Districts
ಬಂಗಾರಪ್ಪನವರ ಸ್ಮಾರಕ ನಿರ್ಮಾಣಕ್ಕೆ 1ಕೋಟಿ ರೂ. ಬಿಡುಗಡೆ: ಸಿಎಂ ಬಿಎಸ್ವೈ

– ದೂರದೃಷ್ಟಿ ಯೋಜನೆಗಳಿಂದ ಬಂಗಾರಪ್ಪ ಇಂದಿಗೂ ಚಿರಸ್ಥಾಯಿ
ಶಿವಮೊಗ್ಗ: ಸಮಾಜಮುಖಿ ಚಿಂತನೆಯ ನಾಯಕರಾಗಿದ್ದ ಬಂಗಾರಪ್ಪ ಅವರು ಜಾರಿಗೊಳಿಸಿದ ಜನಪರ ಹಾಗೂ ದೂರದೃಷ್ಟಿಯ ಯೋಜನೆಗಳಿಂದಾಗಿ ಇಂದಿಗೂ ಅವರು ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪ ಅವರ 87ನೇ ಜನ್ಮಸ್ಮರಣೆ ಹಾಗೂ ಸೊರಬ ಪಟ್ಟಣದಲ್ಲಿ 21.15ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಉದ್ಯಾನವನವನ್ನು ಆನ್ಲೈನ್ ಸಮಾರಂಭದ ಮೂಲಕ ಉದ್ಘಾಟಿಸಿ ಮಾತನಾಡಿದ ಸಿಎಂ, ಶಿಕ್ಷಣ, ಆರೋಗ್ಯ, ಕೃಷಿ ಕ್ಷೇತ್ರದಲ್ಲಿ ಬಂಗಾರಪ್ಪ ಅವರು ತಂದ ದೂರದೃಷ್ಟಿ ಯೋಜನೆಯಿಂದಾಗಿ ಅವರು ಜನಮಾನಸದಲ್ಲಿ ಇಂದಿಗೂ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಕೃಷಿ ಕಾರ್ಮಿಕರು, ರೈತರು, ದೀನ ದಲಿತರು ಮತ್ತು ಗ್ರಾಮೀಣ ಜನತೆಯ ಅಭ್ಯುದಯಕ್ಕಾಗಿ ನಿರಂತರವಾಗಿ ಶ್ರಮಿಸಿದ ಅವರು ಜನಪರ ಚಿಂತನೆಯ ನಾಯಕ ಎಂದು ಬಣ್ಣಿಸಿದರು.
ಸೊರಬ ಪಟ್ಟಣದಲ್ಲಿ ದಿ.ಬಂಗಾರಪ್ಪ ಅವರ ಸ್ಮಾರಕ ನಿರ್ಮಿಸಲು ಈಗಾಗಲೇ 1 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಸೂಚನೆ ನೀಡಲಾಗಿದೆ. ಸೊರಬ ಪಟ್ಟಣದಲ್ಲಿ ಉದ್ಘಾಟಿಸಲಾಗಿರುವ ಉದ್ಯಾನವನ್ನು ಪಟ್ಟಣ ಪಂಚಾಯತ್ ಆಡಳಿತ ಸರಿಯಾಗಿ ನಿರ್ವಹಣೆ ಮಾಡಬೇಕು ಎಂದು ಹೇಳಿದರು.
ಕೋವಿಡ್ ಸಂಕಷ್ಟದ ನಡುವೆಯೂ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ರಾಜ್ಯದ ಎಲ್ಲಾ ಭಾಗಗಳನ್ನು ಸಮಾನವಾಗಿ ಅಭಿವೃದ್ಧಿಪಡಿಸಲು ನಾವು ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಸಿಎಂ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಎಸ್ಪಿ ಕೆ.ಎಂ.ಶಾಂತರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಮತ್ತಿತರರು ಉಪಸ್ಥಿತರಿದ್ದರು. ಸೊರಬ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಮಾರಂಭದಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು. ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.
