ಬೆಂಗಳೂರು: ಬರಗಾಲದ ಹಿನ್ನೆಲೆಯಲ್ಲಿ ಜನರು ಉದ್ಯೋಗಕ್ಕಾಗಿ ಗುಳೆ ಹೋಗುತ್ತಿದ್ದಾರೆ. ಎಲ್ಲ ಜಿಲ್ಲಾ ಪಂಚಾಯತ್ ಸಿಇಒಗಳು ವಿಬಿ -ಜಿ ರಾಮ್ ಜಿ ಯೋಜನೆಯಡಿ (VBG Ramji Scheme) ಕೂಡಲೇ ಜನರಿಗೆ ಉದ್ಯೋಗ ನೀಡಿ, ಗುಳೆ ಹೋಗುವುದನ್ನು ತಪ್ಪಿಸಲು ಕ್ರಮ ವಹಿಸಬೇಕು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ (G Parameshwar) ಸೂಚನೆ ನೀಡಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ‘ಬರ ಪರಿಸ್ಥಿತಿ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಕೃಷಿ, ಚಟುವಟಿಕೆ ಹಾಗೂ ಉದ್ಯೋಗ ವಿಷಯಗಳ ಕುರಿತು ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಪಡೆದು, ಸೂಕ್ತ ನಿರ್ದೇಶನಗಳನ್ನು ನೀಡಿದರು. ಇದನ್ನೂ ಓದಿ: ಫಿಫಾ ವಿಶ್ವಕಪ್ ಫೈನಲ್: ಪುಟ್ಬಾಲ್ ಅಭಿಮಾನಿಗಳು ತಾಳ್ಮೆಯಿಂದ ವರ್ತಿಸಲು ಸಿಎಂ ಮನವಿ
ವಿಜಯಪುರ ತಾಲೂಕಿನಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯ ಅಡಿ 20 ಗ್ರಾಮ ಪಂಚಾಯಿತಿಗಳಲ್ಲಿ ಮಾತ್ರ ಜನರಿಗೆ ಕೆಲಸ ನೀಡಲಾಗುತ್ತಿದೆ. ಬರಗಾಲದ ಹಿನ್ನೆಲೆಯಲ್ಲಿ ಜನ ಗುಳೆ ಹೋಗುತ್ತಿದ್ದಾರೆ ಎಂದು ವರದಿಯಾಗುತ್ತಿದೆ. ಕೂಡಲೇ ಕೆಲಸ ಆರಂಭಿಸಬೇಕು. ಜನರಿಗೆ ಊರುಗಳಲ್ಲಿ ಕೆಲಸ ನೀಡಿ, ಗುಳೆ ಹೋಗುವುದನ್ನು ತಪ್ಪಿಸಬೇಕು ಎಂದು ಸೂಚನೆ ನೀಡಿದರು.
ವಿಬಿ ಜಿ ರಾಮ್ ಜಿ ಯೋಜನೆಯಡಿ ರಾಜ್ಯದ್ಯಾಂತ ತಿಂಗಳಿಗೆ 1.10 ಕೋಟಿ ಮಾನವ ದಿನಗಳನ್ನು ಸೃಜಿಸಿ, ಪೂರ್ಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಈವರೆಗೂ ಕೆಲಸ ಆರಂಭಿಸಿಲ್ಲವಾದರೆ, ಗುರಿ ಪೂರ್ಣಗೊಳಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬರ ಇರುವುದರಿಂದ ಜನರಿಗೆ ಉದ್ಯೋಗದ ಅವಶ್ಯಕತೆ ಬಹಳ ಇದೆ. ಎಲ್ಲ ಜಿಲ್ಲಾ ಪಂಚಾಯತ್ ಸಿಇಒಗಳು ವಿಬಿ -ಜಿ ರಾಮ್ ಜಿ ಯೋಜನೆಯಡಿ ಕೂಡಲೇ ಜನರಿಗೆ ಕೆಲಸ ನೀಡಬೇಕು. ಈ ಬಗ್ಗೆ ತ್ವರಿತಗತಿಯಲ್ಲಿ ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಬಳ್ಳಾರಿ, ಬಾಗಲಕೋಟೆ, ಹಾವೇರಿ, ಚಾಮರಾಜನಗರ, ವಿಜಯಪುರ ಸೇರಿದಂತೆ ಮುಂತಾದ ಜಿಲ್ಲೆಗಳು ವಿಬಿ-ಜಿ ರಾಮ್ ಜಿ ಯೋಜನೆಯಡಿ ಜನರಿಗೆ ಕೆಲಸ ನೀಡುವಲ್ಲಿ ತೀರ ಹಿಂದೆ ಬಿದ್ದಿವೆ. ಬಹುತೇಕ ಆರಂಭಿಸಿಲ್ಲ. ಚಾಮರಾಜನಗರ ಜಿಲ್ಲೆಯ ಅಂಕಿ-ಅಂಶ ಗಮನಿಸಿದರೆ ಆಶ್ಚರ್ಯವಾಗುತ್ತದೆ. ಜನ ತಮಿಳುನಾಡು, ಬೆಂಗಳೂರಿಗೆ ವಲಸೆ ಹೋಗುತ್ತಿದ್ದಾರೆ. ವಿಬಿ-ಜಿ ರಾಮ್ ಜಿ ಯೋಜನೆಯಡಿ ಏನೆಲ್ಲ ಕೆಲಸಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ಸಾರ್ವಜನಿಕರಿಗೆ ತಿಳಿಸುವ ಕೆಲಸವಾಗಬೇಕು ಎಂದು ಹೇಳಿದರು.
ಬಹುತೇಕ ಜಿಲ್ಲೆಗಳಲ್ಲಿ 25 ವಾರ, 38 ವಾರ, 54 ವಾರಗಳಿಗೆ ಆಗುವಷ್ಟು ಮೇವು ಸಂಗ್ರಹವಿದೆ ಎಂದೆಲ್ಲ ಮಾಹಿತಿ ನೀಡಲಾಗುತ್ತಿದೆ. ರೈತರ ಬಳಿ ಸಂಗ್ರಹವಿರುವ ಮೇವಿನ ಬಣವೆಗಳನ್ನು ಆಧರಿಸಿ ಸರ್ಕಾರಕ್ಕೆ ಮಾಹಿತಿ ನೀಡುವುದು ಸರಿಯಲ್ಲ. ರೈತರು ಸಂಗ್ರಹಿಸಿರುವುದು ನಮಗೆ ಲಭ್ಯವಾಗುವುದಿಲ್ಲ. ನಿಮ್ಮಲ್ಲಿ ಲಭ್ಯತೆ ಇರುವುದನ್ನು ಮಾತ್ರ ತಿಳಿಸಬೇಕು. ಜಾನವಾರುಗಳಿಗೆ ತಕ್ಷಣಕ್ಕೆ ಮೇವು ಬೇಕು ಎಂದಾಗ ಒದಗಿಸುತ್ತೀರಿ ಎಂಬುದು ಮುಖ್ಯವಾಗುತ್ತದೆ ಎಂದರು. ಇದನ್ನೂ ಓದಿ: ಮೋದಿ ಮೌನ ಅಕ್ಷಮ್ಯ – ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣದ ಸ್ವತಂತ್ರ ತನಿಖೆಗೆ ರಾಹುಲ್, ಖರ್ಗೆ ಆಗ್ರಹ
