ನವದೆಹಲಿ: ಕಳೆದ ಏಪ್ರಿಲ್ನಲ್ಲಿ ಸಂಖ್ಯಾಬಲದ ಕೊರತೆಯಿಂದಾಗಿ ಸಂಸತ್ತಿನಲ್ಲಿ ಹಿನ್ನಡೆ ಅನುಭವಿಸಿದ್ದ ಮೋದಿ ಸರ್ಕಾರ(Narendra Modi Government) ಈಗ ತಿಂಗಳುಗಳ ತೆರೆಮರೆಯ ಕಸರತ್ತಿನ ಬಳಿಕ ಮತ್ತೆ ಸದನದಲ್ಲಿ ತನ್ನ ಶಕ್ತಿ ಪ್ರದರ್ಶಿಸಲು ಸಜ್ಜಾಗಿದೆ.
ನವೆಂಬರ್ 30ರ ಬೆಳಿಗ್ಗೆ ಲೋಕಸಭೆ(Lok Sabha)) ಹಾಗೂ ಡಿಸೆಂಬರ್ 2ರ ಬೆಳಿಗ್ಗೆ ರಾಜ್ಯಸಭೆಯನ್ನು(Rajya Sabha) ಪುನರಾರಂಭಿಸುವಂತೆ ಕೇಂದ್ರ ಸರ್ಕಾರ ಉಭಯ ಸದನಗಳ ಅಧ್ಯಕ್ಷರಿಗೆ ಮನವಿ ಮಾಡಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಗುರುವಾರ ತಿಳಿಸಿದ್ದಾರೆ.
ಡಿಸೆಂಬರ್ 3ರಂದು ಕಲಾಪ ಮುಕ್ತಾಯಗೊಳ್ಳುವ ಸಾಧ್ಯತೆಯಿದೆ. ಇದು ಕಳೆದ ಆಗಸ್ಟ್ನಿಂದ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದ್ದ ಮುಂಗಾರು ಅಧಿವೇಶನದ ಮುಂದುವರಿದ ಭಾಗವಾಗಿದೆ. ನವೆಂಬರ್ 30ಕ್ಕೆ ಈ ಅಧಿವೇಶನದ ಎರಡು ಹಂತಗಳ ನಡುವಿನ ಅಂತರ ಬರೋಬ್ಬರಿ 108 ದಿನಗಳಿಗೆ ತಲುಪಲಿದ್ದು, 2008ರಲ್ಲಿದ್ದ 87 ದಿನಗಳ ಹಳೆಯ ದಾಖಲೆಯನ್ನು ಮುರಿಯಲಿದೆ.
2023ರ ಕಾನೂನಿನಡಿ ಮಹಿಳೆಯರಿಗೆ ನೀಡಲಾಗಿರುವ ಶೇ. 33ರಷ್ಟು ಮೀಸಲಾತಿಯನ್ನು ಜಾರಿಗೊಳಿಸಲು ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವುದು ಹಾಗೂ ಪುನರ್ವಿಂಗಡಣೆ (Delimitation) ಮಾಡುವುದು ಅತ್ಯಗತ್ಯವಾಗಿದೆ. ಶುಕ್ರವಾರ ನಡೆಯಲಿರುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ‘ಕ್ಷೇತ್ರ ಪುನರ್ವಿಂಗಡಣೆ ಮಸೂದೆ’ ಕುರಿತು ಚರ್ಚೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಗುರುವಾರ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ದೇಶದ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಸಿಕ್ಕೇ ಸಿಗುತ್ತದೆ, ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ” ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ನೇರ ಸವಾಲು ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೂ ಇದೇ ಧಾಟಿಯಲ್ಲಿ ಮಾತನಾಡಿದ್ದಾರೆ. 2029ರ ಲೋಕಸಭಾ ಚುನಾವಣೆಯನ್ನು ಹೊಸ ಕ್ಷೇತ್ರಗಳ ವ್ಯಾಪ್ತಿಯಲ್ಲೇ ನಡೆಸಬೇಕಾದರೆ ಈ ಬಾರಿಯ ಅಧಿವೇಶನದಲ್ಲೇ ಮಸೂದೆ ಅಂಗೀಕಾರವಾಗುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ.
The Government has requested Hon’ble Speaker, Lok Sabha and Hon’ble Chairman, Rajya Sabha to reconvene Lok Sabha on Monday, 30th November, 2026 and Rajya Sabha on Wednesday, 2nd December, 2026 respectively to transact essential Government Business. Subject to exigencies of the Business, the sitting of both Houses may conclude on 3rd December, 2026.
— Kiren Rijiju (@KirenRijiju) November 26, 2026
ಮಸೂದೆಯಲ್ಲಿ ಏನಿದೆ?
ಉದ್ದೇಶಿತ ಮಸೂದೆಯ ಪ್ರಕಾರ ಲೋಕಸಭೆಯ ಸದಸ್ಯ ಬಲವನ್ನು ಪ್ರಸ್ತುತ ಇರುವ 543 ರಿಂದ 850ಕ್ಕೆ ಏರಿಸಲಾಗುವುದು. ಇದರಲ್ಲಿ ಮೂರನೇ ಒಂದು ಭಾಗದಷ್ಟು (ಸುಮಾರು 283 ಸ್ಥಾನಗಳು) ಮಹಿಳೆಯರಿಗೆ ಮೀಸಲಿರಲಿದೆ.
2027ರ ಜನಗಣತಿಗೆ ಕಾಯದೆ 2011ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ಮಾಡಲು ಸರ್ಕಾರ ಮುಂದಾಗಿದೆ. ರಾಜ್ಯಗಳ ನಡುವಿನ ಸಮತೋಲನ ಕಾಪಾಡಲು ಪ್ರತಿ ರಾಜ್ಯದ ಸ್ಥಾನಗಳನ್ನು ಒಂದೇ ಸಮನಾಗಿ ಶೇ. 50ರಷ್ಟು ಹೆಚ್ಚಿಸಲಾಗುವುದು ಎಂದು ಸರ್ಕಾರ ಈ ಹಿಂದೆ ಮೌಖಿಕವಾಗಿ ಭರವಸೆ ನೀಡಿತ್ತು. ಆದರೆ ಕಳೆದ ಬಾರಿಯ ಮಸೂದೆಯ ಕರಡಿನಲ್ಲಿ ಈ ಅಂಶ ಇರಲಿಲ್ಲ.
ಸಂಖ್ಯೆ ಎಷ್ಟಿದೆ?
ಇದು ಸಂವಿಧಾನ ತಿದ್ದುಪಡಿ ಮಸೂದೆಯಾಗಿರುವುದರಿಂದ ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತ (ಸುಮಾರು 360 ಸಂಸದರ ಬೆಂಬಲ) ಅಗತ್ಯವಿದೆ. ಸದ್ಯ ಬಿಜೆಪಿಯ 241 ಸಂಸದರು ಸೇರಿ ಎನ್ಡಿಎ ಬಳಿ 319 ಸದಸ್ಯರ ಖಚಿತ ಬಲವಿದೆ.
• ಬಿಜೆಪಿ (BJP): 241
• ಟಿಡಿಪಿ (TDP): 16
• ಶಿವಸೇನೆ (ಶಿಂಧೆ ಬಣ): 13
• ಜೆಡಿಯು (JD-U): 12
• ಎಲ್ಜೆಪಿ (LJP-RV): 5
• ಜನಸೇನಾ ಪಕ್ಷ (JSP): 2
• ಇತರ ಮಿತ್ರಪಕ್ಷಗಳು (NCPI ಸೇರಿದಂತೆ): 31
ತೃಣಮೂಲ ಕಾಂಗ್ರೆಸ್ನಿಂದ (TMC) ಸಿಡಿದು ಎನ್ಸಿಪಿಐ (NCPI) ಸೇರಿರುವ 20 ಸಂಸದರ ಗುಂಪು ಸರ್ಕಾರಕ್ಕೆ ಬೆಂಬಲ ನೀಡಲಿದೆ. ಜೊತೆಗೆ ಪ್ರತಿ ರಾಜ್ಯದ ಸ್ಥಾನಗಳನ್ನು ಶೇ. 50ರಷ್ಟು ಹೆಚ್ಚಿಸಿದರೆ ಮಸೂದೆ ಬೆಂಬಲಿಸಲು ಅಭ್ಯಂತರವಿಲ್ಲ ಎಂದು ಶರದ್ ಪವಾರ್ ಬಣದ ಎನ್ಸಿಪಿ ನಾಯಕಿ ಸುಪ್ರಿಯಾ ಸುಳೆ ಹೇಳಿರುವುದರಿಂದ ಆ ಪಕ್ಷದ 8 ಸಂಸದರ ಬೆಂಬಲವೂ ಸಿಗಬಹುದು.
ಮೇ ತಿಂಗಳಲ್ಲಿ ನಡೆದ ತಮಿಳುನಾಡು ಚುನಾವಣೆಯಲ್ಲಿ ನಟ ವಿಜಯ್ ಅವರ ಟಿವಿಕೆ (TVK) ಪಕ್ಷದೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದರಿಂದ INDIA ಒಕ್ಕೂಟದಿಂದ ಹೊರಬಂದಿರುವ ಡಿಎಂಕೆಯ 22 ಸಂಸದರು ಹಾಗೂ ಇತರ ಪಕ್ಷೇತರ ಸಂಸದರ ನಿಲುವು ಈಗ ನಿರ್ಣಾಯಕವಾಗಿದೆ.
ಈಗ ಬಂದಿರುವ ಮಾಹಿತಿಗಳ ಪ್ರಕಾರ ಆಪ್ ಮತ್ತು ಆರ್ಜೆಡಿ ಪಕ್ಷಗಳು ಮತ ಹಾಕುವ ಸಮಯದಲ್ಲಿ ಗೈರಾಗಬಹುದು ಎಂದು ವರದಿಗಳು ತಿಳಿಸಿವೆ. ಒಂದು ವೇಳೆ ಸಂಸದರು ಗೈರಾದರೆ ಬಹುಮತಕ್ಕೆ ಬೇಕಾಗಿರುವ ಮತಗಳ ಸಂಖ್ಯೆ ಕಡಿಮೆಯಾಗಲಿದೆ.
#WATCH | Delhi: Union Home Minister Amit Shah says, “The constitutional amendment providing 33 per cent reservation to women in Parliament and State Assemblies- the Congress party has been sitting on it and blocking it. Today, I want to tell Rahul ji: it is the resolve of the Bharatiya Janata Party and our leader Narendra Modi that the women of this country will definitely get 33 per cent reservation; you cannot stop us.”
— ANI (@ANI) November 26, 2026
ಏಪ್ರಿಲ್ನಲ್ಲಿ ಏನಾಗಿತ್ತು?
ಲೋಕಸಭೆಯಲ್ಲಿ ಹಾಜರಿದ್ದ 528 ಮಂದಿ ಸಂಸದರ ಪೈಕಿ 298 ಸಂಸದರ ಪರವಾಗಿ ಮತ ಚಲಾಯಿಸಿದರೆ ವಿರುದ್ಧವಾಗಿ 230 ಮತಗಳು ಬಿದ್ದಿದ್ದವು. ಅಗತ್ಯವಿದ್ದ 352 ಮತಗಳಿಗೆ ಹೋಲಿಸಿದರೆ 54 ಮತಗಳ ಕೊರತೆಯಿಂದಾಗಿ ಮಸೂದೆ ಸೋಲು ಕಂಡಿತು.
ಸರ್ಕಾರವು ಮಹಿಳಾ ಮೀಸಲಾತಿಯ ಹೆಸರಿನಲ್ಲಿ ತನಗೆ ಅನುಕೂಲವಾಗುವಂತೆ ಕ್ಷೇತ್ರಗಳ ನಕ್ಷೆಯನ್ನು ಬದಲಿಸುತ್ತಿದೆ ಎಂದು ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಆರೋಪಿಸಿವೆ. ಮಸೂದೆಗೆ ಬೆಂಬಲ ನೀಡಲು ಕಾಂಗ್ರೆಸ್, ಡಿಎಂಕೆ ಮತ್ತು ಆಮ್ ಆದ್ಮಿ ಪಕ್ಷಗಳು ಸರ್ಕಾರದ ಮುಂದೆ 4 ಷರತ್ತುಗಳನ್ನು ಇಟ್ಟಿವೆ:
1. ಲೋಕಸಭೆಯ ಸದಸ್ಯ ಬಲವನ್ನು ಈಗಿರುವ 543ಕ್ಕೇ ಸೀಮಿತಗೊಳಿಸಬೇಕು.
2. ಯಾವ ರಾಜ್ಯದ ಸ್ಥಾನಗಳ ಸಂಖ್ಯೆಯನ್ನೂ ಬದಲಾಯಿಸಬಾರದು.
3. 2023ರ ‘ನಾರಿ ಶಕ್ತಿ ವಂದನ್ ಅಧಿನಿಯಮ’ವನ್ನು ತಕ್ಷಣವೇ ಜಾರಿಗೊಳಿಸಿ, ಈಗಿರುವ 543 ಸ್ಥಾನಗಳಲ್ಲೇ 182 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕು.
4. ಈ ವ್ಯವಸ್ಥೆಯನ್ನು ಮುಂದಿನ 25 ವರ್ಷಗಳ ಕಾಲ ಬದಲಾಯಿಸದಂತೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕು.
ವಿಪಕ್ಷಗಳ ಈ ಷರತ್ತುಗಳಿಗೆ ಒಪ್ಪಿದರೆ ಕ್ಷೇತ್ರ ಪುನರ್ವಿಂಗಡಣೆಯ ಮೂಲ ಉದ್ದೇಶವನ್ನೇ ಕೈಬಿಟ್ಟಂತಾಗುತ್ತದೆ ಎಂಬುದು ಸರ್ಕಾರದ ವಾದವಾಗಿದೆ. ಈ ನಡುವೆ, ಈ ವಿಷಯದ ಕುರಿತು ಚರ್ಚಿಸಲು ಸರ್ವಪಕ್ಷ ಸಭೆ ಕರೆಯುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
