ಬೆಂಗಳೂರು: ತಮ್ಮ ಮಾಡಿದ ತಪ್ಪಿಗೆ ಅಣ್ಣನಿಗೆ ಶಿಕ್ಷೆ ಎನ್ನುವಂತೆ, ಪ್ರೇಮಿಗಳಿಬ್ಬರು ಮನೆ ಬಿಟ್ಟು ಓಡಿಹೋದ ಸಿಟ್ಟಿಗೆ ಹುಡುಗನ ಅಣ್ಣನನ್ನು ಕಿಡ್ನಾಪ್ ಮಾಡಿ, ಮೈಕೈ ಕಟ್ಟಿ ಹಾಕಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ.
ಬ್ಯಾಡರಹಳ್ಳಿ ಮೂಲದ ಶಿವಕುಮಾರ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಇವರ ಪ್ರೀತಿಗೆ ಮನೆಯವರ ವಿರೋಧವಿದ್ದ ಕಾರಣ, ಈ ಜೋಡಿ ಇತ್ತೀಚೆಗೆ ಮನೆ ಬಿಟ್ಟು ಪರಾರಿಯಾಗಿತ್ತು. ಇದರಿಂದ ಆಕ್ರೋಶಗೊಂಡ ಯುವತಿಯ ತಂದೆ ಬಸವರಾಜ್ ಮತ್ತು ಆತನ ಸಂಬಂಧಿಕರು, ಶಿವಕುಮಾರ್‌ನ ಅಣ್ಣ ಕೊಟ್ರೇಶ್ ಮೇಲೆ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿದ್ದರು.
ಬ್ಯಾಡರಹಳ್ಳಿಯ ದೇವಾಲಯವೊಂದರಲ್ಲಿ ಅರ್ಚಕರಾಗಿರುವ ಕೊಟ್ರೇಶ್ ಅವರನ್ನು ಗುರಿಯಾಗಿಸಿಕೊಂಡ ಆರೋಪಿಗಳು, “ಪೊಲೀಸ್ ಸ್ಟೇಷನ್‌ಗೆ ಹೋಗೋಣ ಬಾ” ಎಂದು ನಂಬಿಸಿ ಕಾರಿನಲ್ಲಿ ಕರೆದೊಯ್ದಿದ್ದಾರೆ. ಆದರೆ ಸ್ಟೇಷನ್‌ಗೆ ಹೋಗುವ ಬದಲಾಗಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಅಟ್ಟಹಾಸ ಮೆರೆದಿದ್ದಾರೆ
ಕೊಟ್ರೇಶ್ ಅವರ ಕೈಕಾಲುಗಳನ್ನು ಕಟ್ಟಿ ಹಾಕಿ ಕೂಡಿ ಹಾಕಿದ ಹುಡುಗಿಯ ಕಡೆಯವರು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡುವ ದೃಶ್ಯವನ್ನು ಚಿತ್ರೀಕರಿಸಿದ ಆರೋಪಿಗಳು, ಕೊಟ್ರೇಶ್ ಕೈಯಲ್ಲಿ “ಶಿವು, ನೀನು ಎಲ್ಲಿದ್ದರೂ ಹುಡುಗಿಯನ್ನು ತಂದು ಒಪ್ಪಿಸು” ಎಂದು ಹೇಳಿಸಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಪ್ರಾಣಭಯದಲ್ಲಿದ್ದ ಕೊಟ್ರೇಶ್ ತಮ್ಮನ ಬಳಿ ಅಂಗಲಾಚುವ ವಿಡಿಯೋವನ್ನು ಆರೋಪಿಗಳು ಅವರ ಸಂಬಂಧಿಕರಿಗೆ ಕಳುಹಿಸಿ ಬೆದರಿಕೆ ಹಾಕಿದ್ದಾರೆ. ಇದನ್ನೂ ಓದಿ: ಯುವತಿ ವಿಚಾರವಾಗಿ ಕಿರುಕುಳ ಆರೋಪ – ಆಡಿಯೋ ರೆಕಾರ್ಡ್ ಮಾಡಿಟ್ಟು ಯುವಕ ಆತ್ಮಹತ್ಯೆ
ಪೊಲೀಸ್ ಕಾರ್ಯಾಚರಣೆ:
ವಿಡಿಯೋ ಕಂಡು ಆತಂಕಕ್ಕೊಳಗಾದ ಕೊಟ್ರೇಶ್ ಕುಟುಂಬಸ್ಥರು ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ಗಂಭೀರತೆಯನ್ನು ಅರಿತ ಬ್ಯಾಡರಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ, ಕೊಟ್ರೇಶ್ ಅವರನ್ನು ಆರೋಪಿಗಳ ವಶದಿಂದ ಯಶಸ್ವಿಯಾಗಿ ರಕ್ಷಿಸಿದ್ದಾರೆ.
ಸದ್ಯಕ್ಕೆ ಸಂತ್ರಸ್ತ ಕೊಟ್ರೇಶ್ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಯುವತಿಯ ತಂದೆ ಬಸವರಾಜ್ ಹಾಗೂ ಇತರ ಆರೋಪಿಗಳನ್ನು ವಶಕ್ಕೆ ಪಡೆದು ನೋಟಿಸ್ ನೀಡಿ ಕಳುಹಿಸಿದ್ದಾರೆ. ಬ್ಯಾಡರಹಳ್ಳಿ ಪೊಲೀಸರಿಂದ ತನಿಖೆ ಮುಂದುವರಿದೆ.

