– ರಾಜಸ್ಥಾನ್‌ಗೆ 47 ರನ್‌ಗಳ ಭರ್ಜರಿ ಜಯ – ಹೈದರಾಬಾದ್ ಔಟ್
– ‘ಸೂರ್ಯ’ವಂಶಿ ಅಬ್ಬರಕ್ಕೆ ‘ಸನ್’ ಬರ್ನ್
ಚಂಡೀಗಢ: ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್, ಜೋಫ್ರಾ ಆರ್ಚರ್ ಬೆಂಕಿ ಬೌಲಿಂಗ್ ನೆರವಿನಿಂದ ಎಲಿಮಿನೇಟರ್ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ರಾಜಸ್ಥಾನ್ 47 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಆರ್‌ಆರ್‌ಗೆ ಫೈನಲ್ ಪ್ರವೇಶಕ್ಕೆ ಇನ್ನೆರೆಡು ಹೆಜ್ಜೆ ಬಾಕಿಯಿದ್ದು, ಕ್ವಾಲಿಫೈಯರ್-2 ಪಂದ್ಯದಲ್ಲಿ ಗುಜರಾತ್ ವಿರುದ್ಧ ಸೆಣಸಲಿದೆ. ಸೋಲಿನೊಂದಿಗೆ ಈ ಸೀಸನ್‌ನಿಂದ ಹೈದರಾಬಾದ್ ಔಟಾಗಿದೆ.
ಬ್ಯಾಟಿಂಗ್‌ನಲ್ಲಿ ಆರ್‌ಆರ್ ಉತ್ತಮ ಆರಂಭವನ್ನೇ ಪಡೆಯಿತು. ಮನೆಮಾತಾಗಿರುವ 15ರ ಪೋರ ವೈಭವ್ ಸೂರ್ಯವಂಶಿ ಇಂದು ಕೂಡ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದರು. ಕೇವಲ 29 ಬಾಲ್‌ಗೆ 12 ಸಿಕ್ಸರ್ 5 ಫೋರ್‌ಗಳೊಂದಿಗೆ 97 ರನ್ ಸಿಡಿಸಿ ಮಿಂಚಿದರು. ಧ್ರುವ್ ಜುರೇಲ್ ಕೂಡ ಅರ್ಧಶತಕ ಗಳಿಸಿ ತಂಡಕ್ಕೆ ಉತ್ತಮ ರನ್ ಕೊಡುಗೆ ನೀಡಿದರು. ಯಶಸ್ವಿ ಜೈಸ್ವಾಲ್ 29, ಕ್ಯಾಪ್ಟನ್ ರಿಯಾನ್ ಪರಾಗ್ 26, ಡೊನೊವನ್ ಫೆರೀರಾ ಮತ್ತು ರವೀಂದ್ರ ಜಡೇಜಾ ತಲಾ 12 ರನ್ ಗಳಿಸಿ ತಂಡದ ಮೊತ್ತ 240 ದಾಟಲು ಸಹಕಾರಿಯಾದರು.
ರಾಜಸ್ಥಾನ್ ನೀಡಿದ 244 ರನ್ ಗುರಿ ಬೆನ್ನತ್ತಿದ ಹೈದರಾಬಾದ್ ಬ್ಯಾಟಿಂಗ್‌ನಲ್ಲಿ ಮುಗ್ಗರಿಸಿತು. ಮೊದಲ ಓವರ್‌ನ 2ನೇ ಎಸೆತಕ್ಕೆ ಅಭಿಷೇಕ್ ಶರ್ಮಾ ವಿಕೆಟ್ ಒಪ್ಪಿಸಿ ಶೂನ್ಯ ಸುತ್ತಿ ಹೊರನಡೆದರು. ಇದು ಹೈದರಾಬಾದ್ ಫ್ಯಾನ್ಸ್‌ಗೆ ದೊಡ್ಡ ಆಘಾತ ಉಂಟು ಮಾಡಿತು.
ನಿತೀಶ್ ಕುಮಾರ್ ರೆಡ್ಡಿ 38, ಸಲೀಲ್ ಅರೋರಾ 35, ಇಶಾನ್ ಕಿಶನ್ 33, ಶಿವಂಗ್ ಕುಮಾರ್ 27 ರನ್ ಗಳಿಸಿದರು. ಬ್ಯಾಟಿಂಗ್‌ನಲ್ಲಿ ಯಾರು ಕೂಡ ಸ್ಥಿರ ಪ್ರದರ್ಶನ ನೀಡಲಿಲ್ಲ. ಬ್ಯಾಟಿಂಗ್ ವೈಫಲ್ಯದಿಂದ ಹೈದರಾಬಾದ್ ಸೋಲೊಪ್ಪಿಕೊಂಡಿತು.
ಆರ್‌ಆರ್‌ನ ಜೋಫ್ರಾ ಆರ್ಚರ್ ಬೌಲಿಂಗ್ ದಾಳಿಗೆ ಎಸ್‌ಆರ್‌ಹೆಚ್ ಬ್ಯಾಟರ್‌ಗಳು ತತ್ತರಿಸಿದರು. ಆರ್ಚರ್ ಮೂರು ವಿಕೆಟ್ ಪಡೆದರು. ನಾಂಡ್ರೆ ಬರ್ಗರ್, ಸುಶಾಂತ್ ಮಿಶ್ರಾ, ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಪಡೆದು ತಂಡದ ಗೆಲುವಿಗೆ ಸಹಕಾರಿಯಾದರು. ಯಶ್ ರಾಜ್ ಪೂಂಜಾ ಒಂದು ವಿಕೆಟ್ ಪಡೆದರು.
