ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟ (Male Mahadeshwara Hills) ಪ್ರದೇಶದಲ್ಲಿ ಚಿರತೆ ದಾಳಿಗೆ ಬಾಲಕ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿ ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಅವರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಪಾದಯಾತ್ರೆ ಮೂಲಕ ತೆರಳಿದ್ದ ಭಕ್ತರ ಮೇಲೆ ಇತ್ತೀಚೆಗೆ ಚಿರತೆಯೊಂದು ದಾಳಿ ನಡೆಸಿ ಬೆಂಗಳೂರು ಮೂಲದ ಬಾಲಕ ಮೃತಪಟ್ಟಿದ್ದನು. ಈ ಸಂಬಂಧ ವರದಿಗಳನ್ನು ಆಧರಿಸಿ ಪ್ರಕರಣ ಸಂಬಂಧ ಮರುಕ ವ್ಯಕ್ತಪಡಿಸಿರುವ ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಅವರು ಕಾವೇರಿ ವನ್ಯಧಾಮ ಹಾಗೂ ಮಹದೇಶ್ವರ ವನ್ಯಧಾಮ ವ್ಯಾಪ್ತಿಯ ನಾಲ್ವರು ಅರಣ್ಯಾಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಇದನ್ನೂ ಓದಿ: ಚಿರತೆ ದಾಳಿಗೆ ಮೃತಪಟ್ಟ ಬಾಲಕನ ಕುಟುಂಬಕ್ಕೆ 20 ಲಕ್ಷ ಪರಿಹಾರ
ಎಸಿಎಫ್‌ಗಳಾದ ಸಂದೀಪ್ ಕುಮಾರ್ ಹಾಗೂ ಮರಿಸ್ವಾಮಿ, ಆರ್‌ಎಫ್‌ಒ ವಾಗೀಶ್ ಮತ್ತು ಡಿಆರ್‌ಎಫ್‌ಒ ಬಿರಾದಾರ್ ಅವರನ್ನು ಎದುರುದಾರರಾಗಿ ಪರಿಗಣಿಸಿದೆ.ಪಾದಯಾತ್ರಿಗಳಿಗೆ ತಲಾ 200 ರೂ. ಶುಲ್ಕ ವಸೂಲಿ ಮಾಡುತ್ತಿದ್ದರೂ ಸಮರ್ಪಕ ಭದ್ರತೆ ಒದಗಿಸಲಾಗಿಲ್ಲ ಎಂಬ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ನೋಟಿಸ್ ನೀಡಲಾಗಿದೆ.
ಪಾದಯಾತ್ರೆ ಮಾರ್ಗದಲ್ಲಿ ಸುರಕ್ಷತಾ ಬೇಲಿ, ಮಾಹಿತಿ ಫಲಕ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದನ್ನು ಗಂಭೀರ ಲೋಪ ಎಂದು ಪರಿಗಣಿಸಲಾಗಿದೆ. ಸಮಸ್ಯೆಗಳು ಹಾಗೂ ಲೋಪಗಳನ್ನು ತಕ್ಷಣ ಸರಿಪಡಿಸುವಂತೆ ಸೂಚಿಸಿರುವ ಉಪ ಲೋಕಾಯುಕ್ತರು, ಕೈಗೊಂಡ ಕ್ರಮಗಳ ಕುರಿತು ನಾಲ್ಕು ವಾರಗಳೊಳಗೆ ವರದಿ ಸಲ್ಲಿಸಲು ಆದೇಶಿಸಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಜೂ. 17 ರಂದು ನಿಗದಿಪಡಿಸಲಾಗಿದೆ. ಇದನ್ನೂ ಓದಿ: ಚಿರತೆ ದಾಳಿಗೆ ಬಾಲಕ ಬಲಿ – ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಕಾರಣ: ಕುಟುಂಬಸ್ಥರ ಆರೋಪ

