಂಧಿಸಿದ್ದಾರೆ.ಇದನ್ನೂ ಓದಿ: 11ನೇ ದಿನಕ್ಕೆ ಕಾಲಿಟ್ಟ ʻಆಶಾʼ ಹೋರಾಟ – ತಡರಾತ್ರಿ ಪ್ರತಿಭಟನಾ ನಿರತ ಕಾರ್ಯಕರ್ತೆ ಅಸ್ವಸ್ಥ
6 ಕೋಟಿ ಬ್ಯುಸಿನೆಸ್, 2 ಕೋಟಿ ವಿಮೆಗಾಗಿ ಕೊಲೆ ಯತ್ನ
ಪೊಲೀಸರ ವಿಚಾರಣೆ ವೇಳೆ ಆರೋಪಿ ರೇಣು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ನನ್ನ ಪತಿ 5-6 ಕೋಟಿ ರೂ. ಮೌಲ್ಯದ ಟ್ರಾವೆಲ್ ಏಜೆನ್ಸಿ ಬ್ಯುಸಿನೆಸ್ ಹೊಂದಿದ್ದಾರೆ. ಜೊತೆಗೆ 2 ಕೋಟಿ ರೂ. ಜೀವ ವಿಮಾ ಪಾಲಿಸಿ ಇದೆ. ಅದಕ್ಕೆ ನಾನೇ ಏಕೈಕ ನಾಮಿನಿಯಾಗಿದ್ದೇನೆ. ಅವರು ಮೃತಪಟ್ಟರೆ ಈ ಎಲ್ಲಾ ಆಸ್ತಿ ಮತ್ತು ಹಣ ನನ್ನದಾಗುತ್ತದೆ ಎಂಬ ದುರಾಸೆಯಿಂದ ಅವರ ಊಟದಲ್ಲಿ ಸೀಸ ಬೆರೆಸುತ್ತಿದ್ದೆ ಎಂದು ಆಕೆ ಸತ್ಯ ಬಾಯ್ಬಿಟ್ಟಿದ್ದಾಳೆ.
ಸದ್ಯ ಭಾರತೀಯ ನ್ಯಾಯ ಸಂಹಿತೆಯ (BNS) ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಸಂಚಿನಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಹಾಸನದಲ್ಲಿ ಜೋಡಿ ಚಿರತೆ ಪ್ರತ್ಯಕ್ಷ – ಜನರಲ್ಲಿ ಆತಂಕ
