ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (Cockroach Janata Party) ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ಬದಲಾವಣೆ ಬಯಸುತ್ತಿರುವ ಯುವ ಮನಸ್ಸುಗಳು ರಾಜಕೀಯ ವ್ಯವಸ್ಥೆಯನ್ನು ಪ್ರಶ್ನೆ ಮಾಡುತ್ತಿವೆ. ಹೆಚ್ಚುತ್ತಿರುವ ಬೆಂಬಲದ ನಡುವೆ ಸಿಜೆಪಿ (CJP) ಸೋಶಿಯಲ್ ಮೀಡಿಯಾ ಖಾತೆಗಳನ್ನು ನಿರ್ಬಂಧಿಸಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಎಕ್ಸ್ ಖಾತೆ ನಿರ್ಬಂಧದ ಬೆನ್ನಲ್ಲೇ ಇನ್ಸ್ಟಾಗ್ರಾಂ ಅಕೌಂಟ್ ಕೂಡಾ ಹ್ಯಾಕ್ ಆಗಿದೆ ಎಂದು ಸಿಜೆಪಿ ಸ್ಥಾಪಕ ಅಭಿಜಿತ್ ದಿಪ್ಕೆ ಆರೋಪಿಸಿದ್ದಾರೆ. ಈ ನಡುವೆ ದಿಪ್ಕೆ ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.
ಸಿಜೆಪಿ ಸ್ಥಾಪಕ ಅಭಿಜಿತ್ ದೀಪ್ಕೆ (Abhijeet Dipke) ಸಿಜೆಪಿ ಇನ್‌ಸ್ಟಾ ಖಾತೆ ಹ್ಯಾಕ್ ಆಗಿದೆ ಎಂದು ಆರೋಪ ಮಾಡಿದ್ದಾರೆ. ಕೆಲವು ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿರುವ ಅವರು, ಇನ್‌ಸ್ಟಾಗ್ರಾಮ್ ಖಾತೆಯನ್ನು ಸುರಕ್ಷತೆಗಾಗಿ ಲಾಕ್ ಮಾಡಲಾಗಿದೆ, ಗುರುತು ಪರಿಶೀಲನೆ ಮಾಡಿ, ಪಾಸ್‌ವರ್ಡ್ ಬದಲಿಸಿದರೆ ಮಾತ್ರ ಮರುಸ್ಥಾಪಿಸಲಾಗುತ್ತದೆ ಎಂಬ ಸಂದೇಶ ಕಾಣುತ್ತದೆ. ಆದರೆ ಮರುಪಡೆಯುವಿಕೆ ಪ್ರಕ್ರಿಯೆ ಪದೇ ಪದೇ ವಿಫಲವಾಗುತ್ತಿದ್ದು, ಅವರು ಸಂಪೂರ್ಣವಾಗಿ ಖಾತೆಯಿಂದ ಹೊರಗುಳಿದಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಕಾಕ್ರೋಚ್ ಜನತಾ ಪಾರ್ಟಿ ಎಕ್ಸ್ ಖಾತೆಗೆ ಭಾರತದಲ್ಲಿ ನಿರ್ಬಂಧ – ಯಾರಿದು ಅಭಿಜಿತ್ ದಿಪ್ಕೆ?
ಮೆಟಾ ನೀಡಿರುವ ಖಾತೆ ಮರುಪಡೆಯುವ ವ್ಯವಸ್ಥೆಯ ಮೂಲಕ ಹಲವಾರು ಬಾರಿ ಪ್ರಯತ್ನಿಸಿದರೂ, ತಮ್ಮ ಖಾತೆಯನ್ನು ಮರಳಿ ಪಡೆಯಲು ಸಾಧ್ಯವಾಗಲಿಲ್ಲ ಎಂದು ಅಬಿಜಿತ್ ದಿಪ್ಕೆ ಹೇಳಿಕೊಂಡಿದ್ದಾರೆ. ಸದ್ಯ ಇದೀಗ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಎಕ್ಸ್‌ನಲ್ಲಿ ಬ್ಯಾಕಪ್ ಖಾತೆಗೆ ನಿರ್ಬಂಧ
ಸಿಜೆಪಿ ಪಕ್ಷದ ಬ್ಯಾಕಪ್ ಇನ್‌ಸ್ಟಾಗ್ರಾಮ್ ಖಾತೆಯನ್ನೂ ಕೆಲಕಾಲ ಸಂಪೂರ್ಣವಾಗಿ ತೆಗೆದುಹಾಕಲಾಗಿತ್ತು. ನಂತರ ಗಂಟೆಗಳ ಬಳಿಕ ಅದನ್ನು ಪುನಃಸ್ಥಾಪಿಸಲಾಯಿತು ಎಂದು ದೀಪ್ಕೆ ಆರೋಪಿಸಿದ್ದಾರೆ. ಅವರು ಮಾಡಿದ ಪೋಸ್ಟ್‌ಗಳಲ್ಲಿ, ಸಾಮಾಜಿಕ ಮಾಧ್ಯಮ ಕಂಪನಿಗಳು ಈ ಚಳವಳಿಗೆ ಸಂಬಂಧಿಸಿದ ಖಾತೆಗಳನ್ನು ಗುರಿಯಾಗಿಸಿಕೊಂಡಿವೆ ಎಂದು ಕಿಡಿಕಾರಿದ್ದಾರೆ. ಕಾಕ್ರೋಚ್ ಜನತಾ ಪಾರ್ಟಿ ಮೇಲೆ ಕ್ರ್ಯಾಕ್‌ಡೌನ್ ನಡೆಯುತ್ತಿದೆ. ನಮ್ಮ ಇನ್‌ಸ್ಟಾಗ್ರಾಮ್ ಪುಟ, ನನ್ನ ವೈಯಕ್ತಿಕ ಇನ್‌ಸ್ಟಾಗ್ರಾಮ್, ಟ್ವಿಟರ್ ಖಾತೆ, ಬ್ಯಾಕಪ್ ಖಾತೆ ಎಲ್ಲವನ್ನೂ ಹ್ಯಾಕ್ ಅಥವಾ ತಡೆಹಿಡಿಯಲಾಗಿದೆ ಎಂದು ಹೇಳಿದ್ದಾರೆ.
ಅಬಿಜಿತ್ ದಿಪ್ಕೆ ಫಾರ್ಲೋವರ್ಸ್‌ಗೆ ಮನವಿ
ತಮ್ಮ ಪಕ್ಷಕ್ಕೆ ಡಿಜಿಟಲ್ ವೇದಿಕೆಗಳಲ್ಲಿ ಪ್ರವೇಶ ನಿರ್ಬಂಧಿಸಲಾಗುತ್ತಿದೆ ಎಂದು ಆರೋಪಿಸಿರುವ ಅಬಿಜಿತ್ ದಿಪ್ಕೆ ದಯವಿಟ್ಟು ಗಮನಿಸಿ, ಸದ್ಯ ನಮಗೆ ಎಲ್ಲ ವೇದಿಕೆಗಳಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ. ಹೀಗಾಗಿ, ಇನ್ಮುಂದೆ ಪ್ರಕಟವಾಗುವ ಯಾವುದೇ ಪೋಸ್ಟ್ ಕಾಕ್ರೋಚ್ ಜನತಾ ಪಕ್ಷದ ಅಧಿಕೃತ ಹೇಳಿಕೆ ಎಂದು ಪರಿಗಣಿಸಬೇಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಅಬ್ಬರ – ಫಾಲೋವರ್ಸ್ ಸಂಖ್ಯೆಯಲ್ಲಿ BJPಯನ್ನೇ ಹಿಂದಿಕ್ಕಿದ CJP
ಬಹಿರಂಗ ಸಭೆಗೆ ಅನುಮತಿ ನಿರಾಕರಿಸಿದ ಬೆಂಗಳೂರು ಪೊಲೀಸರು
ಡಿಜಿಟಲ್ ವ್ಯವಸ್ಥೆಗೆ ಸೀಮಿತವಾಗಿದ್ದ ಸಿಜೆಪಿ ವಾಸ್ತವದಲ್ಲೂ ತಲೆ ಎತ್ತಲು ಶುರು ಮಾಡಿತ್ತು. ಇದರ ಭಾಗವಾಗಿ ನಾಳೆ ಬೆಂಗಳೂರಿನ ಟೌನ್‌ಹಾಲ್ ಬಳಿ ಬಹಿರಂಗ ಸಭೆ ನಡೆಸಲು ಸಿದ್ಧತೆ ನಡೆದಿತ್ತು. ಆದರೆ, ಈ ಸಭೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಹೈಕೋರ್ಟ್ ಆದೇಶದಂತೆ ಫ್ರೀಡಂ ಪಾರ್ಕ್ ಬಿಟ್ಟು ಬೇರೆ ಕಡೆ ಸಭೆ ಮಾಡುವಂತಿಲ್ಲ ಎಂಬ ಆದೇಶವಿದೆ. ಸದರಿ ಆದೇಶ ಉಲ್ಲಂಘನೆ ಮಾಡಿದ್ರೆ ಕೋರ್ಟ್ ಆದೇಶ ಉಲ್ಲಂಘನೆ ಮಾಡಿದಂತೆ ಅಂತಾ ನೋಟಿಸ್ ನೀಡಲಾಗಿದೆ. ಹೀಗಾಗಿ, ಟೌನ್‌ಹಾಲ್ ಒಳಾಂಗಣದಲ್ಲಿ ಬುಕ್ಕಿಂಗ್ ಮಾಡಿಕೊಂಡು ಬಂದ ಬಳಿಕ ಈ ಬಗ್ಗೆ ಪರಿಶೀಲಿಸಿಲಾಗುವುದು ಎಂದು ಬೈರಪ್ಪ ಹರೀಶ್‌ಗೆ ಇಂದು ಖಾಕಿ ನೋಟಿಸ್ ಕೊಟ್ಟಿದ್ದಾರೆ.
