ನವದೆಹಲಿ: 10, 20, 50 ಮುಖಬೆಲೆಯ ನೋಟು ನಿಮ್ಮ ಕೈಗೆ ಸೇರಿದಾಗ ಒಮ್ಮೆ ಪರೀಕ್ಷೆ ಮಾಡಿ. ಯಾಕೆಂದರೆ ಅದು ಖೋಟಾ ನೋಟಾಗಿರುವ(Fake Notes) ಸಾಧ್ಯತೆಯಿದೆ.
ಹೌದು. ದೇಶಾದ್ಯಂತ ನಕಲಿ ನೋಟು ಚಲಾವಣೆ ಮಾಡುವ ಜಾಲದಲ್ಲಿ ಪ್ರಮುಖ ಬದಲಾವಣೆಯಾಗಿರುವುದನ್ನು ಭಾರತೀಯ ಗುಪ್ತಚರ ಸಂಸ್ಥೆ ಪತ್ತೆ ಹಚ್ಚಿವೆ. ದಾವುದ್ ಇಬ್ರಾಹಿಂ ನೇತೃತ್ವದ ಸಂಘಟಿತ ಅಪರಾಧ ಜಾಲ ಹಾಗೂ ಪಾಕಿಸ್ತಾನದ (Pakistan) ಗುಪ್ತಚರ ಸಂಸ್ಥೆ ಐಎಸ್‌ಐ (ISI) ಬೆಂಬಲಿತ ಖೋಟಾ ನೋಟು ದಂಧೆಕೋರರು ಇದೀಗ ತಮ್ಮ ಕಾರ್ಯಾಚರಣೆಯ ತಂತ್ರವನ್ನು ಬದಲಾಯಿಸಿದ್ದಾರೆ.
ಈ ಮೊದಲು ದಂಧೆಕೋರರು ಹೆಚ್ಚಾಗಿ 200 ಮತ್ತು 500 ರೂಪಾಯಿ ಮುಖಬೆಲೆಯ ನಕಲಿ ನೋಟುಗಳನ್ನು ಮಾರುಕಟ್ಟೆಗೆ ಹರಿಬಿಡುತ್ತಿದ್ದರು. ಆದರೆ ಇತ್ತೀಚಿನ ತಿಂಗಳುಗಳಲ್ಲಿ 500 ರೂ.ನಕಲಿ ನೋಟುಗಳ ಹರಿವು ಗಣನೀಯವಾಗಿ ಕಡಿಮೆಯಾಗಿದ್ದು, ಅದರ ಬದಲಿಗೆ ಸಣ್ಣ ಮುಖಬೆಲೆಯ ನೋಟುಗಳಾದ 10, 20 ಮತ್ತು 50 ರೂ. ಖೋಟಾ ನೋಟುಗಳನ್ನು ದೇಶದ ವಿವಿಧ ಭಾಗಗಳಲ್ಲಿ ಹೆಚ್ಚಾಗಿ ಚಲಾವಣೆಗೆ ತರಲಾಗುತ್ತಿದೆ.
ಸಣ್ಣ ನೋಟುಗಳನ್ನೇ ಗುರಿಯಾಗಿಸಿಕೊಂಡಿದ್ದೇಕೆ?
ಬುದ್ಧಿವಂತಿಕೆಯಿಂದ ರೂಪಿಸಲಾದ ಈ ತಂತ್ರದ ಕುರಿತು ಗುಪ್ತಚರ ಸಂಸ್ಥೆಯ (IB) ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಸಾಮಾನ್ಯವಾಗಿ ಸಾರ್ವಜನಿಕರು 200 ಅಥವಾ 500 ರೂಪಾಯಿ ನೋಟುಗಳನ್ನು ಸ್ವೀಕರಿಸುವಾಗ ಅದನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಾರೆ. ಆದರೆ 10, 20 ಹಾಗೂ 50 ರೂಪಾಯಿಯ ಸಣ್ಣ ನೋಟುಗಳನ್ನು ಯಾರೂ ಅಷ್ಟಾಗಿ ಗಮನಿಸುವುದಿಲ್ಲ. ಸಾರ್ವಜನಿಕರ ಈ ನಿರ್ಲಕ್ಷ್ಯವನ್ನೇ ಬಂಡವಾಳ ಮಾಡಿಕೊಂಡಿರುವ ದಂಧೆಕೋರರು ದಿನನಿತ್ಯದ ಸಣ್ಣಪುಟ್ಟ ವಹಿವಾಟುಗಳ ಮೂಲಕ ಸುಲಭವಾಗಿ ನಕಲಿ ನೋಟುಗಳನ್ನು ಸಾಗಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
2027 ರ ಏಪ್ರಿಲ್ ವರೆಗೆ ಹೈ-ಅಲರ್ಟ್:
2028 ರಲ್ಲಿ ಹೊಸ ಪ್ಲಾಸ್ಟಿಕ್ ನೋಟುಗಳು ಬರುವ ಮುನ್ನವೇ ಸಾಧ್ಯವಾದಷ್ಟು ಹೆಚ್ಚಿನ ಪ್ರಮಾಣದ ಸಣ್ಣ ಮುಖಬೆಲೆಯ ಕಾಗದದ ನಕಲಿ ನೋಟುಗಳನ್ನು ಮಾರುಕಟ್ಟೆಗೆ ತಳ್ಳಲು ಐಎಸ್‌ಐ ಬೆಂಬಲಿತ ಜಾಲ ಯೋಜಿಸಿದೆ. ಹೀಗಾಗಿ ಏಪ್ರಿಲ್ 2027 ರವರೆಗಿನ ಅವಧಿ ಅತ್ಯಂತ ನಿರ್ಣಾಯಕವಾಗಿದ್ದು, ಭದ್ರತಾ ಏಜೆನ್ಸಿಗಳು ತೀವ್ರ ನಿಗಾ ವಹಿಸಿವೆ. ಅಲ್ಲದೆ ಹೊಸ ಪ್ಲಾಸ್ಟಿಕ್ ನೋಟುಗಳು ಬಂದ ನಂತರ ಈ ಜಾಲವು 50 ಮತ್ತು 100 ರೂ. ಮುಖಬೆಲೆಯ ನೋಟುಗಳತ್ತ ಗಮನ ಹರಿಸಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಇದನ್ನೂ ಓದಿ: PublicTV Explainer: ಶೀಘ್ರವೇ ಭಾರತಕ್ಕೆ ಪ್ಲಾಸ್ಟಿಕ್ ನೋಟು ಎಂಟ್ರಿ? – ಕಾಗದದ ನೋಟುಗಳ ಕಥೆ ಏನು?

2028 ರಲ್ಲಿ ಬರಲಿದೆ ಪಾಲಿಮರ್ ನೋಟ್
ಭಾರತೀಯ ರಿಸರ್ವ್ ಬ್ಯಾಂಕ್ (RBI) 2028 ರ ವೇಳೆಗೆ 10 ಮತ್ತು 20 ರೂಪಾಯಿ ಮುಖಬೆಲೆಯ ಪಾಲಿಮರ್ (ಪ್ಲಾಸ್ಟಿಕ್) ನೋಟುಗಳನ್ನು ಮಾರುಕಟ್ಟೆಗೆ ತರಲು ಯೋಜನೆ ರೂಪಿಸಿದೆ. ಈ ಪ್ಲಾಸ್ಟಿಕ್ ನೋಟುಗಳು ದೀರ್ಘ ಬಾಳಿಕೆ ಬರುವುದಲ್ಲದೆ, ಪಾರದರ್ಶಕ ವಿಂಡೋ, ಅತ್ಯಾಧುನಿಕ ಮೆಟಾಲಿಕ್ ತಂತ್ರಜ್ಞಾನ ಹಾಗೂ ಮೈಕ್ರೋ-ಆಪ್ಟಿಕ್ ಹೊಲೋಗ್ರಾಮ್‌ಗಳಂತಹ ಪ್ರಬಲ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿರಲಿವೆ. ಇವುಗಳನ್ನು ನಕಲಿ ಮಾಡುವುದು ಅತ್ಯಂತ ಕಷ್ಟಕರ.



