ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಮಹೀಂದ್ರಾ ಕ್ಸೈಲೋ ಕಾರು ಪಲ್ಟಿಯಾದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಐವರಿಗೆ ಗಂಭೀರವಾಗಿ ಗಾಯವಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಹಂದರಹಳ್ಳಿ ಬಳಿ ನಡೆದಿದೆ.
ರಮೇಶ್ (30), ಮಂಜುನಾಥ್ (26), ಅಶೋಕ್ ರೆಡ್ಡಿ (26) ಮತ್ತು ಗೌರೀಶ್ (23) ಮೃತ ದುರ್ದೈವಿಗಳು. ಮೃತರೆಲ್ಲರೂ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ನಕ್ಕಲಪಲ್ಲಿ ಗ್ರಾಮದವರು ಎಂದು ತಿಳಿದು ಬಂದಿದೆ. ಒಂಬತ್ತು ಮಂದಿ ಬೆಂಗಳೂರಿನ ಆವಲಹಳ್ಳಿ ಬಳಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಒಂದೇ ರೂಮಿನಲ್ಲಿ ವಾಸಿಸುತ್ತಿದ್ದರು.
Advertisement
Advertisement
ಶುಕ್ರವಾರ ಮಧ್ಯರಾತ್ರಿ ಸ್ನೇಹಿತನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ನಂತರ ಶನಿವಾರ, ಭಾನುವಾರ ರಜೆಯಿದ್ದ ಕಾರಣಕ್ಕೆ ಕಾರಿನಲ್ಲಿ ನಂದಿಬೆಟ್ಟಕ್ಕೆ ತೆರಳುತ್ತಿದ್ದರು. ಕಾರಿನಲ್ಲಿ ಹೊಸಕೋಟೆ ಬಳಿಯಿರುವ ಆವಲಹಳ್ಳಿಯಿಂದ ದೇವನಹಳ್ಳಿ ಮಾರ್ಗವಾಗಿ ಹೋಗುತ್ತಿದ್ದರು. ಆದರೆ ಇಂದು ಮುಂಜಾನೆ ಸುಮಾರು 3.30ಕ್ಕೆ ಹಂದರಹಳ್ಳಿ ಬಳಿ ಕಾರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Advertisement
ಅಪಘಾತದಲ್ಲಿ ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಹೊಸಕೋಟೆ ಮತ್ತು ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ಘಟನೆ ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.