– ಸಿಎಂ ಅಧ್ಯಕ್ಷತೆಯಲ್ಲಿ ಬರ ಪರಿಸ್ಥಿತಿ ನಿರ್ವಹಣೆ ಕುರಿತು ಅಧಿಕಾರಿಗಳ ಜೊತೆ ವಿಡಿಯೋ ಸಂವಾದ
– 2,443 ಪಂಚಾಯಿತಿಗಳಲ್ಲಿ ವಿಬಿ ಜಿರಾಮ್‌ಜಿ ಕೆಲಸ ಪ್ರಾರಂಭಿಸಿಲ್ಲ ಎಂದ ಡಿಸಿಎಂ
ಬೆಂಗಳೂರು: 88 ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಶೇ.4 ರಷ್ಟು ಕುಸಿದಿದೆ ಎಂದು ಅಂಕಿ-ಅಂಶಗಳು ಹೇಳುತ್ತಿವೆ. ಮಳೆಯ ಪ್ರಮಾಣ ಕಡಿಮೆಯಾಗಿದೆ. ಜಲಾಶಯಗಳಲ್ಲಿ ನೀರಿನ ಮಟ್ಟ (Dam Water Level) ತೀರಾ ಕುಸಿದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬಿಗಡಾಯಿಸಬಹುದು. ಹಾಗಾಗಿ ಜೀವಸಂಕುಲಗಳಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ಡಿಸಿಎಂ ಹಾಗೂ ಕಂದಾಯ ಸಚಿವರಾದ ಡಾ.ಜಿ ಪರಮೇಶ್ವರ್ (G Parameshwara) ಸೂಚನೆ ನೀಡಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ‘ಬರ ಪರಿಸ್ಥಿತಿ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಕೃಷಿ, ಚಟುವಟಿಕೆ ಹಾಗೂ ಉದ್ಯೋಗ’ ವಿಷಯಗಳ ಕುರಿತು ವಿಡಿಯೋ ಸಂವಾದ (video conference) ನಡೆಯಿತು. ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ನಡೆದ ವಿಡಿಯೋ ಸಂವಾದದಲ್ಲಿ ಡಿಸಿಎಂ ಡಾ.ಜಿ ಪರಮೇಶ್ವರ್ ಅವರು ಪಾಲ್ಗೊಂಡಿದ್ದರು.

ಸಿಎಂ ಕರೆದಿರುವ ಸಭೆ ಬಹಳ ಪ್ರಾಮುಖ್ಯವಾದದ್ದು. ಕರ್ನಾಟಕದಲ್ಲಿ ಭೀಕರವಾದ ಬರಗಾಲ ನೋಡುತ್ತಿದ್ದೇವೆ. ಎಲ್‌ನೀನೋ ಬಂದಾಗಲೆಲ್ಲ ಸಮುದ್ರದಲ್ಲಿ 2 ಡಿಗ್ರಿ ಉಷ್ಣಾಂಶ ಹೆಚ್ಚಾಗುತ್ತದೆ. ರಾಜ್ಯದಲ್ಲಿಯೂ 4 ರಿಂದ 6 ಡಿಗ್ರಿ ತಾಪಮಾನ ಜಾಸ್ತಿಯಾಗಿದೆ. ಈ ಬಾರಿ ರಾಜ್ಯದಲ್ಲಿ ಶೇ. 68 ರಷ್ಟು ಮಳೆ ಕೊರತೆಯಾಗಿರುವುದು ನೋಡಬಹುದು. ಕೆಲವು ಕಡೆ 48% ರಷ್ಟು ಮಳೆ ಕೊರತೆಯಾಗಿದೆ. ಹೀಗಾಗಿ ಸುಮಾರು ತಾಲ್ಲೂಕುಗಳಲ್ಲಿ ಬರದ ತೀವ್ರತೆ ನೋಡುತ್ತಿದ್ದೇವೆ ಎಂದರು.
ಅಂತರ್ಜಲ ಮಟ್ಟ 88 ತಾಲ್ಲೂಕಿನಲ್ಲಿ-4 ರಷ್ಟು ಕುಸಿದಿದೆ ಎಂದು ಅಂಕಿ-ಅಂಶಗಳು ಹೇಳುತ್ತವೆ. ಮಳೆಯ ಪ್ರಮಾಣ ಕಡಿಮೆಯಾಗಿದೆ. ಜಲಾಶಯಗಳಲ್ಲಿ ನೀರಿನ ಮಟ್ಟ ತೀರಾ ಕುಸಿದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬಿಗಡಾಯಿಸಬಹುದು ಎಂದು ಪ್ರಸ್ತುತ ಪರಿಸ್ಥಿತಿಯ ಬಗ್ಗೆ ವಿವರಿಸಿದರು.

ಕುಡಿಯಲು ನೀರಿಲ್ಲ, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಗ್ರಾಮಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಶಾಸಕರುಗಳು ಹೊಸದಾಗಿ ಬೋರ್‌ವೆಲ್ ಕೊರೆಸುವಂತೆ ಮನವಿ ನೀಡಿದ್ದಾರೆ. ಬರ ಪರಿಸ್ಥಿತಿಯನ್ನು ಸ್ವತಃ ಪರಿಶೀಲನೆ ಮಾಡಲು ಸಿಎಂ ಅವರು ಬೆಳಗಾವಿ, ಕಲಬುರಗಿಗೆ ಬಂದಿದ್ದರು. ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ಜಲಾಶಯದ ನೀರು ಬೆಳೆಗೆ ಪೂರೈಕೆ ಆಗಬಾರದು. ಈ ಬಗ್ಗೆ ಸಿಎಂ ಅವರು ನಿರ್ದೇಶನ ಕೊಟ್ಟಿದ್ದಾರೆ. ಬಹಳ ಗಂಭೀರವಾದ ಪರಿಸ್ಥಿತಿ ಇದೆ. ನೀವೆಲ್ಲರೂ ಈ ಬಗ್ಗೆ ಸಮರ್ಥವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ವಾರಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಬೋರ್‌ವೆಲ್ ಹಾಕಿದರೆ ನೀರು ಸಿಗುತ್ತದೆ ಎಂಬ ಭರವಸೆ ಇಲ್ಲ. ಬೋರ್‌ವೆಲ್ ಕೊರೆಸಿದವರಿಗೆ ಮೋಟರ್ ಪಂಪ್, ವಿದ್ಯುತ್ ಸಂಪರ್ಕ ಕೂಡಲೇ ಕಲ್ಪಿಸಬೇಕು. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 329 ಕೋಟಿ ರೂ. ಇದೆ. ಇದೆಲ್ಲವನ್ನ ನಾವು ಸದ್ಬಳಕೆ ಮಾಡದೇ ಹೋದರೆ, ಮತ್ತಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಹಣವನ್ನು ಸಮರ್ಪಕವಾಗಿ ಬಳಸಬೇಕು ಎಂದು ನಿರ್ದೇಶಿಸಿದರು.
ಜನರು ಬಳ್ಳಾರಿ, ಕಲಬುರಗಿ, ರಾಯಚೂರು, ಯಾದಗಿರಿ, ವಿಜಯನಗರ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಗುಳೆ ಹೋಗುತ್ತಿದ್ದಾರೆ. ಜನರಿಗೆ ಉದ್ಯೋಗ ನೀಡಲು ವಿಬಿ ಜಿ ರಾಮ್ ಜಿ ಯೋಜನೆಯನ್ನು ತ್ವರಿತವಾಗಿ ಆರಂಭಿಸಬೇಕು. ವಿಜಯಪುರದಲ್ಲಿ 20 ಪಂಚಾಯತ್‌ಗಳಲ್ಲಿ ಮಾತ್ರ ಆರಂಭಿಸಿದ್ದಾರೆ. ಈ ಬಗ್ಗೆ ಎಲ್ಲ ಜಿಲ್ಲಾ ಪಂಚಾಯತ್ ಸಿಇಒಗಳು ಗಂಭೀರವಾಗಿ ಪರಿಗಣಿಸಬೇಕು ಎಂದರು.
4-5 ಜಿಲ್ಲೆಗಳನ್ನು ಹೊರತುಪಡಿಸಿ ವಿಬಿ ಜಿ ರಾಮ್ ಜಿ ಬಹುತೇಕ ಜಿಲ್ಲೆಗಳಲ್ಲಿ ಕೆಲಸ ಪ್ರಾರಂಭಿಸಿಲ್ಲ. ಸುಮಾರು 5,000 ಗ್ರಾಮ ಪಂಚಾಯಿತಿಗಳ ಪೈಕಿ, 2,443 ಪಂಚಾಯಿತಿಗಳಲ್ಲಿ ವಿಬಿ ಜಿ ರಾಮ್ ಜಿ ಕೆಲಸ ಪ್ರಾರಂಭಿಸಿಲ್ಲ. 75 ತಾಲ್ಲೂಕುಗಳಲ್ಲಿ 4 ವಾರಗಳಿಂದ ಒಣ ಹವೆ ಮುಂದುವರಿದಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ನೀಡಬೇಕು. ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲು ಹೆಚ್ಚು ಅನುಕೂಲವಾಗುತ್ತದೆ. ಗ್ರೌಂಡ್ ಟ್ರೂಥಿಂಗ್ ನಡೆಸಬೇಕು ಎಂದು ಹೇಳಿದರು.

ಮೆಕ್ಕೆಜೋಳ, ಕಬ್ಬು ಸೇರಿದಂತೆ ಮುಂತಾದ ಬೆಳೆಗಳಿಗೆ ಹೆಚ್ಚು ನೀರು ತೆಗೆದುಕೊಳ್ಳುತ್ತದೆ. ಅಂತಹ ಬೆಳೆಗಳನ್ನು ಬೆಳೆಯದಂತೆ ಕ್ರಮ ವಹಿಸಬೇಕು. ಜಾನುವಾರುಗಳಿಗೂ ತೊಂದರೆ ಆಗುತ್ತಿದೆ. ಮೇವು ನೆರೆ ರಾಜ್ಯಗಳಲ್ಲೂ ಸಿಗುತ್ತಿಲ್ಲ. ಅಲ್ಲಿಯೂ ಬರ ಪರಿಸ್ಥಿತಿ ಇದೆ. ಈ ಬಗ್ಗೆ ಪಶುಸಂಗೋಪನೆ ಇಲಾಖೆಯವರು ಗಮನಿಸಬೇಕು. ನೀರಿನ ಮೂಲ ಇರುವ ರೈತರಿಗೆ ಮೇವಿನ ಬೀಜ ವಿತರಿಸಬೇಕು. ಮೇವು ಬೆಳೆದ ರೈತರಿಂದ ಖರೀದಿಸಿ ಎಂದು ತಿಳಿಸಿದರು.
ಬರ ಪರಿಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ನೀವು ಸಹ ಹೆಚ್ಚು ಗಂಭೀರವಾಗಿ ಪರಿಗಣಿಸಿ, ಕೆಲಸ ಮಾಡಬೇಕು. 2023ರಲ್ಲಿ ಎಲ್ಲ ಜಲಾಶಯಗಳಲ್ಲಿ ನೀರು ಇತ್ತು. ಹಾಗಾಗಿ ಬರ ಪರಿಸ್ಥಿತಿ ಅಷ್ಟಾಗಿ ಕಾಣಲಿಲ್ಲ. ಈ ಬಾರಿ ಜಲಾಶಯಗಳಲ್ಲಿ ನೀರು ಇಲ್ಲ. ಬೋರ್‌ವೆಲ್ ಕೊರೆಸಲು ಟಾಸ್ಕ್‌ಫೋರ್ಸ್‌ನಲ್ಲಿ ತೀರ್ಮಾನ ಮಾಡಬೇಕು. ಪ್ರತಿವಾರ ಟಾಸ್ಕ್‌ಫೋರ್ಸ್ ಸಭೆ ನಡೆಸಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.
