ಬೆಳಗಾವಿ: ಮಳೆ ಕೊರತೆ ಹಾಗೂ ಗೊಣ್ಣೆಹುಳು ಬಾಧೆಯಿಂದ ಈ ಬಾರಿ ಬೆಳಗಾವಿ(Belagavi) ಜಿಲ್ಲೆಯಾದ್ಯಂತ ಕಬ್ಬಿನ ಇಳುವರಿ ಕುಸಿದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ಇಂತಹ ವಿಪರೀತ ಹವಾಮಾನ ವೈಪರೀತ್ಯದ ನಡುವೆಯೂ ನಿಪ್ಪಾಣಿ(Nippani) ತಾಲೂಕಿನ ಬೇಡಕಿಹಾಳ ಗ್ರಾಮದ ಪ್ರಗತಿಪರ ರೈತ ಚಂದ್ರಕಾಂತ ಚೌಹಾಣ ಅವರು ಕೇವಲ ಒಂದು ಎಕರೆ ಜಮೀನಿನಲ್ಲಿ ಬರೋಬ್ಬರಿ 100 ಟನ್ ಕಬ್ಬು(Sugarcane) ಬೆಳೆಯುವ ಮೂಲಕ ಇಡೀ ಜಿಲ್ಲೆಯ ಗಮನ ಸೆಳೆದಿದ್ದಾರೆ.
ಸಾಮಾನ್ಯವಾಗಿ ಈ ಭಾಗದಲ್ಲಿ ಒಂದು ಎಕರೆಗೆ ಸರಾಸರಿ 40 ರಿಂದ 50 ಟನ್ ಕಬ್ಬು ಬೆಳೆಯುವುದೇ ಹೆಚ್ಚು. ಆದರೆ, ಸಕ್ಕರೆ ಕಾರ್ಖಾನೆ ಹಾಗೂ ಕೃಷಿ ಅಧಿಕಾರಿಗಳ ಸೂಕ್ತ ಮಾರ್ಗದರ್ಶನವನ್ನು ಪಾಲಿಸಿದ ಚಂದ್ರಕಾಂತ ಅವರು ದುಪ್ಪಟ್ಟು ಇಳುವರಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಯಶಸ್ಸಿನ ಕೃಷಿ ವಿಧಾನ ಹೇಗಿತ್ತು?
ಚಂದ್ರಕಾಂತ ಅವರು 2025ರ ಜುಲೈ ತಿಂಗಳಲ್ಲಿ ಕಬ್ಬು ನಾಟಿ ಮಾಡುವಾಗ, ಎರಡು ಸಾಲುಗಳ ನಡುವೆ ನಾಲ್ಕೂವರೆ ಅಡಿ ಅಂತರ ಬಿಟ್ಟಿದ್ದರು. ಇದರಿಂದ ಬೆಳೆಗೆ ಉತ್ತಮ ಗಾಳಿ ಮತ್ತು ಸೂರ್ಯನ ಬೆಳಕು ಸಿಗುವಂತಾಯಿತು.
ಮಳೆಯನ್ನೇ ನಂಬಿ ಕೂರದೆ, ತಮ್ಮ ಹೊಲದಲ್ಲಿರುವ ಎರಡು ಕೊಳವೆಬಾವಿಗಳ ಮೂಲಕ ತುಂತುರು ನೀರಾವರಿ (Sprinkler Irrigation) ಪದ್ಧತಿಯನ್ನು ಅಳವಡಿಸಿಕೊಂಡು, ಬೆಳೆಗೆ ಅಗತ್ಯವಿರುವಷ್ಟು ನೀರನ್ನು ನಿಯಮಿತವಾಗಿ ಪೂರೈಸಿದ್ದಾರೆ.
ರಾಸಾಯನಿಕಗಳ ಬದಲಾಗಿ ಮಣ್ಣಿನ ಫಲವತ್ತತೆ ಹೆಚ್ಚಿಸುವ ಸಾವಯವ ಗೊಬ್ಬರ ಹಾಗೂ ಕೊಟ್ಟಿಗೆ (ಸಗಣಿ) ಗೊಬ್ಬರವನ್ನು ಹೆಚ್ಚಾಗಿ ಬಳಸಿದ್ದಾರೆ.
ಕೃಷಿ ಯಂತ್ರೋಪಕರಣಗಳ ಬಳಕೆ, ಕೂಲಿ ಕಾರ್ಮಿಕರ ವೆಚ್ಚ, ಕೀಟನಾಶಕ, ಸಾವಯವ ಹಾಗೂ ಸಗಣಿ ಗೊಬ್ಬರ ಸೇರಿದಂತೆ ಒಂದು ಎಕರೆಗೆ ಚಂದ್ರಕಾಂತ ಅವರಿಗೆ ಒಟ್ಟು 40,000 ರೂ. ವೆಚ್ಚ ತಗುಲಿದೆ. ಕಡಿಮೆ ನೀರು ಮತ್ತು ಕಡಿಮೆ ಖರ್ಚಿನಲ್ಲಿ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಬಂಪರ್ ಬೆಳೆ ತೆಗೆಯಬಹುದು ಎಂಬುದನ್ನು ಸಾಬೀತುಪಡಿಸಿರುವ ಚಂದ್ರಕಾಂತ ಚೌಹಾಣ, ಇತರ ರೈತರಿಗೆ ನಿಜವಾದ ಮಾದರಿಯಾಗಿದ್ದಾರೆ.
