– ದೂರುದಾರರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು
ಕೊಪ್ಪಳ: ಗಂಗಾವತಿ ನಗರದ ಬೈಪಾಸ್ ರಸ್ತೆಯಲ್ಲಿ ಸಿಎಲ್ 07 ಸನ್ನದ್ದು ಹೊಂದಿರುವ ಅಜಯ್ ಟೂರಿಸ್ಟ್ ಹೋಮನ ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲೀಕರು ಪರವಾನಿಗೆ ಪಡೆದುಕೊಳ್ಳಲು ನಕಲಿ ದಾಖಲೆಗಳಿಂದ ಅಕ್ರಮ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಬಾರ್ & ರೆಸ್ಟೋರೆಂಟ್ ಬಂದ್ ಮಾಡಿ, ಮದ್ಯದ ಬಾಟಲ್ ವಶಕ್ಕೆ ಪಡೆದುಕೊಳ್ಳಲು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಮದ್ಯ ಪ್ರಿಯರಿಗೆ ಮದ್ಯ ಸರಬರಾಜು ಮಾಡುವ ಉದ್ದೇಶದಿಂದ ಅಬಕಾರಿ ಇಲಾಖೆಯವರು ಸಿಎಲ್ 02, ಸಿಎಲ್ 07, ಸಿಎಲ್ 09 ರಂತೆ ವಿವಿಧ ಬಗೆಯ ಪರವಾನಿಗೆಯನ್ನು ನೀಡಲಾಗುತ್ತಿದೆ. ಅದರಂತೆ ಸನ್ನದ್ದುದಾರರು ಸೂಕ್ತ ದಾಖಲೆಗಳನ್ನು ಸಲ್ಲಿಕೆ ಮಾಡಬೇಕಾಗುತ್ತದೆ. ಆದರೆ, ನಗರದಲ್ಲಿ ಬಾರ್ & ರೆಸ್ಟೋರೆಂಟ್ ನಡೆಸಲು ಸಿಎಲ್ 07 ಪರವಾನಿಗೆಯನ್ನು ಪಡೆದುಕೊಂಡಿರುವ ಅಜಯ್ ಟೂರಿಸ್ಟ್ ಹೋಮ್‌ನ ಮಾಲೀಕರು ವಸತಿ ಉದ್ದೇಶಕ್ಕೋಸ್ಕರ ಮೀಸಲಿಟ್ಟ ಜಾಗದಲ್ಲಿ ಬಾರ್ & ರೆಸ್ಟೋರೆಂಟ್ ನಡೆಸಲು ಸುಳ್ಳು ದಾಖಲೆಗಳ ಸಲ್ಲಿಕೆ ಮಾಡಿ, ಅಬಕಾರಿ ಇಲಾಖೆಯ ಅಧಿಕಾರಿಗಳನ್ನು ಯಾಮಾರಿಸಿ ಪರವಾನಿಗೆ ಪಡೆದುಕೊಳ್ಳಲಾಗಿದೆ. ದೂರುದಾರನ ದೂರಿನ ಮೇರೆಗೆ ದಾಖಲೆ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳಿಗೆ ಸತ್ಯಾಂಶ ಬಯಲಾಗಿದೆ.
ಏನಿದು ಪ್ರಕರಣ?
ಗಂಗಾವತಿ ನಗರದ ಬೈಪಾಸ್ ರಸ್ತೆಯ ಕನಕದಾಸ ಸರ್ಕಲ್ ಸಮೀಪದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ನಗರ ಪ್ರದೇಶದಲ್ಲಿ ಸರ್ವೆ ನಂಬರ 181/1,2,6,8 ರಲ್ಲಿನ 6 ಎಕರೆ 20 ಗುಂಟೆ ಜಮೀನಿನನ್ನು 1967 ರ ಆ.23 ರಂದು ಗಿರಿಜನ ಗೃಹ ನಿರ್ಮಾಣ ಸಹಕಾರಿ ಸಂಘದಿಂದ ನಿವೇಶನ ವಸತಿಗಾಗಿ ಮಂಜೂರ ಮಾಡಲಾಗಿದೆ. ಇದರಲ್ಲಿನ ನಿವೇಶನ 1 ರಿಂದ 18 ರವರೆಗಿನ ಆಸ್ತಿಗಳನ್ನು ನಗರ ಯೋಜನಾ ಪ್ರಾಧಿಕಾರದಿಂದ ವಸತಿ ಉದ್ದೇಶಕ್ಕಾಗಿ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಪ್ರಾಧಿಕಾರದಿಂದ 2001 ರ ನ.11 ರಂದು ಕಟ್ಟಡ ಪರವಾನಿಗೆ ತೆಗೆದುಕೊಳ್ಳಲಾಗಿದೆ. ವಸತಿ ಉದ್ದೇಶಕ್ಕೆ ಇರುವ ಈ ಜಾಗದಲ್ಲಿಯೇ ಅಜಯ್ ಟೂರಿಸ್ಟ್ ಹೋಮ್ ಹೆಸರಿನಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ನಡೆಸಲು 2004 ರಲ್ಲಿ ಸಿಎಲ್ 07 ಪರವಾನಿಗೆ ತೆಗೆದುಕೊಂಡು ಮದ್ಯ ಮಾರಾಟ ಆರಂಭಿಸಿದ್ದಾರೆ. ಇದರ ವಿರುದ್ಧ ದೂರುದಾರರು ಲೋಕಾಯುಕ್ತರಿಗೆ ದೂರು ನೀಡಿದ ವೇಳೆ ವಿಚಾರಣೆ ಆರಂಭಿಸಲಾಗಿದೆ. ಜಿಲ್ಲಾಧಿಕಾರಿಗಳು ವಿಚಾರಣೆ ಕೈಗೊಂಡಿರುವ ಸಮಯದಲ್ಲಿ ಸತ್ಯ ತಿಳಿದು ಬಂದಿದೆ. ಜಿಲ್ಲಾಧಿಕಾರಿಗಳು ಸಹ ಅಜಯ್ ಟೂರಿಸ್ಟ್ ಹೋಮ್ ಮಾಲೀಕರಿಗೆ ದಾಖಲೆಗಳ ಸಲ್ಲಿಕೆಗೆ ಸೂಚಿಸಿದ್ದಾರೆ. ವಸತಿ ಉದ್ದೇಶಕ್ಕೆ ಮೀಸಲಿಟ್ಟ ಜಾಗವಲ್ಲ ಎಂದು ದಾಖಲೆಗಳನ್ನು ಸಲ್ಲಿಕೆ ಮಾಡಲು ಸಾಧ್ಯವಾಗದೆ ಇರುವ ಕಾರಣಕ್ಕೆ ಜಿಲ್ಲಾಧಿಕಾರಿಗಳಾದ ಸುರೇಶ್ ಹಿಟ್ನಾಳ ಅವರು 2026 ರ ಮೇ 21 ರಂದು ಅಜಯ್ ಟೂರಿಸ್ಟ್ ಹೋಮ್‌ನ ಬಾರ್ ಆ್ಯಂಡ್ ರೆಸ್ಟೋರೆಂಟ್ ಸಿಎಲ್ 07 ಲೈಸೆನ್ಸ್ ತಕ್ಷಣದಿಂದ ಜಾರಿಗೆ ಬರುವಂತೆ ರದ್ದು ಮಾಡಿ, ಮದ್ಯದ ಬಾಟಲ್‌ಗಳನ್ನು ವಶಕ್ಕೆ ಪಡೆದುಕೊಳ್ಳಲು ಆದೇಶ ಮಾಡಿದ್ದಾರೆ.
22 ವರ್ಷಗಳಿಂದ ಸುಮ್ಮನಿದ್ದ ಅಧಿಕಾರಿಗಳು
ಅಜಯ್ ಟೂರಿಸ್ಟ್ ಹೋಮ್‌ನ ಮಾಲೀಕರಾದ ಮಲ್ಲಿಕಾರ್ಜುನ ಬಿಚ್ಚಾಲಿಯವರು 2004 ರಲ್ಲಿ ಸಿಎಲ್ 07 ಪರವಾನಿಗೆ ಪಡೆದುಕೊಂಡಿದ್ದಾರೆ. ಆಗಿನಿಂದ ಇಲ್ಲಿಯವರೆಗೆ ಅಂದರೆ ಸುಮಾರು 22 ವರ್ಷಗಳ ಕಾಲ ಮದ್ಯ ಮಾರಾಟ ಮಾಡಿದ್ದಾರೆ. ಅಬಕಾರಿ ನಿಲಯಗಳ ಪ್ರಕಾರ ಪ್ರತಿ ವರ್ಷ ಜೂನ್ ತಿಂಗಳಿನಲ್ಲಿ ಸನ್ನದ್ದುದಾರರು ಲೈಸೆನ್ಸ್ ನವೀಕರಣ ಮಾಡಿಕೊಳ್ಳಬೇಕು. ಎಲ್ಲಾ ಸನ್ನದ್ದುದಾರರಂತೆ ಮಲ್ಲಿಕಾರ್ಜುನ ಬಿಚ್ಚಾಲಿಯವರು ಜೂನ್ ತಿಂಗಳಿನಲ್ಲಿ ಲೈಸೆನ್ಸ್ ನವೀಕರಣ ಮಾಡಿಕೊಂಡು ವ್ಯಾಪಾರ ನಡೆಸಿದ್ದಾರೆ. ನವೀಕರಣದ ಸಮಯದಲ್ಲಿ ಲೈಸೆನ್ಸ್ ಹಾಗೂ ದಾಖಲೆಗಳ ಪರಿಶೀಲನೆ ಮಾಡಲಾಗುವುದು. ಸುಮಾರು 22 ವರ್ಷಗಳಿಂದ ನವೀಕರಣದ ಸಮಯದಲ್ಲಿ ವಸತಿ ಉದ್ದೇಶಕ್ಕೋಸ್ಕರ ಇರುವ ಜಾಗದಲ್ಲಿ ಬಾರ್ & ರೆಸ್ಟೋರೆಂಟ್ ನಡೆಸಲಾಗುತ್ತಿದೆ ಎನ್ನುವ ಮಾಹಿತಿ ಅಬಕಾರಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಂದಿಲ್ವಾ? ಒಂದು ವೇಳೆ ಗಮನಕ್ಕೆ ಇದ್ದರೂ ಲಂಚದ ರೂಪದಲ್ಲಿ ಮಾಲೀಕರಿಂದ ಹಣ ಪಡೆದುಕೊಂಡು ಸುಮ್ಮನಾಗಿದ್ದರಾ? ಹೀಗೆ ದೂರುದಾರರನಿಂದ ಅಬಕಾರಿ ಇಲಾಖೆಗೆ ಯಾಮಾರಿಸಿದ ಸತ್ಯ ಬಯಲಿಗೆ ಬಂದಿದೆ.
