ಬೆಂಗಳೂರು: ಆರ್.ಎಸ್. ಎಸ್. ಬಗ್ಗೆ ಪ್ರಶ್ನೆ ಮಾಡೋ ಪ್ರಶ್ನೆ ಕೇಳೋಕೆ ಕಾಂಗ್ರೆಸ್ ನಲ್ಲಿ ಗಾಂಪರ ದೊರೆಗಳು ಆಗಿದ್ರು. ಅದರ ಪಟ್ಟಿಗೆ ಈಗ ಪ್ರಿಯಾಂಕ್ ಖರ್ಗೆ (Priyank Kharge) ಸೇರಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪ್ರಿಯಾಂಕ್ ಖರ್ಗೆ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಪ್ರಿಯಾಂಕ್ ಖರ್ಗೆ ಒಳ್ಳೆಯ ಪ್ರಶ್ನೆ ಕೇಳಿದ್ದಾರೆ. ಆದರೆ ಈ ಪ್ರಶ್ನೆ ಕೇಳಿದವರಲ್ಲಿ ಅವರು ಮೊದಲಿಗರೂ ಅಲ್ಲ, ಹೊಸಬರೂ ಅಲ್ಲ. ಕಾಂಗ್ರೆಸ್‌ನ ಅನೇಕ ನಾಯಕರಿಗೆ ಈಗಾಗಲೇ ಉತ್ತರ ಸಿಕ್ಕಿದೆ. ಉತ್ತರ ಸಿಕ್ಕಿದ್ದರೂ ಮತ್ತೆ ಅದೇ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಈಗ ಮೋಹನ್ ಭಾಗವತ್ ಕೂಡ ಉತ್ತರ ನೀಡಿದ್ದಾರೆ. ಹೀಗಾಗಿ ಪ್ರಿಯಾಂಕ್ ಖರ್ಗೆಗೂ ಉತ್ತರ ಸಿಕ್ಕಿದೆ. ಹಿಂದೆ ಇದೇ ಪ್ರಶ್ನೆ ಕೇಳಿದವರು ಗಾಂಪರು ದೊರೆಗಳಾಗಿದ್ದರು. ಈಗ ಆ ಪಟ್ಟಿಗೆ ಪ್ರಿಯಾಂಕ್ ಖರ್ಗೆ ಸೇರಿದ್ದಾರೆ. ಅವರು ಕರ್ನಾಟಕದ ಗಾಂಪರು ದೊರೆ ಎಂದು ಲೇವಡಿ ಮಾಡಿದರು.
ಮಾಧ್ಯಮಗಳಲ್ಲಿ ತಮ್ಮ ಹೆಸರು ಬರಬೇಕು, ತಾವು ಮೇಧಾವಿ ಎಂದು ತೋರಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನೀವು ಎಸ್‌ಸಿ ಸಮುದಾಯದವರು. ಡಾ. ಬಿ.ಆರ್. ಅಂಬೇಡ್ಕರ್ ಜನರ ಪರ ಹೋರಾಟ ಮಾಡಿ ಮೀಸಲಾತಿ ಕೊಡಿಸಿದ್ದಾರೆ. ಆರ್‌ಎಸ್‌ಎಸ್‌ನಿಂದ ಯಾವ ದಲಿತರಿಗೆ ಅನ್ಯಾಯವಾಗಿದೆ? ಆರ್‌ಎಸ್‌ಎಸ್ ಬಗ್ಗೆ ಪ್ರಶ್ನೆ ಕೇಳುವುದರಿಂದ ದಲಿತರಿಗೆ ಆಗುವ ಲಾಭವೇನು ಎಂದು ಪ್ರಶ್ನಿಸಿದರು.ಇದನ್ನೂ ಓದಿ: ನಮ್ಮ ದೇಶದಲ್ಲಿ ಶ್ರೀರಾಮನೇ ಲೆಕ್ಕ ಕೊಡಬೇಕು, ರಾಮನ ಹೆಸ್ರಲ್ಲಿ ರಾಜಕೀಯ ಮಾಡಿದವರು ಲೆಕ್ಕ ಕೊಡಬಾರದ?: ಪ್ರಿಯಾಂಕ್ ಖರ್ಗೆ
ಕಾಂಗ್ರೆಸ್ ಮತ್ತು ನಿಮ್ಮಿಂದಲೇ ದಲಿತರಿಗೆ ಅನ್ಯಾಯವಾಗುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ ದಲಿತರ ಹಣ ಬಳಕೆ ಮಾಡಿದ್ದೀರಿ. ಯಾಕೆ ಎಂದು ನೀವು ಕೇಳಿಲ್ಲ. ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ನೀವು ಸಚಿವರಾದ ಬಳಿಕವೂ ದಲಿತ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ಪ್ರಕರಣಗಳು ನಡೆದಿವೆ. ಅದಕ್ಕೆ ನಿಮ್ಮ ಉತ್ತರ ಏನು? ಎಸ್‌ಸಿ ಕೋಟಾದಲ್ಲಿ ಸಚಿವರಾಗಿರುವುದು ದಲಿತರ ಅಭಿವೃದ್ಧಿಗಾಗಿ ಅಲ್ಲವೇ ಅದನ್ನು ಬಿಟ್ಟು ಬೇರೆ ವಿಷಯಗಳ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ನಿಮ್ಮ ತಂದೆ ಮತ್ತು ಕುಟುಂಬ ಅನೇಕ ದಲಿತ ನಾಯಕರನ್ನು ತುಳಿದು ನಿಮಗೆ ಸಚಿವ ಸ್ಥಾನ ಸಿಗುವಂತೆ ಮಾಡಿದ್ದಾರೆ. ದಲಿತ ಕೋಟಾದಲ್ಲಿ ಸಚಿವರಾಗಿರುವ ನೀವು ದಲಿತರ ಪರ ಮಾತನಾಡಬೇಕು. ಇಲ್ಲವಾದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ನೊಳಗೆ ಹೋರಾಟ ನಡೆಸಿ ಎಂದು ಸವಾಲು ಹಾಕಿದರು.
ನಾನು ಆರ್‌ಎಸ್‌ಎಸ್ ವಕ್ತಾರನಾಗಿ ಮಾತನಾಡುತ್ತಿಲ್ಲ. ವಿಪಕ್ಷ ನಾಯಕನಾಗಿ ಮಾತನಾಡುತ್ತಿದ್ದೇನೆ. ನಿಮ್ಮ ಜಿಲ್ಲೆಯಲ್ಲಿ ಅನ್ಯಾಯ ನಡೆಯುತ್ತಿದೆ. ದೊಡ್ಡ ಸಮಸ್ಯೆಗಳು ನಿಮ್ಮ ಜಿಲ್ಲೆಯಲ್ಲೇ ಇವೆ. ಬಸವಲಿಂಗಪ್ಪ, ಶ್ರೀನಿವಾಸ್ ಪ್ರಸಾದ್ ಅವರ ಪರಿಸ್ಥಿತಿ ಏನಾಯಿತು? ಅನೇಕ ನಾಯಕರನ್ನು ತುಳಿದು ಮೂರು ಬಾರಿ ಸಚಿವರಾಗಿದ್ದೀರಿ. ಆದರೂ ದಲಿತರ ಪರ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಮಹಾತ್ಮ ಗಾಂಧೀಜಿ ಸ್ವಾತಂತ್ರ್ಯ ಬಂದ ಬಳಿಕ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡಬೇಕು ಎಂದು ಹೇಳಿದ್ದರು. ಆದರೆ ಅದು ಆಗಲಿಲ್ಲ. ಈಗ ನಿಮ್ಮ ತಂದೆಗೆ ಪತ್ರ ಬರೆದು ಗಾಂಧೀಜಿ ಹೇಳಿದಂತೆ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡಿ ಎಂದು ಕೇಳಿ. ಯಾವಾಗ ಪತ್ರ ಬರೆಯುತ್ತೀರಿ? ಎಂದು ಪ್ರಶ್ನಿಸಿದರು.
ತಮ್ಮನ ರೀತಿಯಲ್ಲಿ ಒಂದು ಸಲಹೆ ಕೊಡುತ್ತೇನೆ. ದಯವಿಟ್ಟು ನಿಮ್ಮ ತಂದೆಯಿಂದ ಕಲಿಯಿರಿ. ನಿಮ್ಮ ತಂದೆ ಗೃಹ ಸಚಿವರಾಗಿದ್ದಾಗ ಕಂಬಾಳಪಳ್ಳಿಯಲ್ಲಿ ದಲಿತರ ಮೇಲೆ ದಾಳಿ ನಡೆಯಿತು. ಆ ಕುಟುಂಬಕ್ಕೆ ಇಂದಿಗೂ ನ್ಯಾಯ ಸಿಕ್ಕಿಲ್ಲ. ರಾಜ್‌ಕುಮಾರ್ ಅಪಹರಣ ಪ್ರಕರಣ ನಡೆದಾಗಲೂ ಅದನ್ನು ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಮೇಲೆ ಹಾಕಲು ಪ್ರಯತ್ನಿಸಿದರು. ಆದರೆ ಕೊನೆಗೆ ಅಂದಿನ ಮುಖ್ಯಮಂತ್ರಿ ಕೃಷ್ಣ ಅವರೇ ಪರಿಸ್ಥಿತಿಯನ್ನು ನಿಭಾಯಿಸಿದರು” ಎಂದು ಹೇಳಿದರು.
ನೀವು ಯಾಕೆ ಆನೆಯ ಸೊಂಡಿಲಿನಿಂದ ಮಣ್ಣು ತೆಗೆದು ನಿಮ್ಮ ಮೇಲೆಯೇ ಹಾಕಿಕೊಳ್ಳುವಂತೆ ವರ್ತಿಸುತ್ತಿದ್ದೀರಿ? ಇದೇ ರೀತಿ ಮುಂದುವರಿದರೆ ರಾಜಕೀಯದಿಂದ ದೂರವಾಗುವ ದಿನ ದೂರವಿಲ್ಲ. ದಲಿತರ ಬಗ್ಗೆ ಹೆಚ್ಚು ಗಮನ ಕೊಡಿ ಎಂದು ಸಲಹೆ ನೀಡಿದರು.
ಆರ್‌ಎಸ್‌ಎಸ್ ಕುರಿತು ಮಾತನಾಡಿದ ಅವರು, ಆರ್‌ಎಸ್‌ಎಸ್ ಅಡಿಯಲ್ಲಿ ಸುಮಾರು 2 ಸಾವಿರ ಸಂಘಟನೆಗಳಿವೆ. ಅವೆಲ್ಲವೂ ನೋಂದಣಿಯಾಗಿವೆ. ರಾಷ್ಟ್ರೋತ್ಥಾನ ಪರಿಷತ್ ನೋಂದಣಿಯಾಗಿದೆ. ಜನಸೇವಾ ವಿದ್ಯಾಕೇಂದ್ರ ಸೇರಿದಂತೆ ಅನೇಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಜಾತಿ ನಿರ್ಮೂಲನೆ, ಸಾಮರಸ್ಯ ಮತ್ತು ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟುವ ಕೆಲಸಗಳನ್ನು ಮಾಡುತ್ತಿವೆ ಎಂದರು. ಇದನ್ನೂ ಓದಿ: 75,000 ರೂ. ವರೆಗಿನ ಬೆಳೆ ಸಾಲ ಸಂಪೂರ್ಣ ಮನ್ನಾ – ರೈತರಿಗೆ ಬಿಗ್ ಗಿಫ್ಟ್ ಕೊಟ್ಟ ಸಿಎಂ ವಿಜಯ್
ಆರ್‌ಎಸ್‌ಎಸ್ ಬ್ರಿಟಿಷರ ಕಾಲದಿಂದಲೂ ಇದೆ. ನಾವು ಯಾರಿಂದಲೂ ಹಣ ಪಡೆಯುವುದಿಲ್ಲ. ಹಾಗಿದ್ದಾಗ ಯಾಕೆ ನೋಂದಣಿ ಮಾಡಿಸಬೇಕು? ಪ್ರಿಯಾಂಕ್ ಖರ್ಗೆ ಅವರು ಮೊದಲು ಒಂದು ಪ್ರಯತ್ನ ಮಾಡಿ ನೋಡಲಿ. ಸತೀಶ್ ಜಾರಕಿಹೊಳಿ ಅವರೇ ಆರ್‌ಎಸ್‌ಎಸ್ ಅನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಮುಸ್ಲಿಂ, ಕ್ರೈಸ್ತ, ಹಿಂದೂ ಸಂಘಟನೆಗಳನ್ನೂ ನೋಂದಣಿ ಮಾಡಿಸಿ. ಈ ದೇಶ ಹುಲಿಯಂತೆ. ಹುಲಿಯ ಬಾಲವನ್ನು ಅಲುಗಾಡಿಸಲು ಸಾಧ್ಯವಿಲ್ಲ. ಪ್ರಿಯಾಂಕ್ ಖರ್ಗೆ ಬಾಲದಂತಿದ್ದಾರೆ. ಇಂತಹ ವಿಚಾರಗಳಲ್ಲಿ ನಿಮ್ಮ ಹೆಸರು ಕೆಡಿಸಿಕೊಳ್ಳಬೇಡಿ ಎಂದು ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.
