ಚಾಮರಾಜನಗರ: ಕಾವೇರಿ ವನ್ಯಧಾಮದ ಮರಿಮಂಗಲ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ನಡೆದ ಗುಂಡೇಟು ಪ್ರಕರಣದಲ್ಲಿ (Chamarajanagar Encounter) ಮೂವರು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಜಿಲ್ಲಾ ಓಬಿಸಿ ಘಟಕದ ಜಿಲ್ಲಾಧ್ಯಕ್ಷ ವೆಂಕಟೇಶ್ ಅವರು ಮಹತ್ವದ ದಾಖಲೆಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B.Y.Vijayendra) ಅವರಿಗೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಹನೂರು ಬಿಜೆಪಿ (BJP) ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ತಂಡದಿಂದ ಮಾಹಿತಿ ಸಂಗ್ರಹಿಸಿದ ವೇಳೆ ಹಲವು ಮಹತ್ವದ ಅಂಶಗಳು ಹಾಗೂ ಸೂಕ್ಷ್ಮ ದಾಖಲೆಗಳು ಲಭ್ಯವಾಗಿವೆ. ಈ ದಾಖಲೆಗಳನ್ನು ಮೊದಲು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸಲ್ಲಿಸಲಾಗುವುದು. ಬಳಿಕ ದಾಖಲೆಗಳ ಆಧಾರದ ಮೇಲೆ ಪ್ರಕರಣದ ಸತ್ಯಾಸತ್ಯತೆ ಕುರಿತು ರಾಜ್ಯದ ಜನತೆಗೆ ಮಾಹಿತಿ ನೀಡಲಾಗುವುದು ಎಂದರು. ಇದನ್ನೂ ಓದಿ: ಚಾಮರಾಜನಗರ ಎನ್‌ಕೌಂಟರ್ ಕೇಸ್ – ಸೋಮವಾರ ಸರ್ಕಾರಕ್ಕೆ ವರದಿ ಸಲ್ಲಿಕೆ ಸಾಧ್ಯತೆ
ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನಡೆದ ಈ ಗುಂಡೇಟು ಪ್ರಕರಣದಲ್ಲಿ ಮೂವರು ಮೃತಪಟ್ಟಿರುವುದು ಅತ್ಯಂತ ಗಂಭೀರ ಹಾಗೂ ಆತಂಕಕಾರಿ ವಿಚಾರವಾಗಿದೆ. ಮೂವರ ಸಾವಿನ ಹಿಂದೆ ಪೂರ್ವನಿಯೋಜಿತ ಸಂಚು ನಡೆದಿದೆಯೇ ಎಂಬ ಅನುಮಾನ ಸಾರ್ವಜನಿಕರು ಹಾಗೂ ಮೃತರ ಕುಟುಂಬಸ್ಥರಲ್ಲಿ ಮೂಡಿದೆ ಎಂದು ಹೇಳಿದರು.
ಪ್ರಕರಣದ ಸತ್ಯಾಸತ್ಯತೆ ಹೊರಬರಲು ವಿಳಂಬವಾಗುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪ್ರಕರಣವನ್ನು ತಿರುಚುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಶಂಕೆಯೂ ಇದೆ. ಈ ಹಿನ್ನೆಲೆಯಲ್ಲಿ ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ಅಗತ್ಯವಾಗಿದೆ. ತಮ್ಮ ಕ್ಷೇತ್ರದ ಜನರಿಗೆ ಅನ್ಯಾಯವಾಗುತ್ತಿರುವುದನ್ನು ಗಮನಿಸಿ ಪ್ರಕರಣದ ಕುರಿತು ಸ್ವತಂತ್ರವಾಗಿ ಮಾಹಿತಿ ಸಂಗ್ರಹಿಸುವ ಪ್ರಯತ್ನ ನಡೆಸಲಾಗಿದೆ. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಸೂಕ್ಷ್ಮ ಮಾಹಿತಿಗಳು ಮತ್ತು ದಾಖಲೆಗಳು ಲಭ್ಯವಾಗಿವೆ. ಅವುಗಳನ್ನು ರಾಜ್ಯಾಧ್ಯಕ್ಷರಿಗೆ ಸಲ್ಲಿಸಿ, ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದರು. ಇದನ್ನೂ ಓದಿ: ಶೂಟೌಟ್ ಕೇಸ್: ಮರಣೋತ್ತರ ಪರೀಕ್ಷೆ ವೇಳೆ ಇಬ್ಬರು ಮೃತರ ಬಳಿ ಪ್ರೈಮರ್ ಪತ್ತೆ – ಪ್ರಾಣಿಗಳ ಬೇಟೆಗೆ ಬಂದಿದ್ದಕ್ಕೆ ಸಾಕ್ಷ್ಯ!
ಪ್ರಕರಣದ ಸಂಪೂರ್ಣ ಸತ್ಯ ಹೊರಬರಲು ಸರ್ಕಾರವು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಮೃತರ ಕುಟುಂಬಗಳಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ವೆಂಕಟೇಶ್ ಆಗ್ರಹಿಸಿದರು.
