Connect with us

Dakshina Kannada

ಲೋಕಸಭಾ ಚುನಾವಣೆ- ಸಂಸದ ನಳಿನ್ ಬದಲಾವಣೆಗೆ ಕೇಸರಿ ಪಡೆಯಿಂದ್ಲೇ ಒತ್ತಡ

Published

on

ಮಂಗಳೂರು: ಲೋಕಸಭಾ ಚುನಾವಣೆಗೆ ಕಸರತ್ತು ಆರಂಭಗೊಂಡಿರುವಾಗಲೇ ಕರಾವಳಿಯಲ್ಲಿ ಹಾಲಿ ಸಂಸದರ ಬದಲಾವಣೆಗೆ ಒತ್ತಡ ಕೇಳಿಬಂದಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ಗೆದ್ದು ಬಂದಿರುವ ಬಿಜೆಪಿಗೆ ಈ ಬಾರಿಯೂ ಮೋದಿ ಅಲೆಯ ಖಾತರಿ ಇದೆ. ಮತದಾರರು ಮೋದಿ ಕೈ ಹಿಡೀತಾರೆಂಬ ಭರವಸೆಯಲ್ಲೇ ಬಿಜೆಪಿ ನಾಯಕರಿದ್ದಾರೆ. ಆದರೆ, ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಬದಲಾಯಿಸಬೇಕೆಂಬ ಕೂಗು ಪಕ್ಷದ ಒಳಗೆಯೇ ಕೇಳಿಬಂದಿದೆ. ನಳಿನ್ ಬದಲು ಬೇರೊಬ್ಬ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ಬಿಜೆಪಿ ಕಾರ್ಯಕರ್ತರೇ ಒತ್ತಡ ಹೇರುತ್ತಿದ್ದಾರೆಂಬ ಮಾಹಿತಿ ಹೊರಬಿದ್ದಿದೆ.

ಪ್ರಧಾನಿ ಮೋದಿ ಬಗ್ಗೆ ಜಿಲ್ಲೆಯ ಮತದಾರರಲ್ಲಿ ಒಲವು ಇದ್ದರೂ, ಸಂಸದ ನಳಿನ್ ಕುಮಾರ್ ಬಗ್ಗೆ ಅಸಮಾಧಾನ ಇದೆ. ಅಭಿವೃದ್ಧಿ ಕೆಲಸಗಳಲ್ಲಿ ಹಿಂದೆ ಬಿದ್ದಿರುವುದು ಹಾಗೂ ಜನರ ಸಮಸ್ಯೆಗೆ ಸ್ಪಂದಿಸದಿರುವುದು ನಳಿನ್ ಮೇಲಿನ ಆರೋಪವಾಗಿದೆ. ಲೋಕಸಭೆಯಲ್ಲಿ ಕರಾವಳಿಯ ಸಮಸ್ಯೆ ಬಗ್ಗೆ ಹೇಳಿಕೊಳ್ಳಲಾಗದ ಸಂಸದನೆಂದು ಆರೋಪಿಸುವ ಮಂದಿ ಬಿಜೆಪಿಯಲ್ಲೇ ಇದ್ದಾರೆ. ಹೀಗಾಗಿ ಸಮರ್ಥ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಬೇಕೆಂಬ ಕೂಗು ಕೇಳಿಬಂದಿದೆ.

ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಈಗಾಗಲೇ ಆರ್‍ಎಸ್‍ಎಸ್ ಪ್ರಮುಖರು ಬೈಠಕ್ ನಡೆಸಿದ್ದಾರೆ. ನಳಿನ್ ಹೆಸರು ಬದಲಾದರೆ, ಬೇರೆ ಯಾರು ಅನ್ನುವ ವಿಚಾರದಲ್ಲಿ ಚಿಂತನೆ ನಡೆಸಿದ್ದಾರೆ. ಸದ್ಯಕ್ಕೆ ಪ್ರಬಲವಾಗಿ ಕೇಳಿ ಬರುತ್ತಿರುವುದು ಸತ್ಯಜಿತ್ ಸುರತ್ಕಲ್ ಹಾಗೂ ಇನ್ನೂ ಎರಡು ಮೂರು ಹೆಸರು.

ಸತ್ಯಜಿತ್ ಅವರು ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡವರು. ಅಲ್ಲದೆ ಕರಾವಳಿಯಲ್ಲಿ ಪ್ರಬಲವಾಗಿರುವ ಸಮುದಾಯಕ್ಕೆ ಸೇರಿದವರು. ಸತ್ಯಜಿತ್ ಎರಡೂ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಬಿಲ್ಲವ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹೀಗಾಗಿ ಇವರ ಪರವಾಗಿ ಈಗಾಗಲೇ ಅಭಿಮಾನಿ ಸಂಘಗಳು ಹುಟ್ಟಿಕೊಂಡಿದ್ದು, ತಮ್ಮದೇ ಶೈಲಿಯಲ್ಲಿ ಪ್ರಚಾರ ಆರಂಭಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತ ತಿಪ್ಪೇಶ್ ಹೇಳಿದ್ದಾರೆ.


ಸಂಸದ ನಳಿನ್ ಕುಮಾರ್ ಎರಡು ಬಾರಿ ಸಂಸದರಾದ್ರೂ, ಲೋಕಸಭೆಯಲ್ಲಿ ಮಿಂಚಲು ಸಾಧ್ಯವಾಗಿಲ್ಲ. ಸಚಿವರಾಗುವ ಅವಕಾಶ ಬಂದಿದ್ದರೂ ತಾನೇ ನಿರಾಕರಿಸಿದ್ದು ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದೆ. ಆದ್ರೆ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಕರ್ನಾಟಕದಲ್ಲಿ ಯಾವುದೇ ಹಾಲಿ ಸಂಸದರನ್ನು ಬದಲಾಯಿಸುವ ಬಗ್ಗೆ ಇನ್ನೂ ಸುಳಿವು ನೀಡಿಲ್ಲ.

ಹಿಂದೊಮ್ಮೆ ನಳಿನ್ ಮತ್ತು ಶೋಭಾರನ್ನು ರಾಜ್ಯ ರಾಜಕಾರಣಕ್ಕೆ ಹೋಗುವಂತೆ ತಿಳಿಸಿದ್ದರೂ ಅದು ಕಾರ್ಯಗತ ಆಗಿಲ್ಲ. ಈ ನಡುವೆ ಆರ್‍ಎಸ್‍ಎಸ್ ನಾಯಕರು ಮಾತ್ರ ಸಂಸದನ ಸ್ಥಾನಕ್ಕೆ ಸಮರ್ಥ ವ್ಯಕ್ತಿಯ ಹುಡುಕಾಟದಲ್ಲಿ ತೊಡಗಿದ್ದಾರೆ. ಹೀಗಾಗಿ ಎರಡು ಬಾರಿಯ ಸಂಸದ ನಳಿನ್ ಕುಮಾರ್ ಬದಲಿಗೆ ಯಾರು ಆ ಸ್ಥಾನವನ್ನು ತುಂಬಲಿದ್ದಾರೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.


ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *