ಚಾಮರಾಜನಗರ: ಕಾವೇರಿ ವನ್ಯಧಾಮದಲ್ಲಿ ಮೂವರ ಎನ್‌ಕೌಂಟರ್ ಪ್ರಕರಣಕ್ಕೆ (Chamarajanagara Encounter Case) ಸಂಬಂಧಿಸಿದಂತೆ ಕಾಡಿಗೆ ಹೋಗಿದ್ದು ಬೇಟೆಗಾರರ ಅಥವಾ ರೈತರ ಎಂಬ ಚರ್ಚೆ ನಡೆಯುತ್ತಿದೆ. ಈ ನಡುವೆ ಮರಣೋತ್ತರ ಪರೀಕ್ಷೆ ವೇಳೆ ಮೃತರ ಒಳ ಉಡುಪಿನಲ್ಲಿ ಪ್ರೈಮರ್ ಪತ್ತೆಯಾಗಿದ್ದು, ಬೇಟೆಗಾರರು ಅನ್ನೋದು ಮುನ್ನೆಲೆಗೆ ಬಂದಿದೆ. ಜೊತೆಗೆ ಒಟ್ಟು ನಾಲ್ವರ ಪೊಲೀಸ್ ತಂಡ ಪ್ರಕರಣದ ತನಿಖೆ ಚುರುಕುಗೊಳಿಸಿದೆ.
ಹನೂರು ತಾಲೂಕಿನ ಕಾವೇರಿ ವನ್ಯಧಾಮದಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಡೇಟಿಗೆ ಬಲಿಯಾದ ಅಂಥೋಣಿಸಾಮಿ, ಜಾನ್ ಪೀಟರ್ ಹಾಗೂ ಡೇವಿಡ್ ಕುಮಾರ್ ಬೇಟೆಯಾಡುವ ಉದ್ದೇಶದಿಂದಲೇ ಅರಣ್ಯದೊಳಗೆ ಪ್ರವೇಶ ಮಾಡಿದ್ದರು. ಈ ಕಾರಣಕ್ಕಾಗಿಯೇ ನಾಡ ಬಂದೂಕು ತೆಗೆದುಕೊಂಡು ಹೋಗಿದ್ದರು ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ. ಇದಕ್ಕೆ ಪೂರಕವಾಗಿ ಮೂವರ ಶವಗಳ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ ಅಂಥೋಣಿಸಾಮಿ ಹಾಗೂ ಪೀಟರ್ ಧರಿಸಿದ್ದ ಒಳ ಉಡುಪಿನ ಜೇಬಿನಲ್ಲಿ ನಾಡ ಬಂದೂಕಿಗೆ ಬಳಸುವ ತಲಾ 5 ಅಲ್ಯೂಮಿನಿಯಮ್ ಪ್ರೈಮರ್ ಗಳು ಪತ್ತೆಯಾಗಿವೆ. ನಾಡ ಬಂದೂಕುಗಳಲ್ಲಿ ಗನ್ ಪೌಡರ್ ಸ್ಫೋಟಿಸಲು ಬಳಸುವ ಅಲ್ಯೂಮಿನಿಯಮ್ ಕ್ಯಾಪ್ ಅನ್ನು ಪ್ರೈಮರ್ ಎನ್ನಲಾಗುತ್ತದೆ. ಟ್ರಿಗರ್ ಒತ್ತಿದಾಗ ಬಂದೂಕಿನ ನಳಿಕೆಯಲ್ಲಿ ತುಂಬಿರುವ ಸ್ಫೋಟಕಕ್ಕೆ ಕಿಡಿ ಹೊತ್ತಿಸಲು ಪ್ರೈಮರ್‌ಗಳನ್ನು ಬಳಸುತ್ತಾರೆ ಪ್ರೈಮರ್‌ಗಳನ್ನು ಇಟ್ಟುಕೊಳ್ಳುವುದಕ್ಕೂ ಅವಕಾಶವಿಲ್ಲ. ಇವುಗಳನ್ನು ಬಳಸಿ ವನ್ಯಜೀವಿಗಳನ್ನು ಬೇಟೆಯಾಡಿದರೆ ವನ್ಯಜೀವಿ ಕಾಯ್ದೆಯಡಿ ಜಾಮೀನು ರಹಿತ ಕೇಸ್ ದಾಖಲಿಸಿ 3 ರಿಂದ 7 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಇದನ್ನೂ ಓದಿ: ಹನೂರು ಎನ್‌ಕೌಂಟರ್ ಪ್ರತಿಕಾರಕ್ಕೆ 10 ಎಕರೆ ಅರಣ್ಯ ಭಸ್ಮ
ಆಗಸ್ಟ್ 15 ರಂದು ಕಾವೇರಿ ವನ್ಯಜೀವಿ ವಿಭಾಗದ ಹೊಳೆಮುರಿದಟ್ಟಿಯಲ್ಲಿ ನಡೆದ ಶೂಟೌಟ್ ಪ್ರಕರಣದ ಬಳಿಕ ಆಕ್ರೋಶಗೊಂಡಿದ್ದ ದುಷ್ಕರ್ಮಿಗಳು ಮಲೆ ಮಹದೇಶ್ವರ ಮತ್ತು ಕಾವೇರಿ ವನ್ಯಧಾಮ ವಿಭಾಗದ ಕಳ್ಳಬೇಟೆ ತಡೆ ಶಿಬಿರಗಳ ಮೇಲೆ ದಾಳಿ ನಡೆಸಿ ಜಿಲೆಟಿನ್ ಸ್ಫೋಟಿಸಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಆರೋಪಿಗಳ ಪತ್ತೆಗಾಗಿ 3 ವಿಶೇಷ ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದೆ.
ಹನೂರು ವಲಯದ ನಾಲಾಬೋಳಿ ಮತ್ತು ಸುಂಡಳ್ಳಿ ಕಳ್ಳಬೇಟೆ ತಡೆ ಶಿಬಿರಗಳಿಗೆ ದ್ವಿಚಕ್ರ ವಾಹನಗಳಲ್ಲಿ ಬಂದಿದ್ದ ಕಿಡಿಗೇಡಿಗಳು ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಂತರ ಶಿಬಿರಗಳ ಗೇಟು, ಸೋಲಾರ್ ಬೇಲಿ, ಕಿಟಕಿ, ವಿದ್ಯುತ್ ಮೀಟರ್, ಯುಪಿಎಸ್, ಬ್ಯಾಟರಿ, ಸೋಲಾರ್ ಪ್ಯಾನಲ್ ಸೇರಿದಂತೆ ಅಡುಗೆ ಸಾಮಗ್ರಿಗಳನ್ನು ನಾಶಪಡಿಸಿದ್ದಾರೆ. ಕೆಲವು ಶಿಬಿರಗಳಿಗೆ ಜಿಲೆಟಿನ್ ಇಟ್ಟು ಸ್ಫೋಟಿಸಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ತನಿಖಾ ತಂಡಗಳು ಸ್ಥಳೀಯರ ವಿಚಾರಣೆ, ಸಿಸಿಟಿವಿ ಪರಿಶೀಲನೆ ಮತ್ತು ಅರಣ್ಯ ಇಲಾಖೆ ಜೊತೆ ಜಂಟಿ ಕಾರ್ಯಾಚರಣೆ ನಡೆಸುತ್ತಿವೆ. ಕಾಡಂಚಿನ ಗ್ರಾಮಗಳಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಇದನ್ನೂ ಓದಿ: ಹನೂರು ಎನ್‌ಕೌಂಟರ್ ಕೇಸ್ – ಮೃತ ಮೂವರ ಕುಟುಂಬಗಳಿಗೆ ತಲಾ 1 ಲಕ್ಷ ರೂ. ಪರಿಹಾರ ವಿತರಣೆ
ಅಂತೋಣಿ ಸಾಮಿ ಪತ್ನಿ ದೂರಿನ ಆಧಾರದ ಮೇಲೆಯೂ ಕೊಳ್ಳೇಗಾಲ ಡಿವೈಎಸ್ಪಿ ನೇತೃತ್ವದ ತಂಡ ತನಿಖೆ ಚುರುಕುಗೊಳಿಸಿದೆ. ಅರಣ್ಯ ಸಿಬ್ಬಂದಿ ವಿರುದ್ಧ ದೂರು ದಾಖಲಾಗಿತ್ತು. ಸ್ಥಳಕ್ಕೆ ಭೇಟಿ ಕೊಟ್ಟು ಘಟನೆಯ ಇಂಚಿಂಚೂ ಮಾಹಿತಿ ಪಡೆಯುವ ಕೆಲಸ ಆಗಿದೆ. ತನಿಖಾಧಿಕಾರಿ ಮುಂದೆ ಪ್ರತ್ಯಕ್ಷ ಸಾಕ್ಷಿ ಮಹಿಮಾ ದಾಸ್ ಹೇಳಿರುವ ಅನುಸಾರ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

